ಕನ್ನಡಪ್ರಭ ವಾರ್ತೆ ತಾಳಿಕೋಟೆ ಶರಣರ ಪರಂಪರೆಯಲ್ಲಿ ದಾಸೋಹಕ್ಕೆ ಅತ್ಯಂತ ಮಹತ್ವವಿದೆ. ದಾಸೋಹಕ್ಕಾಗಿ ದಾನ ಮಾಡಬೇಕು. ದಾಸೋಹದ ಮೂಲಕ ಹಂಚಿಕೊಂಡ ಅನ್ನ ಕೇವಲ ಹೊಟ್ಟೆ ತುಂಬಿಸುವಂತಹ ಆಹಾರವಲ್ಲ, ಅದು ಸಮಾಜದಲ್ಲಿ ಪ್ರೀತಿ, ಸಮಾನತೆ ಮತ್ತು ಸಹಬಾಳ್ವೆಯ ಭಾವನೆ ಬೆಳೆಸುವ ಸಾಧನವಾಗಿದೆ ಎಂದು ಯಾದಗಿರಿ ಜಿಲ್ಲೆಯ ರೊಟ್ನೊಟಗಿಯ ಖ್ಯಾತ ಪುರಾಣ ಪ್ರವಚನಕಾರ ರಾಚಯ್ಯಶಾಸ್ತ್ರಿಗಳು ನುಡಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಶರಣರ ಪರಂಪರೆಯಲ್ಲಿ ದಾಸೋಹಕ್ಕೆ ಅತ್ಯಂತ ಮಹತ್ವವಿದೆ. ದಾಸೋಹಕ್ಕಾಗಿ ದಾನ ಮಾಡಬೇಕು. ದಾಸೋಹದ ಮೂಲಕ ಹಂಚಿಕೊಂಡ ಅನ್ನ ಕೇವಲ ಹೊಟ್ಟೆ ತುಂಬಿಸುವಂತಹ ಆಹಾರವಲ್ಲ, ಅದು ಸಮಾಜದಲ್ಲಿ ಪ್ರೀತಿ, ಸಮಾನತೆ ಮತ್ತು ಸಹಬಾಳ್ವೆಯ ಭಾವನೆ ಬೆಳೆಸುವ ಸಾಧನವಾಗಿದೆ ಎಂದು ಯಾದಗಿರಿ ಜಿಲ್ಲೆಯ ರೊಟ್ನೊಟಗಿಯ ಖ್ಯಾತ ಪುರಾಣ ಪ್ರವಚನಕಾರ ರಾಚಯ್ಯಶಾಸ್ತ್ರಿಗಳು ನುಡಿದರು.

ಶ್ರೀ ಖಾಸ್ಗತೇಶ್ವರರ ೧೩೦ನೇ ಹಾಗೂ ವಿರಕ್ತಮಹಾಸ್ವಾಮಿಗಳವರ ೧೨ನೇ ಪುಣ್ಯ ಸ್ಮರಣೋತ್ಸವ ಕುರಿತು ಖಾಸ್ಗತೇಶ್ವರ ಮಠದಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರವಚನ ಕಾರ್ಯಕ್ರಮದ 3ನೇ ದಿನದ ಪ್ರವಚನದಲ್ಲಿ ಮಾತನಾಡಿದ ಅವರು, ಶ್ರೀಗಳು ದಾನ ಮಾಡುವ ಮನಸ್ಸುಳ್ಳವವರು ಇರುವದರಿಂದಲೇ ಸಮಾಜದಲ್ಲಿ ಧರ್ಮ ಮತ್ತು ಮಾನವೀಯ ಮೌಲ್ಯಗಳು ಉಳಿದುಕೊಂಡಿವೆ. ಇಂದಿನ ಕಲಿಯುಗದಲ್ಲಿಯೂ ದಾನಧರ್ಮ ಮಾಡುವವರು ಇರುವದರಿಂದ ಧರ್ಮ ಮತ್ತು ಮಾನವೀಯ ಮೌಲ್ಯಗಳು ಉಳಿದಿವೆ ಎಂದರು. ಸತ್ತವನಿಗೆ ಹೆಗಲು ಕೊಟ್ಟಂತೆ ಕಷ್ಟದಲ್ಲಿರುವವನಿಗೆ ಹೆಗಲು ಕೊಟ್ಟು ಮೇಲ್ಮಟ್ಟಕ್ಕೆತ್ತುವ ಕಾರ್ಯ ಮಾಡಿದರೆ ಅದುವೇ ದೊಡ್ಡ ಧರ್ಮವೆಂದು ಮಾನವೀಯ ಸಂದೇಶ ಕುರಿತು ವಿವರಿಸಿದ ಶ್ರೀಗಳು, ಧರ್ಮವೆಂದರೆ ಕೇವಲ ಆಚರಣೆಗಳಲ್ಲ. ಸಂಕಷ್ಟದಲ್ಲಿರುವ ಮನುಷ್ಯನಿಗೆ ನೆರವಾಗುವುದು ಹಸಿದವನಿಗೆ ಅನ್ನ ನೀಡುವುದೇ ಧರ್ಮವೆಂದರು.

ಮಕ್ಕಳಿಗೆ ಒಳ್ಳೆಯ ಉತ್ತಮ ಸಂಸ್ಕಾರ ನೀಡಬೇಕು. ಅದರ ಜತೆಗೆ ಮಾನವೀಯ ಮೌಲ್ಯಗಳು ಸಾಮಾಜಿಕ ಜವಾಬ್ದಾರಿ ಕಲಿಸಬೇಕಿದೆ. ಹೆಣ್ಣು ಮಕ್ಕಳು ತಮ್ಮ ಸಂಸ್ಕೃತಿ ಪರಂಪರೆ ಗೌರವಿಸುವಂತೆ ಹಿರಿಯರು ನೀಡಿದ ಮಾರ್ಗದರ್ಶನ ನೀಡಬೇಕು. ಕುಂಕುಮ, ಹಸಿರು ಬಳೆ ಹಾಗೂ ಸಾಂಪ್ರದಾಯಿಕ ಉಡುಗೆ, ಆಚರಣೆಗಳು ನಮ್ಮ ಸಂಸ್ಕೃತಿಯ ಸಂಕೇತಗಳಾಗಿದ್ದು, ಆಧುನಿಕತೆಯ ಹೆಸರಿನಲ್ಲಿ ನಮ್ಮ ಮೂಲ ಸಂಸ್ಕಾರ ಮರೆಯಬಾರದು. ವಿದೇಶಿ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗುವುದಕ್ಕಿಂತ ನಮ್ಮ ಪರಂಪರೆಯ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಅಗತ್ಯವಿದೆ. ಇಂದಿನ ದಿನಗಳಲ್ಲಿ ಕೆಲವು ತಂದೆ-ತಾಯಿಗಳು ತಮ್ಮ ಮಗಳಿಗೆ ಶ್ರೀಮಂತ ಕುಟುಂಬ, ಸರ್ಕಾರಿ ಉದ್ಯೋಗ ಅಥವಾ ಆಸ್ತಿ ಅಂತಸ್ತು ಇರುವ ಕಡೆ ಮದುವೆ ಮಾಡಬೇಕೆಂಬ ಕನಸು ಕಾಣುತ್ತಾರೆ ಆದರೆ ಮಕ್ಕಳಿಗೆ ಕೇವಲ ಉತ್ತಮ ಶಿಕ್ಷಣ ನೀಡುವದಷ್ಟೇ ಸಾಕಾಗುವದಿಲ್ಲಾ ಅದರ ಜತೆಗೆ ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯಗಳು ಒಳಗೊಂಡಂತೆ ಸಾಮಾಜಿಕ ಜವಾಬ್ದಾರಿ ಕಲಿಸಬೇಕೆಂದರು. ಶರಣರ ವಚನ ಸಾಹಿತ್ಯ ಸಮಾಜಕ್ಕೆ ಶ್ರೇಷ್ಠವಾದ ಜೀವನದ ಮೌಲ್ಯಗಳನ್ನು ನೀಡಿದ್ದು ಕಾಯಕ, ದಾಸೋಹ, ಸಂಸ್ಕಾರ, ಸಮಾನತೆ ಹಾಗೂ ಮಾನವೀಯತೆಯ ಮಹತ್ವ ಜಗತ್ತಿಗೆ ಸಾರಿದೆ. ಮಗಳನ್ನು ಯಾರಿಗೆ ಕೊಡಬೇಕು ಎಂಬ ಪ್ರಶ್ನೆಗೆ ಉತ್ತರಿಸುವಾಗ ಆಸ್ತಿ, ಅಂತಸ್ತು, ಸರ್ಕಾರಿ ನೌಕರಿ ಅಥವಾ ಶ್ರೀಮಂತಿಕೆಗಿಂತಲೂ ವ್ಯಕ್ತಿಯ ಗುಣ, ಸಂಸ್ಕಾರ, ಕಾಯಕ, ನಿಷ್ಠೆ ಹಾಗೂ ಕುಟುಂಬದ ಮೇಲಿನ ಜವಾಬ್ದಾರಿ ಮುಖ್ಯವೆಂದು ಶರಣರು ವಚನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. ಕಾಯಕ, ಜಾತಿಯಿಂದ ಕಾಯಕ ಬಂದಿಲ್ಲ, ಕಾಯಕದಲ್ಲಿ ಮೇಲು-ಕೀಳು ಇಲ್ಲ, ನಮ್ಮ ಶರಣರ ವಿಚಾರಧಾರೆ ಸಮಾಜಕ್ಕೆ ಸಮಾನತೆಯ ಸಂದೇಶ ನೀಡುತ್ತದೆ ಎಂದು ಹೇಳಿದರು.

ಖಾಸ್ಗತೆಶ್ವರ ಮಠದ ಬಾಲಶಿವಯೋಗಿ ಸಿದ್ಧಲಿಂಗದೇವರು ಸಾನ್ನಿಧ್ಯ ವಹಿಸಿದ್ದರು. ಗವಾಯಿಗಳಾದ ದೀಪಕಸಿಂಗ್ ಹಜೇರಿ, ಶಶಿಕುಮಾರ ಬಳಗಾನೂರ, ಬಸನಗೌಡ ಬಿರಾದಾರ, ವಾಯ್‌ಲೈನ್ ವಾದನೆಯನ್ನು ಯಲ್ಲಪ್ಪ ಗುಂಡಳ್ಳಿ, ಉಮಾಪತಿ ಹಿರೇಮಠ, ಕುಮಾರ ಕುದರಗೊಂಡ, ಸಂಗೀತಸೇವೆ ಸಲ್ಲಿಸಿದರು. ಈ ಆಧ್ಯಾತ್ಮಿಕ ಪ್ರವಚನದ ದಿನದಂದು ಅಪಾರ ಭಕ್ತ ಸಮೂಹ ಉಪಸ್ತಿತರಿದ್ದರು.