ಫೆಬ್ರವರಿಯೊಳಗೆ ಕ್ರೀಡಾಂಗಣ ಕಾಮಗಾರಿ ಪೂರ್ಣ

| Published : Dec 14 2023, 01:30 AM IST

ಸಾರಾಂಶ

ಫೆಬ್ರವರಿಯೊಳಗೆ ಕ್ರೀಡಾಂಗಣ ಕಾಮಗಾರಿ ಪೂರ್ಣಸರ್ ಎಂ.ವಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ ಅಕ್ರಂ ಪಾಷ

ಸರ್ ಎಂ.ವಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ ಅಕ್ರಂ ಪಾಷಕನ್ನಡಪ್ರಭ ವಾರ್ತೆ ಕೋಲಾರ

ನಗರದ ಸರ್‌ ಎಂವಿ ಕ್ರೀಡಾಂಗಣವನ್ನು ೮ ಕೋಟಿ ರು.ಗಳ. ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗುತ್ತಿದ್ದು, ಕಾಮಗಾರಿಗಳು ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಕಾಮಗಾರಿ ಪೂರ್ಣಗೊಂಡ ನಂತರ ಈ ಕ್ರೀಡಾಂಗಣವು ಅಂತರಾಷ್ಟ್ರೀಯ ಕ್ರೀಡಾ ಕೂಟಗಳನ್ನು ನಡೆಸಲು ಅರ್ಹವಾಗಲಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ನುಡಿದರು.

ನಗರದ ಸರ್ ಎಂ.ವಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಮಂಗಳವಾರ ವೀಕ್ಷಿಸಿದ ಅವರು ಸುದ್ಧಿಗಾರರೊಂದಿಗೆ ಮಾತನಾಡಿ, ೪೦೦ ಮೀಟರ್ ಸಿಂಥೇಟಿಕ್ ಟ್ರಾಕ್ ಹಾಗೂ ಅಥ್ಲೇಟಿಕ್ ಟ್ರಾಕ್‌ಗಳ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದರು.

ವಿಶ್ವ ದರ್ಜೆಯ ಕ್ರೀಡಾಂಗಣ

ಕಾಮಗಾರಿಗಳು ಪೂರ್ಣವಾದ ಮೇಲೆ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳನ್ನು ನಡೆಸಬಹುದಾಗಿದೆ. ವಿಶ್ವ ಮಟ್ಟದ ಅಥ್ಲೇಟಿಕ್ಸ್ ಸಂಸ್ಥೆಯಿಂದ ನಮ್ಮ ಕ್ರೀಡಾಂಗಣವು ಅರ್ಹತೆಯ ಪ್ರಮಾಣ ಪತ್ರ ಪಡೆಯಲಿದೆ. ಕ್ರೀಡಾಂಗಣದಲ್ಲಿ ಒಟ್ಟು ೪೮ ಕ್ರೀಡೆಗಳನ್ನು ಆಡುವಂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು, ಲಾಂಗ್ ಜಂಪ್, ಹೈ ಜಂಪ್, ಜಾವಲಿನ್, ಥ್ರೋ ಡಿಸ್ಕ್, ಸೇರಿದಂತೆ ಒಲಂಪಿಕ್ ಈವೆಂಟ್ಸ್‌ಗಳು ನಡೆಸಬಹುದಾಗಿದೆ ಎಂದರು.

ವಿಶೇಷವಾಗಿ ಪುಟ್‌ಬಾಲ್ ಕ್ರೀಡೆಯನ್ನು ಆಡಲು ಕ್ರೀಡಾಂಗಣದ ಮಧ್ಯ ಭಾಗದಲ್ಲಿ ನೈಸರ್ಗಿಕ ಹುಲ್ಲುಗಳ ಬೆಳೆಸಲಾಗುತ್ತಿದೆ. ಅಂತರಾಷ್ಟ್ರೀಯ ಮಟ್ಟದ ಕ್ರೀಡಾಂಗಣದ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.ಫೆಬ್ರವರಿ ಅಂತ್ಯದೊಳಗೆ ಉದ್ಘಾಟನೆ

೨೦೨೪ರ ಜ.೨೬ ರಂದು ಗಣರಾಜ್ಯೋತ್ಸವಕ್ಕೆ ಆಧುನಿಕ ಕ್ರೀಡಾಂಗಣ ಲೋಕಾರ್ಪಣೆ ಮಾಡಬೇಕೆನ್ನುವ ಯೋಜನೆ ಇತ್ತು ಆದರೆ ಕೆಲವು ತಾಂತ್ರಿಕ ಸಮಸ್ಯೆಗಳಿಂದ ತಡವಾಗಿದೆ, ಜನವರಿ ೨೬ ಒಂದು ಭಾಗದ ಮ್ಯಾಟ್‌ನ್ನು ಹಾಕಿಕೊಡುವ ಮೂಲಕ ಗಣ ರಾಜ್ಯೋತ್ಸವಕ್ಕೆ ಯಾವುದೇ ರೀತಿ ತೊಂದರೆಯಾಗದಂತೆ ಅನುವು ಮಾಡಿಕೊಡಲಾಗುವುದು. ನಂತರದಲ್ಲಿ ಫೆಬ್ರವರಿ ಅಂತ್ಯದೊಳಗೆ ಕ್ರೀಡಾಂಗಣದ ಎಲ್ಲ ಕಾಮಗಾರಿಗಳು ಪೂರ್ಣಗೊಂಡು ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು.

ಸಿಂಥೆಟಿಕ್‌ ಮ್ಯಾಟ್‌ ಅಳವಡಿಕೆ

ಸಿಂಥೇಟಿಕ್ ಮ್ಯಾಟ್ ಹಾಕುವುದಕ್ಕೆ ೬ ವಾರಗಳ ಬೇಕಾಗುತ್ತದೆ. ಮೊದಲ ಹಂತವಾಗಿ ಗಣರಾಜ್ಯೋತ್ಸವಕ್ಕೆ ಒಂದು ಭಾಗವನ್ನು ಜ.೧೦ರಂದು ಪೂರ್ಣಗೊಳಿಸಲಾಗುವುದು ಉಳಿದಂತೆ ಫೆಬ್ರವರಿ ಅಂತ್ಯಕ್ಕೆ ಪೂರ್ಣಗೊಳಿಸುವುದಾಗಿ ಸಂಬಂಧಪಟ್ಟ ಸಹಾಯಕ ಎಜನಿಯರ್ ವಿವರಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಇಂಜನಿಯರ್ ಹರೀಶ್, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾಂಗಣ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ, ವಾರ್ತಾಇಲಾಖೆಯ ಸಹಾಯಕ ಅಧಿಕಾರಿ ಮಂಜೇಶ್ ಇದ್ದರು.