ಸಾರಾಂಶ
ಶಿವಮೊಗ್ಗ : ಮಾಜಿ ಸಚಿವ, ನಟ ಬಿ ಸಿ ಪಾಟೀಲ್ಯ ಅಳಿಯ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬಿ ಸಿ ಪಾಟೀಲ್ ದೊಡ್ಡ ಮಗಳ ಗಂಡ ಪ್ರತಾಪ್ ಕುಮಾರ್ (41) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಅರಕೆರೆ ಸಮೀಪದ ಫಾರೆಸ್ಟ್ ಸಮೀಪ ಕಾರು ನಿಲ್ಲಿಸಿ ಕಾರಿನಲ್ಲಿ ವಿಷ ಸೇವಿಸಿದ್ದಾರೆ. ವಿಷ ಸೇವನೆ ಮಾಡಿದ್ದು ವಿಷಯ ತಳಿದ ತಕ್ಷಣ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಯ್ತು. ಆದರೆ ಆಸ್ಪತ್ರೆಯಲ್ಲಿ ಮೃತಪಟ್ಟರು.
ನಾನು ವಿಷ ಸೇವಿಸುವುದಾಗಿ ಮನೆಯವರಿಗೆ ಪೋನ್ ಮಾಡಿ ಮನೆಯವರಿಗೆ ಪ್ರತಾಪ್ ಕುಮಾರ್ ಹೇಳಿದ್ದರು. 3.30 ರ ಸುಮಾರಿಗೆ ಕಾರಿನಲ್ಲಿ ವಿಷ ಸೇವನೆ ಮಾಡಿದ್ದರು. ವಿಷಯ ತಿಳಿದ ತಕ್ಷಣ ಪೊಲೀಸರು ಹೊನ್ನಾಳಿ ಆಸ್ಪತ್ರೆಗೆ ದಾಖಲು ಮಾಡಿದರು. ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಯ್ತು. ಆದರೆ ಅಷ್ಟರಲ್ಲಾಗಲೇ ಅವರ ಸ್ಥಿತಿ ಗಂಭೀರವಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.
ಮಕ್ಕಳಾಗಿರಲಿಲ್ಲ. ಆ ಕುರಿತು ಪ್ರತಾಪನಿಗೆ ಕೊರಗಿತ್ತು.
ಬೆಳಗ್ಗೆ ಚನ್ನಗಿರಿಗೆ ಹೋಗಿ ಬರುತ್ತೇನೆಂದು ಪ್ರತಾಪ್ ಕುಮಾರ್ ಹೇಳಿದ್ದ. ಆಯ್ತಪ್ಪ ಹೋಗಿ ಬಾ ಎಂದಿದ್ದೆ. ಆತ ನನಗೆ ಕೇವಲ ಅಳಿಯ ಅಷ್ಟೇ ಅಲ್ಲ, ಮಗ ಕೂಡ ಆಗಿದ್ದ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಶಿವಮೊಗ್ಗದಲ್ಲಿ ದುಃಖದ ನಡುವೆಯೇ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, 2008ರಲ್ಲಿ ನನ್ನ ಮೊದಲನೆಯ ಮಗಳು ಸೌಮ್ಯಳೊಂದಿಗೆ ಆತನ ಮದುವೆ ಆಗಿತ್ತು. ಮದುವೆ ನಂತರ ನನ್ನ ಜೊತೆಯಲ್ಲೇ ಇದ್ದು, ಮನೆ ಜವಾಬ್ದಾರಿ ನೋಡಿಕೊಳ್ಳುತ್ತಿದ್ದ. ಆತ ಯಾಕೆ ಈ ರೀತಿ ಮಾಡಿಕೊಂಡ ಎಂಬುದೇ ಗೊತ್ತಾಗುತ್ತಿಲ್ಲ ಎಂದರು.
ಮದುವೆಯಾಗಿ 16 ವರ್ಷವಾಗಿದ್ದರೂ ಮಕ್ಕಳಾಗಿರಲಿಲ್ಲ. ಆ ಕುರಿತು ಪ್ರತಾಪನಿಗೆ ಕೊರಗಿತ್ತು. ಹೀಗಾಗಿ ಸೆರೋಗೆಸಿ ಮೂಲಕ ಮಕ್ಕಳು ಪಡೆಯಲು ದಂಪತಿ ನಿರ್ಧರಿಸಿದ್ದರು. ಈ ಸಂಬಂಧ ಕೋರ್ಟ್ ಅನುಮತಿ ಕೇಳಲಾಗಿತ್ತು. ಈ ನಡುವೆ ಪ್ರತಾಪ್ ಮದ್ಯ ವ್ಯಸನಕ್ಕೆ ತುತ್ತಾಗಿದ್ದ. ಇದರಿಂದ ಕಿಡ್ನಿ, ಲಿವರ್ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಬೆಂಗಳೂರಿನಲ್ಲಿರುವ ಮದ್ಯವ್ಯಸನ ಮುಕ್ತ ಕೇಂದ್ರಕ್ಕೆ ಆತನನ್ನು ದಾಖಲಿಸಿದ್ದೆವು. ಎರಡು ತಿಂಗಳು ಚಿಕಿತ್ಸೆ ಪಡೆದ ಬಳಿಕ ಆತನ ದೈಹಿಕ ಆರೋಗ್ಯ ಸುಧಾರಿಸಿತ್ತು. ಆದರೆ, ಆತ ಅಲ್ಲಿಂದ ಬಂದ ನಂತರ ಮತ್ತೆ ಮದ್ಯಪಾನ ಮಾಡಲು ಆರಂಭಿಸಿದ್ದ ತಿಳಿದು ಬಂದಿತ್ತು ಎಂದು ಅವರು ಬಿ.ಸಿ.ಪಾಟೀಲ ತಿಳಿಸಿದರು.
ಘಟನೆ ಹೇಗಾಯಿತು?: ಪ್ರತಾಪ್ ಆತ್ಮಹತ್ಯೆ ಕುರಿತು ಬಿ.ಸಿ.ಪಾಟೀಲ್ ಅವರು ನೀಡಿದ ಮಾಹಿತಿಯಂತೆ, ಸೋಮವಾರ ಬೆಳಗ್ಗೆ ಪ್ರತಾಪ್ ಕುಮಾರ್ ಹುಟ್ಟೂರು ಚನ್ನಗಿರಿ ತಾಲೂಕು ಕತ್ತಲಗೆರೆಗೆ ಹೋಗಿ ಬರುವುದಾಗಿ ಹೇಳಿ ಹೊರಟ್ಟಿದ್ದ. ಮಧ್ಯಾಹ್ನ 1.45ಕ್ಕೆ ಪ್ರತಾಪ್ ಸಹೋದರ ಬಿ.ಸಿ.ಪಾಟೀಲ್‌ಗೆ ಕರೆ ಮಾಡಿ ಪ್ರತಾಪ ಎಲ್ಲಿದ್ದಾನೆ ಎಂದು ಕೇಳಿದರು. ಬಳಿಕ ಕರೆ ಮಾಡಿ ವಿಷ ತೆಗೆದುಕೊಂಡಿದ್ದಾನೆ ಎಂಬ ಸುದ್ದಿ ಇದೆ, ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ತಿಳಿಸಿದರು. ತಕ್ಷಣ ಬಿ.ಸಿ.ಪಾಟೀಲರು ಪೊಲೀಸರಿಗೆ ಕರೆ ಮಾಡಿ ಫೋನ್ ಟ್ರ್ಯಾಕ್ ಮಾಡಿ ಸ್ಥಳ ಪತ್ತೆ ಹಚ್ಚುವಂತೆ ಕೋರಿದರು. ಪತ್ತೆ ಹಚ್ಚಿದ ಪೊಲೀಸರು ಸ್ಥಳದ ಮಾಹಿತಿ ನೀಡಿದರು. ಬೆನ್ನಲ್ಲೇ ಪ್ರತಾಪ್ ಗೆ ಪಾಟೀಲ್ ಕರೆ ಮಾಡಿದಾಗ ಪ್ರತಾಪ್ ಕರೆ ಸ್ವೀಕರಿಸಿದರಾದರೂ ಆತ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ನಿತ್ರಾಣಗೊಂಡಿದ್ದನಲ್ಲದೆ, ವಾಂತಿ ಮಾಡುತ್ತಿರುವುದು ಗೊತ್ತಾಗಿದೆ. ಎಲ್ಲಿದ್ದಿ ಎಂದು ಪದೇ ಪದೆ ಪ್ರಶ್ನಿಸಿದಾಗ ಮಲೆಬೆನ್ನೂರು ರಸ್ತೆಯಲ್ಲಿ ಎಂದು ಅಸ್ಪಷ್ಟವಾಗಿ ತಿಳಿಸಿದ್ದಾನೆ.
ಕೂಡಲೇ ಎಲ್ಲರಿಗೂ ಪ್ರತಾಪ್ ಇರುವ ಜಾಗ ತಿಳಿಸಲಾಯಿತು. ಇದಾದ ಸ್ವಲ್ಪ ಹೊತ್ತಿನ ಬಳಿಕ ಆತನ ಸಹೋದರ ಪ್ರಭು ಬಿ.ಸಿ.ಪಾಟೀಲ್‌ಗೆ ಕರೆ ಮಾಡಿ ಪ್ರತಾಪ್ ಸಿಕ್ಕಿದ್ದಾನೆ. ಆತನನ್ನು ಹೊನ್ನಾಳಿ ಆಸ್ಪತ್ರೆಗೆ ದಾಖಲಿಸಿದ್ದಾಗಿ ತಿಳಿಸಿದ್ದಾನೆ. ನಂತರ ಪ್ರತಾಪ್ ನನ್ನು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾನೆ. ಆದರೆ 10 ಕಿ.ಮೀ. ಕ್ರಮಿಸುವ ವೇಳೆಗೆ ಪ್ರಭು ಮತ್ತೆ ಕರೆ ಮಾಡಿ ಪ್ರತಾಪ್ ಮೃತಪಟ್ಟ ಸುದ್ದಿ ತಿಳಿಸಿದ್ದಾನೆ.