ಶಾಲೆಗಳಲ್ಲಿ ಚಿಣ್ಣರ ಕಲವರ ಮೊಳಗಿದ ಗಂಟೆ ಸದ್ದು

| Published : May 30 2024, 12:57 AM IST

ಸಾರಾಂಶ

ಶಾಲಾ ಆರಂಭದ ಮೊದಲ ದಿನವಾದ ಬುಧವಾರ ಕಡಿಮೆ ಸಂಖ್ಯೆಯಲ್ಲಿ ಮಕ್ಕಳು ಶಾಲೆಗೆ ಆಗಮಿಸಿದ್ದರು.

ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಶಾಲೆಗಳಲ್ಲಿ ಚಿಣ್ಣರ ಕಲರವ ಮನೆ ಮಾಡಿದ್ದು, ಶಾಲೆ ಆವರಣದಲ್ಲಿ ಗಂಟೆಯ ಸದ್ದು ಮೊಳಗಿದೆ.

ಬೇಸಿಗೆ ರಜೆ ಮುಗಿಸಿ ಶಾಲೆಗೆ ಒಳಗೆ ಹೆಜ್ಜೆ ಇಡುತ್ತಿದಂತೆಯೇ ಮಕ್ಕಳು ಸಂಭ್ರಮಿಸಿದರು. ಎರಡು ತಿಂಗಳು ಕಾಲ ಮನೆಯಲ್ಲಿದ್ದು ಸಾಕಾಯಿತು ಎಂಬಂತೆ ಪರಸ್ಪರ ಮುಖ ನೋಡಿ ಸಂಭ್ರಮಿಸಿದರು. ಮಕ್ಕಳ ಬರುವಿಕೆಯನ್ನು ಎದುರು ನೋಡುತ್ತಿದ್ದ ಶಿಕ್ಷಕರು, ನಗು ಮೊಗದಿಂದ ಸ್ವಾಗತಿಸಿದರು.

ಶಾಲಾ ಆರಂಭದ ಮೊದಲ ದಿನವಾದ ಬುಧವಾರ ಕಡಿಮೆ ಸಂಖ್ಯೆಯಲ್ಲಿ ಮಕ್ಕಳು ಶಾಲೆಗೆ ಆಗಮಿಸಿದ್ದರು. ಈ ವೇಳೆ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರಗಳನ್ನು ವಿತರಿಸಲಾಯಿತು. ಇಂದಿನಿಂದ ಎರಡು ದಿನ ಶಾಲೆಗಳಲ್ಲಿ ಸ್ವಚ್ಚತೆ ಅಭಿಯಾನ, ಶ್ರಮದಾನ ನಡೆಯಲಿದೆ.

ಮೇ ೨೮ ರವರೆಗೆ ಒಟ್ಟು ೫೮೧೧೪ ಮಕ್ಕಳ ದಾಖಲಾತಿ ಆಗಿದೆ. ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಎಲ್ಲ ಸೇರಿ ಒಟ್ಟು ೧೭೧೫ ಶಾಲೆಗಳಲ್ಲಿ ೨,೭೫,೧೨೨ ವಿದ್ಯಾರ್ಥಿಗಳಿದ್ದರು. ಇದರಲ್ಲಿ ೯೭೭ ಸರಕಾರಿ ಪ್ರಾಥಮಿಕ ಶಾಲೆಗಳಿದ್ದು, ೧೩೨ ಪ್ರೌಢಶಾಲೆಗಳಿವೆ. ಸರ್ಕಾರಿ ಶಾಲೆಗಳಲ್ಲಿ ಪ್ರತಿವರ್ಷ ದಾಖಲಾಗುವ ಮಕ್ಕಳ ಸಂಖ್ಯೆ ಕ್ಷೀಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ದಾಖಲಾತಿ ಅಭಿಯಾನ ನಡೆಸಿ, ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ೧೪೨ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭವಾಗಲಿದೆ. ಇದಕ್ಕೆ ಅಗತ್ಯ ಸಿದ್ಧತೆಗಳನ್ನು ಇಲಾಖೆ ಈಗಾಗಲೇ ನಡೆಸಿದೆ. ಇದರ ಜತೆಗೆ ೧೩೪ ಶಾಲೆಗಳಲ್ಲಿ ೧೩೪ ಶಾಲೆಗಳಲ್ಲಿ ತ್ರಿಭಾಷಾ ಶಿಕ್ಷಣ ಮಾಧ್ಯಮ ಹಾಗೂ ೪೫ ಶಾಲೆಗಳಲ್ಲಿ ರಾಷ್ಟ್ರೀಯ ಕೌಶಲ್ಯ ಗುಣಮಟ್ಟ ಚೌಕಟ್ಟು-ಇದರಲ್ಲಿ ಮಕ್ಕಳಿಗೆ ಮಾಹಿತಿ ಸಂವಹನ (ಐಟಿ) ಕೃಷಿ ಸೇರಿದಂತೆ ಇತರೆ ವಿಷಯಗಳ ಕುರಿತು ತರಬೇತಿ ಶಿಕ್ಷಕರಿಗೆ ಸಿಗಲಿದೆ.

ಈ ಕುರಿತು ಶಿಕ್ಷಣ ಇಲಾಖೆ ಬಿಇಒಗಳ ಮೂಲಕ ಮುಖ್ಯ ಶಿಕ್ಷಕರ ಸಭೆ ನಡೆಸಿದ್ದು, ಈ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಬೇಕು. ಸರಕಾರದ ಉಚಿತ ಸೌಲಭ್ಯಗಳಾದ ಪಠ್ಯ ಪುಸ್ತಕ, ಸಮವಸ್ತ್ರ, ಶೂ ಮತ್ತು ಸಾಕ್ಸ್, ಕ್ಷೀರ ಭಾಗ್ಯ, ಮಧ್ಯಾಹ್ನದ ಬಿಸಿಯೂಟ, ಬಾಳೆಹಣ್ಣು, ಮೊಟ್ಟೆ, ವಿದ್ಯಾರ್ಥಿ ವೇತನ, ಶುದ್ಧ ಕುಡಿಯುವ ನೀರು ಶೌಚಾಲಯ ವ್ಯವಸ್ಥೆಗೆ ಕ್ರಮ ಕೈಗೊಂಡಿದೆ. ಇದರ ಜೊತೆಗೆ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರಲು ಇಲಾಖೆ ಮುಂದಾಗಿದೆ. ಮನೆ, ಮನೆ ಅಭಿಯಾನದ ಮೂಲಕ ಮಕ್ಕಳನ್ನು ಶಾಲೆಗೆ ಕರೆ ತರುವ ಪ್ರಯತ್ನ ನಡೆಸಲಿದ್ದಾರೆ.