ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಗಂಡ ಹೆಂಡತಿಯ ಜಗಳ ಬಿಡಿಸಲು ಬಂದ ಅತ್ತೆಯನ್ನೇ ಅಳಿಯನೊಬ್ಬ ಭೀಕರವಾಗಿ ಕೊಲೆ ಮಾಡಿ ಬಳಿಕ ಶವವನ್ನು ಕೆನಾಲ್‌ಗೆ ಎಸೆದಿರುವ ಘಟನೆ ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ನಡೆದಿದೆ. ಶಿರಶ್ಯಾಡ ಗ್ರಾಮದ ಗೌರಾಬಾಯಿ ಈರಣ್ಣ ನರಳಿ(65) ಕೊಲೆಯಾಗಿರುವ ಮಹಿಳೆ. ಭೀಮಪ್ಪ ಗುಗ್ಗರಿ (ಪಡಸಲಗಿ) ಅತ್ತೆ ಹತ್ಯೆ ಮಾಡಿರುವ ಆರೋಪಿ. ಗೌರಾಬಾಯಿ ಪುತ್ರಿ ದೇವಕಿಯನ್ನು ಭೀಮಪ್ಪ ಮದುವೆಯಾಗಿದ್ದ. ನಿರಂತರ ಮದ್ಯ ಸೇವನೆ ಸಂಬಂಧ ಪತಿ-ಪತ್ನಿ ನಡುವೆ ಜಗಳ ನಡೆದಿತ್ತು.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಗಂಡ ಹೆಂಡತಿಯ ಜಗಳ ಬಿಡಿಸಲು ಬಂದ ಅತ್ತೆಯನ್ನೇ ಅಳಿಯನೊಬ್ಬ ಭೀಕರವಾಗಿ ಕೊಲೆ ಮಾಡಿ ಬಳಿಕ ಶವವನ್ನು ಕೆನಾಲ್‌ಗೆ ಎಸೆದಿರುವ ಘಟನೆ ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ನಡೆದಿದೆ. ಶಿರಶ್ಯಾಡ ಗ್ರಾಮದ ಗೌರಾಬಾಯಿ ಈರಣ್ಣ ನರಳಿ(65) ಕೊಲೆಯಾಗಿರುವ ಮಹಿಳೆ. ಭೀಮಪ್ಪ ಗುಗ್ಗರಿ (ಪಡಸಲಗಿ) ಅತ್ತೆ ಹತ್ಯೆ ಮಾಡಿರುವ ಆರೋಪಿ. ಗೌರಾಬಾಯಿ ಪುತ್ರಿ ದೇವಕಿಯನ್ನು ಭೀಮಪ್ಪ ಮದುವೆಯಾಗಿದ್ದ. ನಿರಂತರ ಮದ್ಯ ಸೇವನೆ ಸಂಬಂಧ ಪತಿ-ಪತ್ನಿ ನಡುವೆ ಜಗಳ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅತ್ತೆ ಗೌರಾಬಾಯಿ ಇಬ್ಬರಿಗೂ ತಿಳಿವಳಿಕೆ ಹೇಳಲು ಮಂಗಳವಾರ ಬಂದಿದ್ದರು. ಆಗ ಕುಡಿದ ಮತ್ತಿನಲ್ಲಿ ಸಿಟ್ಟಿಗೆದ್ದು ದೊಣ್ಣೆಯಿಂದ ಆಕೆಯನ್ನು ಅಳಿಯ ಭೀಮಪ್ಪ ಹತ್ಯೆ ಮಾಡಿದ್ದಾನೆ. ಬಳಿಕ, ಶವವನ್ನು ಚೀಲದಲ್ಲಿ ಕಟ್ಟಿ ಗ್ರಾಮದ ಬಳಿಯಿರುವ ಕೆನಾಲ್‌ಗೆ ಬಿಸಾಕಿದ್ದಾನೆ. ಅಲ್ಲದೇ, ವಿಷಯವನ್ನು ಯಾರಿಗೂ ಹೇಳದಂತೆ ಆಕೆಯ ಪತ್ನಿಗೆ ಜೀವ ಬೆದರಿಕೆ ಹಾಕಿದ್ದ. ಆದರೂ, ಹೆಂಡತಿ ದೇವಕಿ ದೇವರ ಹಿಪ್ಪರಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ನಾಲೆಯಲ್ಲಿ ಗೌರಾಬಾಯಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಶೋಧ ನಡೆಸಿದ್ದರು. ಬುಧವಾರ ಮಧ್ಯಾಹ್ನ ಶವ ಪತ್ತೆಯಾಗಿದ್ದು, ಹೊರತೆಗೆಯಲಾಗಿದೆ.ಬಳಿಕ ಗ್ರಾಮಕ್ಕೆ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ಶಂಕರ ಮರಿಹಾಳ, ಡಿವೈಎಸ್ಪಿ ಜಿ.ಎಚ್.ತಳಕಟ್ಟಿ, ತಹಸೀಲ್ದಾರ್ ಪ್ರಕಾಶ ಸಿಂದಗಿ, ಪಿಎಸ್ಐ ಬಸವರಾಜ ತಿಪ್ಪರಡ್ಡಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು