ನಮ್ಮೊಳಗಿರುವ ಚೇತನಕ್ಕೆ ಸ್ತ್ರೀ ಪುರುಷದ ಬೇಧವಿಲ್ಲ

| Published : Nov 16 2024, 12:32 AM IST

ಸಾರಾಂಶ

ರಾಮನಗರ: ಲಿಂಗ ಎನ್ನುವುದು ದೈಹಿಕ ಲಕ್ಷಣಕ್ಕೆ ಅನುಗುಣವಾಗಿರುವುದೇ ವಿನಾಃ ನಮ್ಮೊಳಗಿರುವ ಚೇತನಕ್ಕೆ ಸ್ತ್ರೀ-ಪುರುಷ ಎಂಬ ಯಾವುದೇ ಬೇಧವಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ನ್ಯಾ.ಬಿ.ವಿ.ರೇಣುಕಾ ಅಭಿಪ್ರಾಯಪಟ್ಟರು.

ರಾಮನಗರ: ಲಿಂಗ ಎನ್ನುವುದು ದೈಹಿಕ ಲಕ್ಷಣಕ್ಕೆ ಅನುಗುಣವಾಗಿರುವುದೇ ವಿನಾಃ ನಮ್ಮೊಳಗಿರುವ ಚೇತನಕ್ಕೆ ಸ್ತ್ರೀ-ಪುರುಷ ಎಂಬ ಯಾವುದೇ ಬೇಧವಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ನ್ಯಾ.ಬಿ.ವಿ.ರೇಣುಕಾ ಅಭಿಪ್ರಾಯಪಟ್ಟರು.

ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ, ರಾಜ್ಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಸಹಯೋಗದಲ್ಲಿ ಎಲ್‌ಜಿಬಿಟಿಕ್ಯೂಐಎ+ ಸಮುದಾಯದ ಸದಸ್ಯರಿಗೆ ಅವರ ಹಕ್ಕುಗಳು ಮತ್ತು ಸವಲತ್ತು ಕುರಿತು, ಪ್ಯಾನಲ್ ವಕೀಲರು, ಕಾನೂನು ನೆರವು ಅಭಿರಕ್ಷಕರು, ಅರೆಕಾಲಿಕ ಕಾನೂನು ಸ್ವಯಂಸೇವಕರು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪುರಾಣ ಕಾಲದಿಂದಲೂ ಅರ್ಧನಾರೀಶ್ವರ ಪರಿಕಲ್ಪನೆ ಮೂಲಕ ಗಂಡಿನಲ್ಲಿ ಹೆಣ್ಣಿನ ಗುಣ, ಹೆಣ್ಣಿನಲ್ಲಿ ಗಂಡಿನ ಗುಣ ನೋಡುತ್ತಾ ಬಂದಿದ್ದೇವೆ. ಇದರ ಅರ್ಥ ಸಮಾನತೆ ಎನ್ನುವುದು ಎಲ್ಲರಿಗೂ ಅನ್ವಯವಾಗುತ್ತದೆ. ಇದನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡು ಸಮಾಜದಲ್ಲಿ ಎಲ್ಲರಿಗೂ ಸಮಾನ ಸ್ಥಾನಮಾನ ನೀಡಿ ಗೌರವಿಸಬೇಕು. ಪೋಷಕರು ಅಥವಾ ಸಮಾಜ ತೃತೀಯ ಲಿಂಗಿಗಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಿದಾಗ ಅವರು ಬೆಳೆಯಲು ಅವಕಾಶ ದೊರೆಯುತ್ತದೆ ಎಂದರು.

2024ರಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಸಮಾಜದ ಇತರ ಪ್ರಜೆಗಳಂತೆ ಸರಿ ಸಮಾನವಾಗಿ ಬದುಕುವ ಹಕ್ಕಿದೆ ಎನ್ನುವ ಅಂಶದ ಮೇಲೆ ನ್ಯಾಷನಲ್ ಲೀಗಲ್ ಸರ್ವಿಸ್ ಅಥಾರಿಟಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಈ ತೀರ್ಪನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಮಂಗಳಮುಖಿ ಸಮುದಾಯಕ್ಕೆ ಸಂವಿಧಾನಬದ್ಧ ದೊರಕಬೇಕಾದ ಸವಲತ್ತುಗಳನ್ನು ದೊರಕಿಸಿಕೊಡಲು ಹಾಗೂ ಅವರಿಗೆ ಅಗತ್ಯ ನೆರವು ನೀಡಲು ದೇಶದಲ್ಲಿ ಮೊದಲ ಬಾರಿಗೆ ಸಮುದಾಯಕ್ಕೆ, ಕಾನೂನು ನೆರವು ಮತ್ತು ಸೇವೆಗಳ ಯೋಜನೆ-2022 ರಲ್ಲಿ ಉದ್ಯೋಗದಲ್ಲಿ ಮೀಸಲು, ಆಧಾರ್ ಚೀಟಿ, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿಗೆ ಸಹಾಯ ಮಾಡುವುದಕ್ಕೆ ಪ್ರಾಧಿಕಾರ ಕ್ರಮ ಕೈಗೊಂಡಿದೆ ಎಂದರು.

ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ನಡೆಸಿದ ಸಮೀಕ್ಷೆಯಲ್ಲಿ ಐದು ವರ್ಷಗಳಲ್ಲಿ 46 ಮಂದಿ ತೃತೀಯ ಲಿಂಗಿಗಳು ಕಾನೂನು ಸೇವಾ ಪ್ರಾಧಿಕಾರಗಳ ನೆರವಿನಿಂದ ಸರ್ಕಾರದಿಂದ ಪ್ರಯೋಜನೆ ಪಡೆದಿದ್ದಾರೆಂದು ಕಂಡು ಬಂದಿದೆ. ಆದಕಾರಣ ಅವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಪ್ರಾಧಿಕಾರ ಮುಂದಾಗಿದೆ. ಲಿಂಗತ್ವ ಅಲ್ಪಸಂಖ್ಯಾತರ ಯೋಜನೆಗಳ ಅರಿವು ಮೂಡಿಸುವುದು, ಕಾನೂನು ನೆರವು ನೀಡುವುದು, ಹಕ್ಕು ಮತ್ತು ಸೌಲಭ್ಯಗಳ ಅರಿವು ಮೂಡಿಸಲು ಸ್ವಯಂಸೇವಕರನ್ನು ನೇಮಕ ಮಾಡಿ ಸರ್ಕಾರ ಮತ್ತು ತೃತೀಯ ಲಿಂಗಿಗಳ ನಡುವೆ ಸಾಮರಸ್ಯ ಮೂಡಿಸುವುದು ಲೋಕ ಅದಾಲತ್‌ಗಳ ಮೂಲಕ ತೃತೀಯ ಲಿಂಗಿಗಳ ಪ್ರಕರಣಗಳನ್ನು ಇತ್ಯರ್ಥಗೊಳಿಸುವುದು ಕಾನೂನು ಸೇವಾ ಪ್ರಾಧಿಕಾರದ ಪ್ರಮುಖ ಉದ್ದೇಶಗಳಾಗಿವೆ ಎಂದರು.

ತೃತೀಯ ಲಿಂಗಿಗಳು ಭಯ, ನಾಚಿಕೆ, ಸಾಮಾಜಿಕ ಭೇದ, ಖಿನ್ನತೆ, ಆತ್ಮಹತ್ಯೆಗೆ ಪ್ರಯತ್ನಿಸುವ ಪ್ರವೃತ್ತಿ, ಲಿಂಗ ಬದಲಾವಣೆ ಶಸ್ತ್ರ ಚಿಕಿತ್ಸೆಗೆ ಬಲವಂತದ ಒತ್ತಾಯ, ಮುಂತಾದ ಸಮಸ್ಯೆಗಳು ಗಂಭೀರ ಸ್ವರೂಪದ್ದವು, ಇವುಗಳ ವಿರುದ್ಧ ಹೋರಾಡಲು ಸಮಾಜ ಮತ್ತು ತೃತೀಯ ಲಿಂಗದ ಸಮುದಾಯದವರು ಒಟ್ಟಾಗಿ ಕೈಜೋಡಿಸಬೇಕು ಎಂದು ರೇಣುಕಾ ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಆರ್. ಸವಿತಾ, 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಸಿ. ತಮ್ಮಣ್ಣ , ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ವಿ. ಚಂದ್ರಶೇಖರ್, ಕಾರ್ಯದರ್ಶಿ ತಿಮ್ಮೇಗೌಡ , ಖಜಾಂಚಿ ಮಂಜೇಶ್ ಗೌಡ , ಸಾಮಾಜಿಕ ಕಾರ್ಯಕರ್ತೆ ಹಾಗೂ ಒಂದಡೆ ಸಂಸ್ಥೆಯ ಖಜಾಂಚಿ ರಕ್ಷಿತ ಮಲ್ಲಿಕಾರ್ಜುನ, ಎಲ್‌ಜಿಬಿಟಿಕ್ಯೂಐಎ+ ಸದಸ್ಯರು ಉಪಸ್ಥಿತರಿದ್ದರು.

14ಕೆಆರ್ ಎಂಎನ್ 7.ಜೆಪಿಜಿ

ರಾಮನಗರ ಜಿಪಂ ಕಚೇರಿ ಸಭಾಂಗಣದಲ್ಲಿ ಎಲ್‌ಜಿಬಿಟಿಕ್ಯೂಐಎ+ ಸಮುದಾಯದ ಸದಸ್ಯರ ಹಕ್ಕುಗಳು ಮತ್ತು ಸವಲತ್ತುಗಳ ಕುರಿತು ಪ್ಯಾನಲ್ ವಕೀಲರು, ಕಾನೂನು ನೆರವು ಅಭಿರಕ್ಷಕರು, ಅರೆಕಾಲಿಕ ಕಾನೂನು ಸ್ವಯಂಸೇವಕರು ಮತ್ತು ಸಮುದಾಯದವರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನು ನ್ಯಾಯಾಧೀಶರಾದ ರೇಣುಕಾ ಉದ್ಘಾಟಿಸಿದರು.