ಎಲ್ಲಡೆ ಮೊಳಗಿದ ಕೃಷ್ಣನ ಕೊಳಲಿನ ನಿನಾದ

| Published : Aug 27 2024, 01:38 AM IST

ಸಾರಾಂಶ

ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಸೋಮವಾರ ನಗರದಲ್ಲಿರುವ ಶ್ರೀಕೃಷ್ಣ ದೇವಸ್ಥಾನ ಸೇರಿದಂತೆ ಎಲ್ಲಡೆ ವಿಶೇಷ ಪೂಜೆ, ಅಭಿಷೇಕ, ತೊಟ್ಟಿಲೋತ್ಸವ, ಗಡಿಗೆ ಒಡೆಯುವ ಕಾರ್ಯಕ್ರಮ ನೆರವೇರಿತು.

ಹುಬ್ಬಳ್ಳಿ:

ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಸೋಮವಾರ ನಗರದಲ್ಲಿರುವ ಶ್ರೀಕೃಷ್ಣ ದೇವಸ್ಥಾನ ಸೇರಿದಂತೆ ಎಲ್ಲಡೆ ವಿಶೇಷ ಪೂಜೆ, ಅಭಿಷೇಕ, ತೊಟ್ಟಿಲೋತ್ಸವ, ಗಡಿಗೆ ಒಡೆಯುವ ಕಾರ್ಯಕ್ರಮ ನೆರವೇರಿತು.

ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ ಪೂಜೆ, ತೊಟ್ಟಿಲೋತ್ಸವ, ನೈವೇದ್ಯೆ ನೆರವೇರಿತು. ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ಶ್ರೀಕೃಷ್ಣನ ಮೂರ್ತಿಯೊಂದಿಗೆ ರಥೋತ್ಸವದ ಭವ್ಯ ಮೆರವಣಿಗೆ ನಡೆಯಿತು.

ಅದ್ಧೂರಿ ರಥೋತ್ಸವ:ಶ್ರೀಕೃಷ್ಣ ಕಲ್ಯಾಣ ಮಂಟಪದಿಂದ ಆರಂಭವಾದ ಅದ್ಧೂರಿ ರಥೋತ್ಸವವು ದೇಶಪಾಂಡೆನಗರ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ವೇಳೆ ವಿವಿಧ ಕಲಾ ತಂಡಗಳು ಭಾಗವಹಿಸಿ ಮೆರವಣಿಗೆಗೆ ಮೆರಗು ತಂದವು. ನಗರದ ಗುಜರಾತ ಭವನದ ದೇವಸ್ಥಾನದಲ್ಲೂ ಶ್ರೀಕೃಷ್ಣನಿಗೆ ಬೆಳಗ್ಗೆಯಿಂದ ರಾತ್ರಿಯವರೆಗೂ ವಿಶೇಷ ಅಲಂಕಾರ, ಪೂಜೆ, ನೈವೇದ್ಯೆ, ಮಹಿಳಾ ತಂಡಗಳಿಂದ ವಿಶೇಷ ಭಜನೆ, ತೊಟ್ಟಿಲೋತ್ಸವ ಜರುಗಿದವು.

ಚಕ್ಕಡಿಗಳಲ್ಲಿ ಅದ್ಧೂರಿ ಮೆರವಣಿಗೆ:

ಇಲ್ಲಿನ ಅಕ್ಷಯ ಪಾರ್ಕ್‌ನ ಸಂತೆ ಮೈದಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಹಾಗೂ ವಿಶ್ವ ಹಿಂದೂ ಪರಿಷತ್‌ ಆಶ್ರಯದಲ್ಲಿ ಚೈತನ್ಯ ನಗರ ನಿವಾಸಿಗಳ ಸಂಘ ಹಾಗೂ ಶ್ರೀಸರಸ್ವತಿ ಮಹಿಳಾ ಮಂಡಳದ ವತಿಯಿಂದ ಶ್ರೀಕೃಷ್ಣ-ರಾಧೆಯರ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಮೆರವಣಿಗೆಯುದ್ದಕ್ಕೂ ಚಕ್ಕಡಿಯಲ್ಲಿ ಶ್ರೀಕೃಷ್ಣ-ರಾಧೆಯ ವೇಷ ಧರಿಸಿದ್ದ ಮಕ್ಕಳು ನೋಡುಗರ ಕಣ್ಮನ ಸೆಳೆದರು. ಮಹಿಳೆಯರು ನೃತ್ಯ ಮಾಡುತ್ತ ತೆರಳುತ್ತಿದ್ದರೆ, ಇತ್ತ ಯುವಕರು ಡಿಜೆ ಸದ್ದಿಗೆ ಕುಣಿಯುತ್ತಾ ಸಾಗಿದರು.

ಸುರಿಯುವ ಮಳೆಯಲ್ಲೂ ನಿಲ್ಲದ ಸಂಭ್ರಮ:

ನಂತರ ಅಕ್ಷಯ ಪಾರ್ಕಿನ ಸಂತೆ ಮೈದಾನದಲ್ಲಿ ಮೊಸರಿನ ಗಡಿಗೆ ಒಡೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಅನೇಕ ತಂಡಗಳು ಭಾಗವಹಿಸಿ, ಗಡಿಗೆ ಒಡೆಯುವುದರಲ್ಲಿ ಸೆಣಸಾಡಿದ್ದು ನೋಡುಗರ ಮೈನವಿರೇಳುವಂತೆ ಮಾಡಿತು. ಗಾರ್ಡನ್‌ ಬಾಯ್ಸ್‌ ತಂಡವು ಮೊಸರಿನ ಗಡಿಗೆ ಒಡೆಯುವ ಮೂಲಕ ₹ 25 ಸಾವಿರ ನಗದು ಪ್ರಶಸ್ತಿ ಗೆದ್ದು ಬೀಗಿತು. ಗಡಿಗೆ ಒಡೆಯುವ ಸ್ಪರ್ಧೆ ಆರಂಭವಾಗುತ್ತಿದ್ದಂತೆ ಆರಂಭವಾದ ಧಾರಾಕಾರ ಮಳೆಯಲ್ಲೂ ಸ್ಪರ್ಧಾಳುಗಳು ಹುಮ್ಮಸ್ಸಿನಿಂದ ಪಾಲ್ಗೊಂಡು ಸಂಭ್ರಮಿಸಿದರು.

ಕೇಂದ್ರ ಸಚಿವ ಜೋಶಿ ಚಾಲನೆ:

ಮೊಸರಿನ ಗಡಿಗೆ ಒಡೆಯುವ ಸ್ಪರ್ಧೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಐತಿಹಾಸಿಕ ಪರಂಪರೆ, ಸಾಹಸ ಪ್ರವೃತ್ತಿ ತಿಳಿಸುವ ಕಾರ್ಯ ಶ್ಲಾಘನೀಯ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿದರು. ಸಮಿತಿ ಗೌರವಾಧ್ಯಕ್ಷ ಪ್ರಕಾಶ ಕ್ಯಾರಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಪಾಲಿಕೆ ಉಪ ಮೇಯರ್‌ ದುರ್ಗಮ್ಮ ಬಿಜವಾಡ, ಸುಭಾಸಿಂಗ್ ಜಮಾದಾರ, ಕಿರಣ್ ಭರಾಡೆ, ಸಾಯಿನಾಥ ದಲಬಂಜನ, ಕೃಷ್ಣ ಗಂಡಗಾಳಕರ, ವಿರೂಪಾಕ್ಷ ಹಿರೇಮಠ ಸೇರಿದಂತೆ ಹಲವರಿದ್ದರು.