ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆ
ವಿಜಯನಗರ ಜಿಲ್ಲೆಯಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಜಿಲ್ಲೆಯ ಆರು ತಾಲೂಕುಗಳಲ್ಲೂ ವಿನಾಯಕನನ್ನು ಸಂಭ್ರಮದಿಂದ ಬರ ಮಾಡಿಕೊಂಡು ಭಕ್ತಿ ಮೆರೆಯಲಾಯಿತು.ಮನೆಗಳಲ್ಲಿ ಮಾತ್ರವಲ್ಲದೇ ಓಣಿಗಳಲ್ಲೂ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮನೆ, ಮನೆಗಳಲ್ಲಿ ಗಣಪತಿ ಬಪ್ಪನ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಭಕ್ತಿ ಸಮರ್ಪಿಸಲಾಯಿತು. ನಗರದಲ್ಲಿ ಚಿನ್ನಾರಿಗಳಿಂದ ಸೈಕಲ್ ಮೇಲಿನ ಗಣೇಶ ಮೂರ್ತಿ ಮೆರವಣಿಗೆ ವಿಶೇಷ ಆಕರ್ಷಣೆಯಾಗಿ ಪರಿಣಮಿಸಿತು. ವಿವಿಧ ವಿನಾಯಕ ಸಮಿತಿಗಳು ಗಣೇಶನನ್ನು ಪ್ರತಿಷ್ಠಾಪಿಸಿ ಪೆಂಡಾಲ್‌ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಸೈಕಲ್ ಮೇಲೆ ಗಣೇಶನ ಮೆರವಣಿಗೆ ಮಾಡಿಕೊಂಡು ಗಣಪತಿ ಬಪ್ಪ ಶರಣು ಘೋಷಣೆ ಮೊಳಗಿಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮಕ್ಕಳ ಗುಂಪುಗಳು ಸೈಕಲ್ ಮೇಲೆ ಚಿಕ್ಕದಾದ ಸುಂದರ ಗಣೇಶ ಮೂರ್ತಿಯನ್ನು ಹೊತ್ತು ಮೆರವಣಿಗೆ ನಡೆಸಿದ ದೃಶ್ಯವು ನೋಡಿದವರ ಮನ ಸೆಳೆಯಿತು.
ಗಣಪತಿ ಬಪ್ಪಾ ಮೋರಿಯಾ ಎಂದು ಘೋಷಣೆ ಕೂಗುತ್ತಾ ಸಾಗಿದರೇ, ಸ್ಥಳೀಯರು ಬೀದಿಯ ಬದಿಯಲ್ಲಿ ನಿಂತು ಹಾರೈಸಿದರು. ಮೆರವಣಿಗೆಯಲ್ಲಿ ಪಾಲ್ಗೊಂಡ ಮಕ್ಕಳು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಒಂದು ವಿಭಿನ್ನ ಸಂದೇಶ ನೀಡಲಾಯಿತು.“ಮಣ್ಣಿನ ಗಣಪತಿ ಮೂರ್ತಿಗಳನ್ನು ಮಾತ್ರ ಅಳವಡಿಸುವುದರಿಂದ ಪರಿಸರ ಹಾನಿ ಕಡಿಮೆಯಾಗಲಿದ್ದು, ಜಲಾಶಯಗಳು ಮಾಲಿನ್ಯದಿಂದ ತಪ್ಪಿಸಿಕೊಳ್ಳುತ್ತವೆ” ಎಂದು ಶಿಕ್ಷಕರು ಹಾಗೂ ಪೋಷಕರು ಮಕ್ಕಳಿಗೆ ತಿಳಿಸಿ ಪ್ರೋತ್ಸಾಹಿಸಿದರು.ಹಿಂದೂ ಮಹಾಗಣಪತಿ:
ನಗರದ ಹೃದಯಭಾಗವಾದ ಮೇನ್ ಬಜಾರ್ ಶ್ರೀ ವಡಕರಾಯ ತೇರು ಬೀದಿಯಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಲಾಗಿದ್ದು, 20 ಅಡಿ ಎತ್ತರದ ರಾಜ ಗಣೇಶ ಮೂರ್ತಿ ಈ ಬಾರಿ ಭಕ್ತರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ವಿಜಯನಗರ ಹಿಂದೂ ಮಹಾಗಣಪತಿ ಸೇವಾ ಟ್ರಸ್ಟ್ ವತಿಯಿಂದ ಪ್ರತಿವರ್ಷ ಆಯೋಜನೆಗೊಳ್ಳುವ ಈ ಉತ್ಸವವು ಈಗಾಗಲೇ ಸತತ 6ನೇ ವರ್ಷ ತಲುಪಿದ್ದು, ಸ್ಥಳೀಯರ ಜೊತೆಗೆ ರಾಜ್ಯದ ವಿವಿಧೆಡೆಗಳಿಂದಲೂ ಭಕ್ತರನ್ನು ಸೆಳೆಯುತ್ತಿದೆ.ಉತ್ಸವದ ಪ್ರಾರಂಭದ ದಿನವೇ ಭಕ್ತರ ಸಹಸ್ರಾರು ಜನಸಾಗರ ಹೊಸಪೇಟೆಯ ಬೀದಿಗಳಿಗೆ ಹರಿದು ಬಂದು, ಗಣೇಶನ ಮೂರ್ತಿಯ ಪ್ರತಿಷ್ಠಾಪನೆಗೆ ಸಾಕ್ಷಿಯಾದರು. ಬೃಹತ್ ಗಾತ್ರದ ಮೂರ್ತಿಗೆ ಹೂವಿನ ಅಲಂಕಾರ, ವಿದ್ಯುತ್ ದೀಪಾಲಂಕಾರ ಹಾಗೂ ಆಕರ್ಷಕ ಹಿನ್ನೆಲೆ ವಿನ್ಯಾಸ ಮತ್ತಷ್ಟು ಮೆರಗು ನೀಡಿವೆ. ಮಂಗಳಾರತಿ ಹಾಗೂ ಗಣಹೋಮ ವಿಶೇಷ ಕಾರ್ಯಕ್ರಮಗಳಲ್ಲಿ ಮಹಿಳೆಯರು, ಹಿರಿಯರು ಹಾಗೂ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರೂ ಭಕ್ತಿಭಾವದಿಂದ ಪಾಲ್ಗೊಂಡರು.
ವಿಜಯನಗರ ಎಸ್ಪಿ ಅರುಣಾಂಗ್ಷು ಗಿರಿ ಭದ್ರತೆಗೆ ಕೊರತೆಯಾಗದಂತೆ ಹೊಸಪೇಟೆ ಡಿವೈಎಸ್ಪಿ ಮಂಜುನಾಥ್ ಅವರಿಗೆ ಸೂಚನೆ ನೀಡಿದ್ದಾರೆ.ಭಕ್ತರ ಅಪಾರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್ ಇಲಾಖೆ ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಸಿದೆ. ಪ್ರಮುಖ ವೃತ್ತ, ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.