ಕನ್ನಡಪ್ರಭ ವಾರ್ತೆ ಗೋಕಾಕ

ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಗುಬ್ಬಲಗುಡ್ಡ ಮಠದ ಸ್ವಾಮೀಜಿ ಅವಿರತವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಉತ್ತಮ ಕಾರ್ಯಗಳನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ ಎಂದು ಬೆಮುಲ್ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಇಲ್ಲಿನ ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠದ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಒಳ್ಳೆಯವರನ್ನು ಬೆಂಬಲಿಸಿ. ಆದರೆ, ಒಳ್ಳೆಯ ಕೆಲಸಗಳನ್ನು ಮಾಡಲು ಹೊರಟಿರುವ ಶ್ರೀಗಳ ಕಾಲುಗಳನ್ನು ಜಗ್ಗುವ ಕೆಲಸಗಳನ್ನು ಮಾತ್ರ ಮಾಡಬೇಡಿ. ದೇಶದಲ್ಲಿ ಅನೇಕ ಜಾತಿ-ಧರ್ಮ, ಮಠ-ಮಾನ್ಯಗಳಿವೆ. ಸಾಧು-ಸಂತರು, ಮಹಾಪುರುಷರು ಇರುವುದರಿಂದಲೇ ನಾವೆಲ್ಲರೂ ಪಾವನರಾಗಿದ್ದೇವೆ. ದೇವಸ್ಥಾನಕ್ಕೆ ಹೋಗಿ ದೇವರಿಗೆ ಶಿರಬಾಗಿ ನಮಸ್ಕರಿಸುತ್ತೇವೆ. ನಾವು ತಂದೆ, ತಾಯಿಗಳಿಗೆ ಕೊಡುವ ಗೌರವ ಬೇರೆ ದೇಶಗಳಲ್ಲಿ ಸಿಗುವುದಿಲ್ಲ. ಭಾರತೀಯ ಸಂಸ್ಕೃತಿ, ಪರಂಪರೆಯು ಇಡೀ ಪ್ರಪಂಚಕ್ಕೆ ಮಾದರಿಯಾಗಿದ್ದು, ಆಚಾರ-ವಿಚಾರಗಳಲ್ಲಿ ಭಾರತ ಹೆಸರಾಗಿದೆ ಎಂದು ಬಣ್ಣಿಸಿದರು.

ರಸಾಯನಿಕದಿಂದ ನಮ್ಮ ದೇಹಕ್ಕೆ ನಾವೇ ಕಂಟಕಗಳನ್ನು ಆಹ್ವಾನಿಸುತ್ತಿದ್ದೇವೆ. ದಿನನಿತ್ಯದ ಜೀವನದಲ್ಲಿ ಆಹಾರ ಶೈಲಿಯು ಬದಲಾಗಬೇಕಿದೆ. ಪ್ರತಿಯೊಂದರಲ್ಲೂ ರಸಾಯನಿಕ ವಸ್ತುಗಳು ಬೆರೆಯುತ್ತಿರುವುದರಿಂದ ಜೀವಕ್ಕೆ ಸಂಚಕಾರ ಬರುತ್ತಲಿದೆ. ನಮ್ಮ ದುಡಿಮೆಯ ಅರ್ಧದಷ್ಟು ಹಣವನ್ನು ಆಸ್ಪತ್ರೆಗಳಿಗೆ ನೀಡುತ್ತಿದ್ದೇವೆ. ಹಳೆಯ ತಲೆಮಾರಿನ ವ್ಯಕ್ತಿಗಳಿಗೆ 60-70 ವರ್ಷಗಳಾದರೂ ಬಿಪಿ, ಸಕ್ಕರೆ ಕಾಯಿಲೆ ಬರುತ್ತಿರಲಿಲ್ಲ. ಆದರೆ, ಈಗಿನ‌ ತಲೆಮಾರಿನ ಯುವಕರಿಗೂ ಸಹ ಬಿಪಿ, ಸಕ್ಕರೆ ಕಾಯಿಲೆ ಬರುತ್ತಿದೆ. ಪ್ರತಿಯೊಂದರಲ್ಲೂ ರಸಾಯನಿಕ ಗೊಬ್ಬರ ಮಿಶ್ರಣವಾಗುವುದರಿಂದ ಅನೇಕ ರೋಗಗಳು ಬರುತ್ತಿವೆ. ರೈತರ ಬೆಳೆಗಳಲ್ಲಿ ಸಹ ರಸಾಯನಿಕ ಗೊಬ್ಬರ ಕಂಡು ಬರುತ್ತಿದೆ. ಆಧುನಿಕ ಶೈಲಿ ಎಂದುಕೊಂಡು ಒಕ್ಕಲುತನವನ್ನು ನಾವು ಮರೆತಿದ್ದೇವೆ. ಬೆಳೆ ಎಂದರೆ ರೈತರು ಕೇವಲ ಕಬ್ಬು ಅಂದುಕೊಂಡಿದ್ದಾರೆ. ಆದರೆ, ಕಬ್ಬಿನೊಂದಿಗೆ ಇನ್ನಿತರ ಕೃಷಿ ಬೆಳೆಗಳನ್ನು ಬೆಳೆಸಬೇಕು. ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡುವುದರಿಂದ ರೈತರ ಆರ್ಥಿಕಾಭಿವೃದ್ಧಿ ಹೆಚ್ಚಳವಾಗುತ್ತದೆ. ರೈತರು ಬೆಳೆದ ಬೆಳೆಗಳಿಗೆ ಹೆಚ್ಚಿನ ಬೆಂಬಲ ಬೆಲೆ ನೀಡಿದರೆ ಅವರ ಜೀವನಮಟ್ಟ ಸುಧಾರಿಸಲಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರಕಾರ ರೈತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದು ವಿನಂತಿಸಿದರು.

ಗುಬ್ಬಲಗುಡ್ಡ ಮಠವು ಧಾರ್ಮಿಕ ವಾತಾವರಣ ನಿರ್ಮಿಸುತ್ತಿದೆ. ಶ್ರೀಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಮಠದ ಅಭಿವೃದ್ಧಿಗಾಗಿ ಹಲವು ನೂತನ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ನಾನು ಕೂಡ ಶ್ರೀಮಠದ ಪ್ರಗತಿಗೆ ಶಕ್ತಿ ಮೀರಿ ಆರ್ಥಿಕ ಸಹಾಯ ಮಾಡುತ್ತೇನೆ ಎಂದು ವಾಗ್ದಾನ ಮಾಡಿದರು.


ಶ್ರೀಮಠದಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಪೂಜ್ಯರು ಪುಷ್ಪಾರ್ಪಣೆ ಮಾಡಿ ಗೌರವಿಸಿದರು.

ಗುಬ್ಬಲಗುಡ್ಡ ಮಠದ ಪೀಠಾಧಿಪತಿ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ತಿಪಟೂರಿನ ಡಾ.ರುದ್ರಮುನಿ ಸ್ವಾಮೀಜಿ, ಮುರುಘರಾಜೇಂದ್ರ ಸ್ವಾಮೀಜಿ, ಹತ್ತರಗಿಯ ಗುರುಸಿದ್ಧ ಸ್ವಾಮೀಜಿ, ಅಂಕಲಗಿ- ಕುಂದರಗಿ ಮಠದ ಡಾ.ಅಮರ ಸಿದ್ಧೇಶ್ವರ ಸ್ವಾಮೀಜಿ, ಬಸವನ ಬಾಗೇವಾಡಿಯ ಸಿದ್ಧಲಿಂಗ ಸ್ವಾಮೀಜಿ, ನರಗುಂದದ ಶಿವಕುಮಾರ ಸ್ವಾಮೀಜಿ, ಅರಳಿಕಟ್ಟಿಯ ಶಿವಮೂರ್ತಿ ಸ್ವಾಮೀಜಿ, ಕಲ್ಬುರ್ಗಿಯ ಚರಲಿಂಗ ಸ್ವಾಮೀಜಿ, ಹೊಳಲಿನ ಚನ್ನಬಸವ ದೇವರು, ಶಿರಾಳಕೊಪ್ಪದ ವೀರಬಸವ ದೇವರು, ಚಿಂಚಣಿಯ ಶಿವಪ್ರಸಾದ ದೇವರು, ಮೆಳಕುಂದದ ಶಶಿಕುಮಾರ ದೇವರು‌ ಹಾಜರಿದ್ದರು.

ಕಾರ್ಯಕ್ರಮದ ನಂತರ ಜೀ ವಾಹಿನಿ ಸರಿಗಮಪ ಖ್ಯಾತಿಯ ಜ್ಞಾನೇಶ್ವರ ಮಡಿವಾಳ ಅವರು ಸಂಗೀತ ಕಾರ್ಯಕ್ರಮ ಜನಮನ ಸೂರೆಗೊಂಡಿತು.