ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಶಿಧರ (58 ವರ್ಷ) ಎಂಬುವವರನ್ನ ಮಗನೇ ಹತ್ಯೆ ಮಾಡಿದ್ದು, ನಂತರ ಹೃದಯಾಘಾತದಿಂದ ಪಟ್ಟಿದ್ದಾರೆ ಎಂದು ನಂಬಿಸಲು ಮುಂದಾಗಿ ತಾಯಿ ಹಾಗೂ ಗ್ರಾಮಸ್ಥರ ಹೇಳಿಕೆಯಿಂದ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ 8 ಗಂಟೆಯ ಸುಮಾರಿನಲ್ಲಿ ಶಶಿಧರ ಎಂಬುವವರಿಗೆ ಹೃದಯಾಘಾತವಾಗಿದೆ ಎಂದು ಕುಟುಂಬಸ್ಥರು ಚಿಕಿತ್ಸೆಗಾಗಿ ಅರೇಹಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ತಪಾಸಣೆ ನಡೆಸಿದ ವೈಧ್ಯಾಧಿಕಾರಿ ಶಶಿಧರ್ ಮರಣಹೊಂದಿರುವುದನ್ನು ದೃಢಪಡಿಸಿದ್ದಾರೆ. ಇದಾದ ಬಳಿಕ ಮೃತ ದೇಹವನ್ನು ಅಂತ್ಯ ಸಂಸ್ಕಾರಕ್ಕಾಗಿ ಸ್ವಗೃಹಕ್ಕೆ ತರಲಾಗಿತ್ತು.
ಹತ್ಯೆಯಾಗಿದೆ ಎನ್ನಲಾದ ಮನೆಯಲ್ಲಿ ಕೆಲ ಹೊತ್ತಿನ ಹಿಂದೆ ಜಗಳವಾಡುತ್ತಿರುವುದು ಅಕ್ಕಪಕ್ಕದ ಮನೆಯವರು ಹಾಗೂ ಗ್ರಾಮದ ಮುಖಂಡರ ಗಮನಕ್ಕೆ ಬಂದಿತ್ತು. ವಿಕೃತ ಮನಸ್ಸಿನ ಮಗನಿಂದಲೇ ಹತ್ಯೆಯಾಗಿರುವುದನ್ನು ಮರೆಮಾಚಿ ಹೃದಯಘಾತವಾಗಿ ಸಹಜ ಸಾವು ಆಗಿದೆ ಎಂದು ಯಾಕೆ ಸುಳ್ಳು ಹೇಳುತ್ತಿದ್ದಾರೆ. ಸಹಜವಾಗಿ ಮರಣಹೊಂದಿದ್ದಾರೆ ಎನ್ನುವ ಸುಳ್ಳು ಹೇಳುವುದಾದರೆ ಅಂತ್ಯಸಂಸ್ಕಾರಕ್ಕಾಗಲೀ ಅಥವಾ ನಿಮ್ಮ ಮನೆಯಲ್ಲಿ ನಡೆಯುವ ಯಾವುದೇ ಕಾರ್ಯಗಳಿಗೆ ನಾವುಗಳು ಭಾಗಿಯಾಗುವುದಿಲ್ಲ ಎಂದು ಮೃತ ಸಂಬಂಧಿಕರ ಬಳಿ ಗ್ರಾಮಸ್ಥರು ಆಕ್ರೋಶಗೊಂಡು ವಾಗ್ವಾದಕ್ಕೆ ಇಳಿದಿದ್ದಾರೆ.ಈ ವೇಳೆ ಪತಿಯ ಮರಣದ ವಿಷಯ ತಿಳಿದ ಕ್ಷಣದಿಂದ ಕಣ್ಣೀರಿಟ್ಟು ನಿತ್ರಾಣಗೊಂಡಿದ್ದ ಪತ್ನಿಯು ಎಚ್ಚೆತ್ತು ಪತಿಯ ಸಾವಿನ ಮೊದಲು ಮನೆಯಲ್ಲಿ ಅಪ್ಪ ಮಗ ಜಗಳವಾಡುತ್ತಿದ್ದರು. ಆಗ ನಾನು ಅವನಿಂದ ಬಿಡಿಸಿಕೊಂಡು ಸಹೋದರನ ಮನೆಗೆ ಓಡಿ ತಪ್ಪಿಸಿಕೊಂಡೆ, ಇಂತಹ ಮಗನನ್ನು ಹೆತ್ತು ದಿನ ಜಗಳವಾಡುವುದು ಕಣ್ಣೀರಿಡುವುದು ಸಾಮಾನ್ಯವಾಗಿದೆ. ಇವನನ್ನು ಹೀಗೆ ಬಿಟ್ಟರೆ ನನ್ನನ್ನು ಒಂದಲ್ಲ ಒಂದಿನ ಸಾಯಿಸುತ್ತಾನೆ, ನೀವೇ ಸರಿಯಾದ ಬುದ್ಧಿ ಕಲಿಸಿ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರಲ್ಲಿ ಹತ್ಯೆಯ ನಿಜಾಂಶವನ್ನು ಹೇಳಿದ್ದಾರೆ. ನಂತರ ಪೂರಕ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲು ಮಾಡಿರುತ್ತಾರೆ.
ಹತ್ಯೆ ಮಾಡಿದ್ದಾನೆ ಎನ್ನಲಾದ ಆಪಾದಿತ ದಿನೇಶ್ (34) ಮದ್ಯಪಾನ ವ್ಯಸನಿ ಆಗಿದ್ದು ನಿತ್ಯ ಅಪ್ಪ ಅಮ್ಮನೊಂದಿಗೆ ಜಗಳವಾಡುವುದು, ಸಿಕ್ಕಸಿಕ್ಕಲ್ಲಿ ಹೊಡೆಯುವುದು ಸಾಮಾನ್ಯವಾಗಿತ್ತು, ಬಹಳಷ್ಟು ಬಾರಿ ಸಾರ್ವಜನಿಕರು ಮನೆಯಲ್ಲಿ ದಿನೇಶ್ ಗಲಾಟೆ ಮಾಡುತ್ತಿದ್ದಾಗ ಬಿಡಿಸಿದ್ದು ಉಂಟು. ಅಪ್ಪ ಅಮ್ಮನಿಗೆ ಹೊಡೆದು ಗಾಯಗಳಾಗಿ ಆಸ್ಪತ್ರೆಯಲ್ಲಿ ಎಷ್ಟೋ ಬಾರಿ ಚಿಕಿತ್ಸೆಯನ್ನು ಸಹ ಪಡೆದುಕೊಂಡು ಇನ್ನಾದರೂ ಬದಲಾಗುತ್ತಾನೆ ಎಂದು ಸಹಿಸಿಕೊಂಡಿದ್ದು, ಇದೀಗ ತನ್ನ ವಿಕೃತ ಮನಸ್ಥಿತಿಯನ್ನು ತೋರಿಸಿದ್ದಾನೆ. ತಂದೆಯನ್ನೇ ಕೊಲ್ಲುವ ಇಂಥಹ ಮನಸ್ಥಿತಿ ಇನ್ನೂ ಮುಂದೆ ಯಾರಿಗೆ ಬರಬಾರದು, ಇಂಥವರಿಗೆ ತಕ್ಕ ಶಿಕ್ಷೆ ಆಗಬೇಕು ಎಂಬುವುದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.