ಸಾರಾಂಶ
ಮದ್ಯ ಮಾರಾಟಕ್ಕೆ ಈಗ ಪರವಾನಗಿ ಬೇಕಿಲ್ಲವೇ ಎಂಬ ಪ್ರಶ್ನೆ ಮೂಡುತ್ತಿದೆ. ಕಾರಣವಿಷ್ಟೇ ಗೋಕಾಕ ಮತ್ತು ಮೂಡಲಗಿ ತಾಲೂಕುಗಳಲ್ಲಿನ ಕಿರಾಣಿ ಅಂಗಡಿ, ಚಹಾ ಅಂಗಡಿ ಮತ್ತು ಪಾನ್ ಬೀಡಾ ಅಂಗಡಿಗಳಲ್ಲಿ ಮರೆಯಲ್ಲಿ ಮದ್ಯ ಮಾರಾಟ ಅವ್ಯಾಹತವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಇಂತಹ ಅಕ್ರಮ ಮಾರಾಟದಿಂದಾಗಿ ಸರ್ಕಾರಕ್ಕೂ ಬರುತ್ತಿರುವ ಆದಾಯಕ್ಕೂ ''''ಅಮಲು'''' ಹಿಡಿದು ಮಲಗುವಂತಾಗಿದೆ.
ಭೀಮಶಿ ಭರಮಣ್ಣವರ
ಕನ್ನಡಪ್ರಭ ವಾರ್ತೆ ಗೋಕಾಕಮದ್ಯ ಮಾರಾಟಕ್ಕೆ ಈಗ ಪರವಾನಗಿ ಬೇಕಿಲ್ಲವೇ ಎಂಬ ಪ್ರಶ್ನೆ ಮೂಡುತ್ತಿದೆ. ಕಾರಣವಿಷ್ಟೇ ಗೋಕಾಕ ಮತ್ತು ಮೂಡಲಗಿ ತಾಲೂಕುಗಳಲ್ಲಿನ ಕಿರಾಣಿ ಅಂಗಡಿ, ಚಹಾ ಅಂಗಡಿ ಮತ್ತು ಪಾನ್ ಬೀಡಾ ಅಂಗಡಿಗಳಲ್ಲಿ ಮರೆಯಲ್ಲಿ ಮದ್ಯ ಮಾರಾಟ ಅವ್ಯಾಹತವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಇಂತಹ ಅಕ್ರಮ ಮಾರಾಟದಿಂದಾಗಿ ಸರ್ಕಾರಕ್ಕೂ ಬರುತ್ತಿರುವ ಆದಾಯಕ್ಕೂ ''''''''ಅಮಲು'''''''' ಹಿಡಿದು ಮಲಗುವಂತಾಗಿದೆ.
ಪರವಾನಗಿ ಪಡೆದಿರುವ ಬಾರ್‌ಗಳು, ರೆಸ್ಟೋರೆಂಟ್‌ಗಳು, ಮದ್ಯದಂಗಡಿಗಳಲ್ಲಿ ಮಾತ್ರ ಮದ್ಯ ಮಾರಾಟದ ಪರವಾನಗಿ ಪಡೆದು ಮಾರಲು ಅವಕಾಶವಿದೆ. ಆದರೆ, ಇವೆರಡೂ ತಾಲೂಕಿನ ಬಹುತೇಕ ಪ್ರದೇಶಗಳಲ್ಲಿ ಅಕ್ರಮ ಮದ್ಯ ವಾಸನೆ ಬರುತ್ತಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಗೋಕಾಕ, ಘಟಪ್ರಭಾ, ಮೂಡಲಗಿ, ಸಂಗನಕೇರಿ ಸೇರಿದಂತೆ ಇತರೆ ಪ್ರತಿಷ್ಠಿತ ಮದ್ಯಮಾರಾಟಗಾರರು ತಮ್ಮ ಬಾರ್ ಮತ್ತು ರೆಸ್ಟೋರಂಟ್, ಬಾರ್ ಹಾಗೂ ಎಂಎಸ್‌ಐಎಲ್ ಮದ್ಯ ಮಳಿಗೆಗಳ ಮೂಲಕ ಗ್ರಾಮೀಣ ಭಾಗದಲ್ಲಿರುವ ಇಂತಹ ಚಿಲ್ಲರೆ ಅಂಗಡಿಗಳಿಗೆ ಅಕ್ರಮವಾಗಿ ಮಾರುತ್ತಾರೆ. ಅದು ಹೋಲ್‌ಸೇಲ್ ದರದಲ್ಲಿ. ಇಂತಹ ಮದ್ಯವನ್ನು ಬೈಕ್, ಕಾರ್ ಮತ್ತು ಬಸ್‌ಗಳ ಮೂಲಕ ಸರಬರಾಜು ಮಾಡುತ್ತಿರುವ ಆರೋಪ ಕೂಡ ಕೇಳಿಬಂದಿದೆ. ಆದೆ, ಇದನ್ನು ಸೂಕ್ತವಾಗಿ ಬಂದೋಬಸ್ತ್ ಮಾಡಬೇಕಿದ್ದ ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ಜಾಣ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.ಅಕ್ರಮ ಮದ್ಯ ಮಾರಾಟ ಮಾಡಲು ಪ್ರೇರೇಪಿಸಲು ಪ್ರತಿಷ್ಠಿತ ಮದ್ಯ ಮಾರಾಟಗಾರರು ಉದ್ರಿ (ಸಾಲ) ರೂಪದಲ್ಲಿ ಎರಡ್ಮೂರು ಬಾಕ್ಸ್ ಮದ್ಯವನ್ನು ನೀಡಿ ಗ್ರಾಮೀಣ ಭಾಗದ ಬಡ ಕುಟುಂಬಗಳ ಕಣ್ಣೀರಿಗೆ ಗುರಿಯಾಗಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಇದರಿಂದ ಅಕ್ರಮ ಮದ್ಯದ ವಾಸನೆ ಜಾಡು ಮತ್ತಷ್ಟು ಪಸರಿಸುವುದನ್ನು ಅಲ್ಲಗಳೆಯುವಂತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.ಕಣ್ಣೀರಲ್ಲಿ ಕೈತೊಳೆಯುತ್ತಿರುವ ಕುಟುಂಬಗಳು:ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಬಡ ಕುಟುಂಬಕ್ಕೆ ಆಸರೆಯಾದ ಜಮೀನುಗಳು ಸಹ ಕುಡಿತದ ಚಟದಿಂದ ಮಾರಾಟವಾಗಿರುವುದನ್ನು ಹಲವರು ಒಪ್ಪಿಕೊಂಡಿದ್ದಾರೆ. ಗಂಡ ಕುಡಿದು ಬಂದು ಮನೆಯಲ್ಲಿ ಪತ್ನಿ, ಕುಟುಂಬ ಸದಸ್ಯರನ್ನು ಪೀಡಿಸಿ ಹಣಕ್ಕೆ ಬೇಡಿಕೆ ಇಡುತ್ತಿರುವುದು ಸರ್ವೆಸಾಮಾನ್ಯವಾಗಿದೆ. ಇದರಿಂದಾಗಿಯೇ ಹಲವಾರು ಅಪರಾಧಿಕ ಚಟುವಟಿಕೆಗಳು ನಡೆದು ಹೋಗಿವೆ. ಆದರೆ, ಅಬಕಾರಿ ಇಲಾಖೆ ಇಂತಹ ಮದ್ಯ ಮಾರಾಟ ಮಾಡಲು ಅನುಮತಿಯನ್ನು ಪರೋಕ್ಷವಾಗಿ ನೀಡಿದರೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಗೋಕಾಕ ಹಾಗೂ ಮೂಡಲಗಿ ತಾಲೂಕಿನ ವೈನ್ ಶಾಪ್, ಬಾರ್, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ನಿಗದಿತ ಬೆಲೆಗಿಂತ ಹೆಚ್ಚಿಗೆ ಹಣ ವಸೂಲಿ ನಡೆಯುತ್ತಿರುವ ಆರೋಪ ಕೂಡ ಕೇಳಿಬರುತ್ತಿದೆ. ಮನೆಯ ಯಜಮಾನ ದುಡಿದು ಮನೆಯನ್ನು ಮುನ್ನಡೆಸುವನು. ಅಂತಹದ್ದರಲ್ಲಿ ಕುಡಿತದ ಚಟಕ್ಕೆ ದಾಸನಾಗಿ ಬರುವ ಕೂಲಿಯ ಹಣವನ್ನು ಕುಡಿತಕ್ಕೆ ಬಳಸುತ್ತಿರುವುದರಿಂದ ನಾವು ತುತ್ತು ಅನ್ನ ಹಾಗೂ ಗಂಜಿಗೂ ಪರದಾಡುವ ಪರಿಸ್ಥಿತಿ ಎದುರಾಗಿದೆ.- ಹೆಸರು ಹೇಳದ ಸಂತ್ರಸ್ತ ಮಹಿಳೆ.
ಕಳೆದ ಹಲವಾರು ವರ್ಷಗಳಿಂದ ಈ ಅಕ್ರಮ ಮದ್ಯ ಮಾರಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಸಂಬಂಧಿಸಿದ ಅಬಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಯಾವುದೇ ಪ್ರಯೋಜನವಿಲ್ಲ. ಸದ್ಯ ಗೋಕಾಕ ಅಬಕಾರಿ ಇಲಾಖೆಯಲ್ಲಿರುವ ಮಹಿಳಾ ಅಧಿಕಾರಿಯವರು ಸಾರ್ವಜನಿಕರ ಕರೆ ಕೂಡ ಸ್ವೀಕರಿಸುವುದಿಲ್ಲ. ಇಂತಹ ಅಧಿಕಾರಿಗಳಿಂದ ನಾವು ಏನು ನಿರೀಕ್ಷಿಸಲು ಸಾಧ್ಯ. ಕೂಡಲೇ ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.
-ಯೂನುಸ್ ನದಾಫ, ಕರ್ನಾಟಕ ನವ ನಿರ್ಮಾಣ ಸೇನೆ ತಾಲೂಕಾಧ್ಯಕ್ಷ.ರು.