ರೋಗಿಗಳ ಆರೈಕೆ ನಿರ್ಲಕ್ಷಿಸಿ ಆಸ್ಪತ್ರೇಲಿ ಕ್ರಿಕೆಟ್‌ ಆಡಿದ ಸಿಬ್ಬಂದಿ

| Published : Jun 16 2024, 01:53 AM IST

ರೋಗಿಗಳ ಆರೈಕೆ ನಿರ್ಲಕ್ಷಿಸಿ ಆಸ್ಪತ್ರೇಲಿ ಕ್ರಿಕೆಟ್‌ ಆಡಿದ ಸಿಬ್ಬಂದಿ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತವಾದ ಆರೈಕೆ ದೊರಕುತ್ತಿಲ್ಲ ಎಂದು ಆರೋಪ ಕೇಳಿ ಬರುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಆಸ್ಪತ್ರೆ ಸಿಬ್ಬಂದಿ ಡಯಾಲಸೀಸ್ ಕೇಂದ್ರದಲ್ಲಿ ಕ್ರಿಕೆಟ್‌ ಆಡುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕನ್ನಡಪ್ರಭ ವಾರ್ತೆ ಮಧುಗಿರಿ

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತವಾದ ಆರೈಕೆ ದೊರಕುತ್ತಿಲ್ಲ ಎಂದು ಆರೋಪ ಕೇಳಿ ಬರುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಆಸ್ಪತ್ರೆ ಸಿಬ್ಬಂದಿ ಡಯಾಲಸೀಸ್ ಕೇಂದ್ರದಲ್ಲಿ ಕ್ರಿಕೆಟ್‌ ಆಡುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ತಾಲೂಕಿನ ಮಿಡಿಗೇಶಿ ಹೋಬಳಿ ಚಿನ್ನೇನಹಳ್ಳಿಯಲ್ಲಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಲುಷಿತ ನೀರು ಸೇವಿಸಿ ನೂರಾರು ಜನ ಆಸ್ವಸ್ಥರಾಗಿದ್ದರು. ಈ ಪೈಕಿ ಮೂರು ವರ್ಷದ ಮಗು ಮೀನಾಕ್ಷಿ ಸೇರಿದಂತೆ ಹಲವರು ಮೃತಪಟ್ಟಿದ್ದು, ಇದರಿಂದ ಗ್ರಾಮದಲ್ಲಿ ಸೂತಕದ ಛಾಯೇ ಆವರಿಸಿದೆ.

ಈಗಲೂ ಚಿನ್ನೇನಹಳ್ಳಿ ಗ್ರಾಮದಲ್ಲಿ ವಾಂತಿ-ಬೇಧಿ ನಿಯಂತ್ರಣಕ್ಕೆ ಬಂದಿಲ್ಲ. ಪ್ರತಿನಿತ್ಯ ಒಂದಲ್ಲಾ ಒಂದು ಪ್ರಕರಣಗಳು ಕಾಣಿಸಿಕೊಂಡು ಜನರು ಆಸ್ಪತ್ರೆಗಳ ಕದ ತಟ್ಟಿ ಚಿಕಿತ್ಸೆಗೆ ಆಳಗಾಗುತ್ತಿದ್ದಾರೆ. ಈ ಘಟನೆ ಮಾಸುವ ಮುನ್ನವೇ ಆಸ್ಪತ್ರೆಯ ಡಯಾಲಿಸೀಸ್‌ ಕೇಂದ್ರದ ಸಿಬ್ಬಂದಿ ಜನರ ಆರೋಗ್ಯದ ಬಗ್ಗೆ ಕಾಳಜಿ ತೋರದೆ ಕೇಂದ್ರವನ್ನು ಕ್ರೀಡಾಗಂಣವನ್ನಾಗಿ ಮಾರ್ಪಡಿಸಿಕೊಂಡಿರುವುದು ವಿಷಾದದ ಸಂಗತಿ ಎಂದು ನಾಗರಿಕರು ಸಿಬ್ಬಂದಿ ವಿರುದ್ಧ ದೂರಿದ್ದಾರೆ. ಲಾಗ್‌ ಪುಸ್ತಕ ಹಿಡಿದು ಬ್ಯಾಟ್‌ ಬೀಸುತ್ತಿರುವ ಸಿಬ್ಬಂದಿ: ಡಯಾಲಿಸೀಸ್‌ ಕೇಂದ್ರದ ಸಿಬ್ಬಂದಿ ಲಾಗ್‌ ಪುಸ್ತಕ ಹಿಡಿದು ಕ್ರಿಕೆಟ್‌ ಆಟ ಆಡಲು ಬ್ಯಾಟ್ ಹಿಡಿದು ಪ್ಲಾಸ್ಟಿಕ್‌ ಚಂಡು ಬೀಸುವ ದೃಶ್ಯ ಕಾಣುತ್ತಿದೆ. ಅತ್ಯಂತ ಜವಾಬ್ದಾರಿಯುತವಾಗಿ ಸರ್ಕಾರಿ ಕೆಲಸ ಮಾಡಬೇಕಾದ ಸಿಬ್ಬಂದಿ ಕ್ರೀಡಾಳುಗಳಂತೆ ಆಸ್ಪತ್ರೆಯ ಕೊಠಡಿಯಲ್ಲಿ ಸಮವಸ್ತ್ರದಲ್ಲೇ ಕೇಂದ್ರವನ್ನು ಕ್ರಿಕೆಟ್‌ ಆಟದ ಅಂಗಳವನ್ನಾಗಿ ಮಾಡಿಕೊಂಡು ರಾಜರೋಷವಾಗಿ ಆಟ ಆಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದು, ಸಾರ್ವಜನಿಕರ ಆರೋಗ್ಯ ಸೇವೆಗೆ ಇವರು ಆರ್ಹರಲ್ಲ ಎಂಬುದನ್ನು ತೋರಿಸುತ್ತದೆ. ಒಬ್ಬ ವ್ಯಕ್ತಿ ಬ್ಯಾಟಿಂಗ್‌, ಮತ್ತೊಬ್ಬ ಬೌಲಿಂಗ್‌ ಮಾಡುವ ಮೂಲಕ ಜನರ ಆರೋಗ್ಯದ ಕಡೆ ಅರಿವಿಲ್ಲದೆ ಆಟ ಆಡಿದ್ದರೆ, ಇನ್ನೂ ಮಹಿಳಾ ಸಿಬ್ಬಂದಿ ಆಟ ನೋಡಿ ಚಪ್ಪಾಳೆ ತಟ್ಟುವ ಮೂಲಕ ಪ್ರೋತ್ಸಾಹ ನೀಡಿದ್ದಾರೆ. ಈ ವಿಡಿಯೋವನ್ನು ಡಯಾಲಿಸಸ್‌ ಕೇಂದ್ರದ ಪ್ರಮುಖ ಚಿಕಿತ್ಸಕ ಲತೇಶ್‌ ಕುಮಾರ್‌ ಎಚ್‌. ಸಾಮಾಜಿಕ ಜಾಲತಾಣಗಳಲ್ಲಿ ಆಪ್ಲೋಡ್‌ ಮಾಡಿದ್ದು ಸಿಬ್ಬಂದಿ ಹರ್ಷವರ್ದನ್‌, ದಿವ್ಯಾ ಇರುವ ವಿಡಿಯೋ ವೈರಲ್ ಆಗಿದೆ.

ವಿಷಯ ತಿಳಿದ ತಕ್ಷಣ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಈಗಿರುವ ಡಯಾಲಿಸ್‌ಸ್‌ ಸಿಬ್ಬಂದಿ ಕರ್ತವ್ಯದ ಬಗ್ಗೆ ಕಾಳಜಿ ವಹಿಸದೇ ಕ್ರಿಕೆಟ್‌ ಆಟ ಆಡುವ ಮೂಲಕ ಆಸ್ಪತ್ರೆಗೆ ಮುಜುಗರವನ್ನುಂಟು ಮಾಡಿದ್ದಾರೆ. ಆದ್ದರಿಂದ ಲತೇಶ್‌ಕುಮಾರ್‌, ಹರ್ಷವರ್ದನ್‌, ದಿವ್ಯ ಅವರನ್ನು ಈ ಕೂಡಲೇ ಮಧುಗಿರಿ ಆಸ್ಪತ್ರೆಯಿಂದ ಹಿಂಪಡೆದು, ಬೇರೆ ಸಿಬ್ಬಂದಿ ನಿಯೋಜಿಸಿ ಮುಂದಿನ ಕ್ರಮವಹಿಸುವಂತೆ ಖಾಸಗಿ ಏಜನ್ಸಿಗೆ ಪತ್ರ ಬರೆಯಲಾಗಿದೆ.

ಮಂಜುನಾಥ್‌, ಡಿಎಚ್‌ಒ