ಜಾನಪದ ನಮ್ಮ ಪುರಾತನ ಕಲೆ. ಈ ಕಲೆಯನ್ನು ಉಳಿಸಿ, ಬೆಳೆಸಿ, ಯುವ ಜನತೆಗೆ ತಲುಪಿಸುವ ಉದ್ದೇಶದಿಂದ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳು ರಾಜ್ಯ ಮಟ್ಟದ ಜಾನಪದ ಸಮ್ಮೇಳನಕ್ಕೆ ಚಾಲನೆ ನೀಡಿ ನಾಲ್ಕು ದಶಕಗಳು ಕಳೆದಿವೆ. ಇದು ಜನಪದರ ಕಲೆ ಹಾಗೂ ಬದುಕು ಹಸನಗೊಳ್ಳಲು ಒಂದು ವೇದಿಕೆಯಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮಠಮಾನ್ಯವೆಂದರೆ ಕೇವಲ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಿಗಷ್ಟೇ ಸೀಮಿತವಲ್ಲ ಎಂಬುದನ್ನು ಸಾಧಿಸಿ ತೋರಿಸಿರುವ ಆದಿಚುಂಚನಗಿರಿ ಮಠವು ನಶಿಸಿ ಹೋಗುತ್ತಿರುವ ನಮ್ಮ ಪೂರ್ವಿಕರ ಜಾನದಪ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಬಹಳಷ್ಟು ಶ್ರಮಿಸುತ್ತಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿಪ್ರಾಯಪಟ್ಟರು.

ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ 47ನೇ ರಾಜ್ಯ ಮಟ್ಟದ ಶ್ರೀಕಾಲಭೈರವೇಶ್ವರ ಜಾನಪದ ಕಲಾ ಮೇಳದ ಪ್ರಯುಕ್ತ ಗುರುವಾರ ಆಯೋಜಿಸಿದ್ದ ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಜಾನಪದ ನಮ್ಮ ಪುರಾತನ ಕಲೆ. ಈ ಕಲೆಯನ್ನು ಉಳಿಸಿ, ಬೆಳೆಸಿ, ಯುವ ಜನತೆಗೆ ತಲುಪಿಸುವ ಉದ್ದೇಶದಿಂದ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳು ರಾಜ್ಯ ಮಟ್ಟದ ಜಾನಪದ ಸಮ್ಮೇಳನಕ್ಕೆ ಚಾಲನೆ ನೀಡಿ ನಾಲ್ಕು ದಶಕಗಳು ಕಳೆದಿವೆ. ಇದು ಜನಪದರ ಕಲೆ ಹಾಗೂ ಬದುಕು ಹಸನಗೊಳ್ಳಲು ಒಂದು ವೇದಿಕೆಯಾಗಿದೆ. ವೈಜ್ಞಾನಿಕ ಯುಗದಲ್ಲಿಯೂ ಪ್ರಸ್ತುತದ ಶ್ರೀಗಳು ಜಾನಪದ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿ, ಕಲಾವಿದರನ್ನು ಗುರುತಿಸಿ, ಬೆಳೆಸುವ ಕೈಂಕರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.

ಸಮಾರಂಭದ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ತಮಿಳುನಾಡಿನ ವಾಸ್ತುಶಿಲ್ಪಿ ಮುತ್ತಯ್ಯ ಸ್ಥಪತಿ, ಚಿಕ್ಕಮಗಳೂರಿನ ವಿಜ್ಞಾನಿ ಡಾ.ವೇಣುಗೋಪಾಲ್, ಅರಸೀಕೆರೆಯ ಪ್ರಗತಿಪರ ರೈತ ಡಾ.ರಂಗಸ್ವಾಮಿ, ಶಿವಮೊಗ್ಗ ಜಿಲ್ಲೆ ಸಾಗರದ ಕಿನ್ನರಿ ವಾದಕ ಕೆ.ಗುಡ್ಡಪ್ಪಜೋಗಿ, ಮೈಸೂರಿನ ಸಮಾಜ ಸೇವಕ ಎಂ.ಬಿ.ಬೋರೇಗೌಡ ಅವರಿಗೆ 1 ಲಕ್ಷ ರು. ನಗದು ಹಾಗೂ ಸ್ಮರಣಿಕೆಯನ್ನೊಳಗೊಂಡ ಚುಂಚಶ್ರೀ ಪ್ರಶಸ್ತಿ ಪ್ರದಾನ ಮಾಡಿ ಡಾ.ನಿರ್ಮಲಾನಂದನಾಥಶ್ರೀಗಳು ಗೌರವಿಸಿದರು. ನಂತರ ವೇದಿಕೆಯಲ್ಲಿ ಚುಂಚಶ್ರೀ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಲಾಯಿತು.

ಸಮಾರಂಭಕ್ಕೂ ಮುನ್ನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಐದು ಮಂದಿ ಚುಂಚಶ್ರೀ ಪ್ರಶಸ್ತಿ ಪುರಸ್ಕೃತರನ್ನು ಬೆಳ್ಳಿ ಮಾದರಿಯ ಎರಡು ಸಾರೋಟಿನಲ್ಲಿ ಕೂರಿಸಿ ವಿವಿಧ ಜಾನಪದ ಕಲಾತಂಡ ಮತ್ತು ವೀರಗಾಸೆ ತಂಡದೊಂದಿಗೆ ಶ್ರೀಮಠದ ರಥದ ಬೀದಿಯಿಂದ ಜೋಡಿ ರಸ್ತೆ ಮಾರ್ಗವಾಗಿ ವೇದಿಕೆವರೆಗೆ ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು.

ವೇದಿಕೆಯಲ್ಲಿ ಜಾನಪದ ಕಲಾವಿದರ ನೃತ್ಯ ಪ್ರದರ್ಶನ, ಡೊಳ್ಳು ಕುಣಿತ, ವೀರಗಾಸೆ ಕುಣಿತ ಸೇರಿದಂತೆ ಜಾನಪದ ಕಲಾವಿದರು ತಮ್ಮ ಪ್ರದರ್ಶನಗಳನ್ನು ನೀಡಿದರು.

ಸಮಾರಂಭದ ದಿವ್ಯ ಸಾನಿಧ್ಯವಹಿಸಿದ್ದ ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಚುಂಚಶ್ರೀ ಪ್ರಶಸ್ತಿ ಪುರಸ್ಕೃತರ ಸಾಧನೆ ನಿಜಕ್ಕೂ ಹೆಮ್ಮೆ ಪಡುವಂತದ್ದು. ದೇವಾಲಯ ನಿರ್ಮಾಣ, ಸಮಾಜಿಕ ಸೇವೆ, ಕೃಷಿ ಹೀಗೆ ಹಲವು ಕ್ಷೇತ್ರದಲ್ಲಿ ಸಾಧನೆಗೈದವರನ್ನು ಜಾನಪದ ಕಲಾವಿದರ ನಡುವೆ ಗೌರವಿಸುತ್ತಿರುವುದು ಅವರ ಸಾಧನೆಗೆ ಹಿಡಿದ ಕೈಗನ್ನಡಿ ಎಂದರು.

ಜಾನಪದ ಕಲಾವಿದರೊಂದಿಗೆ ಶ್ರೀಮಠ ಅವಿನಾಭಾವ ಸಂಬಂಧ ಹೊಂದಿದೆ. ನಮ್ಮ ಗ್ರಾಮೀಣ ಸೊಗಡು, ಬೇರುಗಳು ನಶಿಸಬಾರದು. ಇವುಗಳನ್ನು ಬೆಳೆಸಬೇಕು ಪ್ರತಿ ವರ್ಷ ಶ್ರೀಮಠದಲ್ಲಿ ನಡೆಯುವ ರಾಜ್ಯ ಮಟ್ಟದ ಜಾನಪದ ಕಲಾ ಮೇಳಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಜನಪದ ಕಲಾವಿದರು ಆಗಮಿಸಿ, ತಮ್ಮ ತವರಿಗೆ ಬಂದಷ್ಟೇ ಖುಷಿಯಿಂದ ಹಾಡಿ, ನಲಿದು ಭೈರವನ ಕ್ಷೇತ್ರದಲ್ಲಿ ಹೋಗುತ್ತಾರೆ. ಇಂತಹ ಕಲಾವಿದರ ಕಲೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕಿದೆ ಎಂದರು.

ಸಮಾರಂಭದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಶೋತ್ತಮಾನಂದನಾಥ ಸ್ವಾಮೀಜಿ, ಹಂಪಿ ಗಾಯಿತ್ರಿ ಪೀಠದ ದಯಾನಂದಪುರಿ ಸ್ವಾಮೀಜಿ, ಬೆಂಗಳೂರು ಗೋಸಾಯಿ ಮಠದ ಮಂಜುನಾಥ ಸ್ವಾಮೀಜಿ, ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಸೋಮೇಶ್ವರನಾಥಸ್ವಾಮೀಜಿ, ಸೌಮ್ಯನಾಥಸ್ವಾಮೀಜಿ, ಗುಣನಾಥಸ್ವಾಮೀಜಿ, ಚೈತನ್ಯನಾಥಸ್ವಾಮೀಜಿ, ಧರ್ಮಪಾಲನಾಥಸ್ವಾಮೀಜಿ, ಮಂಗಳನಾಥಸ್ವಾಮೀಜಿ, ವಿದ್ಯಾಧರಸ್ವಾಮೀಜಿ ಸೇರಿದಂತೆ ಸಹಸ್ರಾರು ಜಾನಪದ ಕಲಾವಿದರು ಇದ್ದರು.ಮುತ್ತಿನ ಪಾಲಕಿ ಉತ್ಸವ:

ಆದಿಚುಂಚನಗಿರಿ ಕ್ಷೇತ್ರದಲ್ಲಿ ಮೂರು ದಿನಗಳ ಕಾಲ ನಡೆಯುವ ರಾಜ್ಯಮಟ್ಟದ 47ನೇ ಜಾನಪದ ಕಲಾಮೇಳದ ಪ್ರಯುಕ್ತ ಗುರುವಾರ ಸಂಜೆ ಆಯೋಜಿಸಿದ್ದ ಡಾ.ನಿರ್ಮಲಾನಂದನಾಥಶ್ರೀಗಳ ಮುತ್ತಿನ ಪಾಲಕಿ ಉತ್ಸವ ಮತ್ತು ಶ್ರೀ ಕಾಲಭೈರವೇಶ್ವರಸ್ವಾಮಿ ಪುಷ್ಕರಣಿಯಲ್ಲಿ ನಡೆದ ತೆಪ್ಪೋತ್ಸವವನ್ನು ಅಪಾರ ಸಂಖ್ಯೆಯ ಭಕ್ತರು ವೀಕ್ಷಿಸಿ ಕಣ್ತುಂಬಿಕೊಂಡರು.

ತೆಪ್ಪೋತ್ಸವಕ್ಕೂ ಮುನ್ನ ನಿರ್ಮಲಾನಂದನಾಥ ಶ್ರೀಗಳನ್ನು ಸರ್ವಾಲಂಕೃತ ಮುತ್ತಿನ ಪಾಲಕಿಯಲ್ಲಿ ಕೂರಿಸಿ ಕ್ಷೇತ್ರದ ರಥದ ಬೀದಿಯ ಜೋಡಿರಸ್ತೆಯಿಂದ ಶ್ರೀ ಕಾಲಭೈರವೇಶ್ವರಸ್ವಾಮಿ ಪುಷ್ಕರಣಿವರೆಗೆ ರಾಜ್ಯದ ವಿವಿದೆಡೆಗಳಿಂದ ಆಗಮಿಸಿದ್ದ ಹತ್ತಾರು ಬಗೆಯ ಜಾನಪದ ಕಲಾತಂಡಗಳು ಮತ್ತು ಮಂಗಳವಾದ್ಯದೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು.

ಬಗೆ ಬಗೆಯ ಹೂವು ಮತ್ತು ವಿದ್ಯುತ್‌ ದೀಪಗಳಿಂದ ಸಿಂಗರಿಸಿದ್ದ ತೆಪ್ಪೋತ್ಸವದ ಒಂದು ಬದಿಯಲ್ಲಿ ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳ ಪುತ್ಥಳಿ ಮತ್ತೊಂದು ಬದಿಯಲ್ಲಿ ಶ್ರೀ ಕಾಲಭೈರವೇಶ್ವರ, ಮಾಳಮ್ಮದೇವಿ ಮತ್ತು ಚೌಡೇಶ್ವರಿದೇವಿಯ ಮೂರ್ತಿಯನ್ನಿರಿಸಲಾಗಿತ್ತು. ಪೂಜೆ ಸಲ್ಲಿಸಿ ತೆಪ್ಪದಲ್ಲಿ ಕುಳಿತ ನಿರ್ಮಲಾನಂದನಾಥಶ್ರೀಗಳು ನೆರೆದಿದ್ದ ಭಕ್ತಾದಿಗಳಿಗೆ ದರ್ಶನಾಶೀರ್ವಾದ ನೀಡಿದರು. ಚಿನ್ನದ ಕಿರೀಟ ಧರಿಸಿ ಸರ್ವಾಲಂಕಾರ ಭೂಷಿತರಾಗಿ ತೆಪ್ಪೋತ್ಸವದಲ್ಲಿ ಕುಳಿತ್ತಿದ್ದ ಶ್ರೀಗಳನ್ನು ನೋಡಿ ಕಣ್ತುಂಬಿಕೊಂಡ ಭಕ್ತರು ತಮ್ಮ ಭಕ್ತಿಭಾವ ಸಮರ್ಪಿಸಿದರು.

ತೆಪ್ಪೋತ್ಸವ ಆರಂಭಗೊಂಡು ಮುಕ್ತಾಯದವರೆಗೂ ಬಣ್ಣ ಬಣ್ಣದ ಪಟಾಕಿಗಳು ಸಿಡಿದು ಬಾನಂಗಳದಲ್ಲಿ ಚಿತ್ತಾರಗಳು ಬಿಡಿಸಿದವು. ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದ ಆದಿಚುಂಚನಗಿರಿ ಮಹಾಸಂಸ್ಥಾನಮಠ ನೆರೆದಿದ್ದ ಜನಪದ ಕಲಾವಿದರು ಮತ್ತು ಭಕ್ತರಿಗೆ ವಿಶೇಷ ಮೆರಗು ನೀಡಿತ್ತು.