ಸಾರಾಂಶ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿರುವ ಸ್ಯಾಂಜೋ ಆಸ್ಪತ್ರೆ ಹಿಂಭಾಗದ ಸ್ಥಳ ಇದೀಗ ವಿವಾದಕ್ಕೆ ಸಿಲುಕಿದೆ. ಸಾಹಿತ್ಯ ಸಮ್ಮೇಳನ ನಡೆಸಲು ಗುರುತಿಸಿರುವ ಪ್ರದೇಶದಲ್ಲಿರುವ 27 ಎಕರೆ ಪ್ರದೇಶ ಜಿಲ್ಲಾ ಪೊಲೀಸ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸೇರಿದ ಆಸ್ತಿ ಎಂದು ದೂರು
ಮಂಡ್ಯ : ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿರುವ ಸ್ಯಾಂಜೋ ಆಸ್ಪತ್ರೆ ಹಿಂಭಾಗದ ಸ್ಥಳ ಇದೀಗ ವಿವಾದಕ್ಕೆ ಸಿಲುಕಿದೆ. ಸಾಹಿತ್ಯ ಸಮ್ಮೇಳನ ನಡೆಸಲು ಗುರುತಿಸಿರುವ ಪ್ರದೇಶದಲ್ಲಿರುವ 27 ಎಕರೆ ಪ್ರದೇಶ ಜಿಲ್ಲಾ ಪೊಲೀಸ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸೇರಿದ ಆಸ್ತಿ ಎಂದು ಸಂಘದ ಅಧ್ಯಕ್ಷರು ಜಿಲ್ಲಾಧಿಕಾರಿಗೆ ದೂರು ನೀಡಿರುವುದು ಹೊಸ ಗೊಂದಲಕ್ಕೆ ಕಾರಣವಾಗಿದೆ.
ಸಮ್ಮೇಳನದ ವೇದಿಕೆ ಸಿದ್ಧತೆಗಳು ಆರಂಭಗೊಂಡಿರುವ ಸಮಯದಲ್ಲಿ ಪೊಲೀಸ್ ನೌಕರರ ಗೃಹ ನಿರ್ಮಾಣ ಸಂಘದವರು ದನಿ ಎತ್ತಿದ್ದು, ಈ ಪ್ರದೇಶದಲ್ಲಿ ಈಗಾಗಲೇ ನಿವೇಶನಾಭಿವೃದ್ಧಿ ಕಾರ್ಯಗಳು ಅಭಿವೃದ್ಧಿಗೊಂಡಿದ್ದು, ಸಮ್ಮೇಳನವನ್ನು ನಡೆಸಿದರೆ ಅಭಿವೃದ್ಧಿ ಕಾಮಗಾರಿಗಳು ಶಿಥಿಲಗೊಳ್ಳುವ ಸಾಧ್ಯತೆ ಇದೆ. ಈ ಜಮೀನಿನ ಮಾಲೀಕರು ಅಮರಾವತಿ ಡೆವಲಪರ್ಸ್‌ನವರು ಪಾಲುದಾರರಾಗಿರುವುದಿಲ್ಲ ಎಂಬ ಅಂಶವನ್ನು ಗಮನಕ್ಕೆ ತಂದಿದ್ದಾರೆ.
ಈ ವಿಚಾರವಾಗಿ ಸಂಘದಿಂದ ಪತ್ರ ವ್ಯವಹರಿಸಿ ನಾಲ್ಕು ತಿಂಗಳಾದರೂ, ತಮ್ಮ ಕಚೇರಿಗೆ ಹಲವು ಬಾರಿ ಭೇಟಿ ನೀಡಿ ವಿಚಾರ ಪ್ರಸ್ತಾಪಿಸಿದರೂ ನಮ್ಮ ಅರ್ಜಿಯನ್ನು ಪರಿಗಣಿಸದೆ ಏಕಪಕ್ಷೀಯವಾಗಿ ಸಂಘದ ಆಸ್ತಿಯಲ್ಲಿ ಸಮ್ಮೇಳನವನ್ನು ಆಯೋಜಿಸಲು ಸಿದ್ಧತೆಯನ್ನು ನಡೆಸಲಾಗಿರುತ್ತದೆ. ಈ ಪ್ರದೇಶಕ್ಕೆ ಸರ್ಕಾರದಿಂದ ದೊರೆಯುವ ಅನುದಾನವನ್ನು ಅಮರಾವತಿ ಡೆವಲಪರ್ಸ್ ಪಾಲುದಾರರಿಗೆ ನೀಡಲಾಗುತ್ತಿದೆ ಎಂಬ ವದಂತಿ ಎಲ್ಲೆಡೆ ಹರಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಸ್ಯಾಂಜೋ ಆಸ್ಪತ್ರೆ ಹಿಂಭಾಗ ಇರುವ ೨೭ ಎಕರೆ ಜಮೀನಿನಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಸಂಘದ ವಶಕ್ಕೆ ಹಸ್ತಾಂತರ ಮಾಡಲು ೨೦೧೦ ರಿಂದ ಹಲವಾರು ಒಪ್ಪಂದಗಳನ್ನು ಅಮರಾವತಿ ಡೆವಲಪರ್ಸ್‌ನವರೊಂದಿಗೆ ಮಾಡಿಕೊಳ್ಳಲಾಗಿದೆ. 18.82 ಕೋಟಿ ರು. ಹಣವನ್ನು ಡೆವಲಪರ್ಸ್‌ನವರಿಗೆ ಸಂದಾಯ ಮಾಡಲಾಗಿದೆ. ಸಂಘದಿಂದ ಪಡೆದುಕೊಂಡ ಹಣದಲ್ಲಿ ಒಪ್ಪಂದದ ಪ್ರಕಾರ ನಿವೇಶನಗಳನ್ನು ರಚಿಸಿ ಹಸ್ತಾಂತರ ಮಾಡುವುದಕ್ಕೆ ಅಮರಾವತಿ ಡೆವಲಪರ್ಸ್‌ನವರು ವಿಫಲರಾಗಿದ್ದಾರೆ. ಸಂಘದೊಂದಿಗೆ ಮಾಡಿಕೊಂಡಿರುವ ಎಲ್ಲಾ ಕರಾರುಗಳನ್ನು ಉಲ್ಲಂಘಿಸಿ ೧೪ ವರ್ಷ ಕಲೆದರೂ ನಿವೇಶನಗಳನ್ನು ಸಂಘದ ವಶಕ್ಕೆ ನೀಡಿರುವುದಿಲ್ಲ. ಸಂಘಕ್ಕೆ ಸೇರಿದ ಆಸ್ತಿಗಳನ್ನು ಬ್ಯಾಂಕ್‌ಗಳಲ್ಲಿ ಅಡಮಾನವಿಟ್ಟು ಸಾಲ ಪಡೆದು ಪೊಲೀಸ್ ಗೃಹ ನಿರ್ಮಾಣ ಸಹಕಾರ ಸಂಘದ ೫೦೦ ಸದಸ್ಯರಿಗೆ ವಂಚಿಸುವ ಹುನ್ನಾರ ನಡೆಸಿದ್ದು, ಹೈಕೋರ್ಟ್‌ನಲ್ಲಿ ಸಂಬಂಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ವಿವರಿಸಿದ್ದಾರೆ.
ಸಂಘಕ್ಕೆ ಸೇರಬೇಕಾದ 27 ಎಕರೆ ಜಮೀನಿನ ಪೈಕಿ 17.24 ಎಕರೆ ಜಮೀನನ್ನು ಮಂಡ್ಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸಂಘದ ಹೆಸರಿಗೆ ಶುದ್ಧಕ್ರಯ ಮಾಡಿಕೊಳ್ಳಲಾಗಿರುತ್ತದೆ. ಒಟ್ಟಾರೆ 27 ಎಕರೆ ಜಮೀನು ಪೊಲೀಸ್ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸೇರಬೇಕಾದ ಆಸ್ತಿಯಾಗಿರುವುದರಿಂದ ತಾವು ಈ ಪ್ರದೇಶದಲ್ಲಿ ಸಮ್ಮೇಳನ ಆಯೋಜಿಸಿರುವುದು ಸಂತೋಷದ ವಿಷಯವಾಗಿದೆ. ಈ ಜಮೀನುಗಳು ಸಂಘದ ಆಸ್ತಿಯಾಗಿರುವುದರಿಂದ ಈ ಜಮೀನುಗಳಿಗೆ ಸಂಬಂಧಿಸಿದ ಯಾವುದೇ ಪತ್ರ ವ್ಯವಹಾರಗಳನ್ನು ಸಂಘದೊಂದಿಗೆ ನಡೆಸಬೇಕು. ಈ ಜಮೀನಿಗೆ ಸರ್ಕಾರ ಅಥವಾ ಜಿಲ್ಲಾಡಳಿತದಿಂದ ಅನುದಾನಗಳು ಬಿಡುಗಡೆಯಾದರೆ ಸಂಘದ ಹೆಸರಿಗೆ ಬಿಡುಗಡೆ ಮಾಡಿಕೊಡಬೇಕು. ಈ ಜಮೀನಿನಲ್ಲಿ ಅಭಿವೃದ್ಧಿಗೊಂಡಿರುವ ನಿವೇಶನಾಭಿವೃದ್ಧಿ ಕಾಮಗಾರಿಗಳು ಶಿಥಿಲಗೊಂಡರೆ ಮೊದಲಿನ ಸ್ಥಿತಿಯಂತೆಯೇ ಯಥಾವತ್ತಾಗಿ ರಚಿಸಿಕೊಡಬೇಕೆಂದು ಕೋರಿದ್ದಾರೆ.
ಅಮರಾವತಿ ಡೆವಲಪರ್ಸ್‌ನವರು ನಮ್ಮ ಆಸ್ತಿಯ ಮೇಲಿನ ಲಾಭವನ್ನು ಪಡೆದುಕೊಳ್ಳಲು ಹವಣಿಸುತ್ತಿದ್ದು, ಯಾವುದೇ ಕಾರಣಕ್ಕೂ ಡೆವಲಪರ್ಸ್ ಹೆಸರಿಗೆ ಅನುದಾನಗಳನ್ನು ಬಿಡುಗಡೆ ಮಾಡಬಾರದು. ಆಸ್ತಿಗೆ ಸಂಬಂಧಿಸಿದ ಪತ್ರವ್ಯವಹಾರಗಳನ್ನು ನಡೆಸಬಾರದು ಎಂದು ದೂರಿನಲ್ಲಿ ತಿಳಿಸಿದ್ದಾರೆ.