ಕೆಲಸದಿಂದ ವಜಾಗೊಳಿಸಿರುವುದು ಖಂಡಿಸಿ ಸಿಬ್ಬಂದಿ ಪ್ರತಿಭಟನೆ

| Published : Nov 14 2025, 03:15 AM IST

ಕೆಲಸದಿಂದ ವಜಾಗೊಳಿಸಿರುವುದು ಖಂಡಿಸಿ ಸಿಬ್ಬಂದಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಇಂಡಸ್ ಟವರ್ಸ್ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿದ್ದ ತಾಂತ್ರಿಕ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಭಾರತೀಯ ಪ್ರೈವೇಟ್ ಟೆಲಿಕಾಂ ಮಜ್ದೂರ ಸಂಘ (ಬಿಪಿಟಿಎಂಎಸ್) ನೇತೃತ್ವದಲ್ಲಿ ಗುರುವಾರ ಸಂಸ್ಥೆಯ ಕಾರ್ಮಿಕರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಹಾವೇರಿ: ಇಂಡಸ್ ಟವರ್ಸ್ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿದ್ದ ತಾಂತ್ರಿಕ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಭಾರತೀಯ ಪ್ರೈವೇಟ್ ಟೆಲಿಕಾಂ ಮಜ್ದೂರ ಸಂಘ (ಬಿಪಿಟಿಎಂಎಸ್) ನೇತೃತ್ವದಲ್ಲಿ ಗುರುವಾರ ಸಂಸ್ಥೆಯ ಕಾರ್ಮಿಕರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆ ಜಿಲ್ಲಾಧ್ಯಕ್ಷ ಅಚ್ಯುತ್ ಮಾಯಾಚಾರಿ ಮಾತನಾಡಿ, ಇಂಡಸ್ ಟವರ್ಸ್ ಸಂಸ್ಥೆಗೆ ಹೊಸ ಗುತ್ತಿಗೆದಾರರು ಬಂದ ಬಳಿಕ ಅನೇಕ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಕಾರ್ಮಿಕರು ತಮ್ಮ ಹಕ್ಕುಗಳನ್ನು ಮರುಸ್ಥಾಪಿಸಲು ಹಾಗೂ ನ್ಯಾಯಯುತ ಕಾರ್ಮಿಕ ವ್ಯವಸ್ಥೆಗಾಗಿ ಹೋರಾಟ ಆರಂಭಿಸಿದ್ದಾರೆ. ಹೊಸ ಗುತ್ತಿಗೆದಾರರು ಕೆಲಸದಿಂದ ವಜಾ ಮಾಡಿರುವ ಎಲ್ಲಾ ತಾಂತ್ರಿಕ ಸಿಬ್ಬಂದಿಗಳನ್ನು ಮರುನಿಯೋಜನೆ ಮಾಡಿಕೊಂಡು ಕೆಲಸ ಕೊಡಬೇಕು. ಯಾವುದೇ ಕಾರ್ಮಿಕ ಯೂನಿಯನ್ ಚಟುವಟಿಕೆಯಲ್ಲಿ ಭಾಗವಹಿಸಿದ್ದಾನೆಂಬ ಕಾರಣಕ್ಕೆ ಕೆಲಸದಿಂದ ಬಿಡಿಸುವುದು ಸರಿಯಲ್ಲ. ಕಾನೂನುಬದ್ಧ ಸೌಲಭ್ಯಗಳಾದ ವಾರದ ರಜೆ, ರಾಷ್ಟ್ರೀಯ ಹಬ್ಬಗಳ ರಜೆ, ಎಂಟು ತಾಸು ಕೆಲಸ, ಹೆಚ್ಚುವರಿ ಕೆಲಸಕ್ಕೆ ನ್ಯಾಯಸಮ್ಮತ ವೇತನ ನೀಡಬೇಕೆಂದು ಒತ್ತಾಯಿಸಿದರು.ಮುಖಂಡ ಯಲ್ಲನಗೌಡ ಮರಿಗೌಡ್ರ ಮಾತನಾಡಿ, ನ್ಯಾಯಯುತ ವೇತನ ಪರಿಷ್ಕರಣೆ ಮತ್ತು ಎಲ್ಲರಿಗೂ ಸಮಾನ ವೇತನ ವ್ಯವಸ್ಥೆ ಜಾರಿಗೊಳಿಸಬೇಕು. ಎಲ್ಲಾ ಕಾರ್ಮಿಕರಿಗೆ ವೈದ್ಯಕೀಯ ಹಾಗೂ ಅಪಘಾತ ವಿಮೆ ಮಾಡಿಸಿಕೊಡಬೇಕು. ಕರ್ತವ್ಯದಲ್ಲಿ ಸಾವು ಸಂಭವಿಸಿದಲ್ಲಿ ಕುಟುಂಬಕ್ಕೆ 25 ಲಕ್ಷ ರು. ಪರಿಹಾರ ನೀಡಬೇಕು. ಎಲ್ಲಾ ಫೀಲ್ಡ್ ಸಿಬ್ಬಂದಿಗಳಿಗೆ ಅಗತ್ಯ ಸುರಕ್ಷತಾ ಸಾಮಗ್ರಿಗಳನ್ನು ಕೊಡಬೇಕು. ಕಾರ್ಮಿಕರಿಗೂ ಕಾನೂನುಬದ್ದ ರಕ್ಷಣೆಯನ್ನು ಖಚಿತಪಡಿಸಬೇಕೆಂದು ಒತ್ತಾಯಿಸಿದರು.ಈ ವೇಳೆ ಸಂಘದ ಉಪಾಧ್ಯಕ್ಷ ಅನೀಲ ಅರ್ಕಸಾಲಿ, ಲೋಕೇಶ ಕುಬಸದ, ಮಾಲತೇಶ ವಾಲಗರ, ಸಚಿನ ಓಣಿಕೇರಿ, ಅಭಿಷೇಕ ಕೊಡಿಬಾಗರ ಸೇರಿದಂತೆ ಅನೇಕರು ಹಾಜರಿದ್ದರು.