ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ನಗರದ ಅಲ್ಲಮಪ್ರಭು ಆವರಣದಲ್ಲಿ ಫೆ.24ರಂದು ಆಯೋಜಿಸಿರುವ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಜಿಲ್ಲಾ ಮಟ್ಟದ ಸಮಾವೇಶಕ್ಕೆ ಜಿಲ್ಲಾಡಳಿತ ಸಜ್ಜಾಗಿದೆ.
ಈ ಸಮಾವೇಶದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಲ್ಗೊಳ್ಳುತ್ತಿದ್ದು, ಜಿಲ್ಲೆಯಿಂದ ಸರ್ಕಾರದ ಗ್ಯಾರಂಟಿ ಸೌಲಭ್ಯ ಪಡೆದ ಫಲಾನುಭವಿಗಳು ಆಗಮಿಸುತ್ತಿದ್ದಾರೆ. ಇದಕ್ಕಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಮಾವೇಶ ನಡೆದಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.ಜಿಲ್ಲಾಮಟ್ಟದಲ್ಲಿ ಸಮಾವೇಶ ನಡೆಯುತ್ತಿದ್ದು, ಅದ್ಧೂರಿ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಕಾರ್ಯಕ್ರಮ ಯಶಸ್ವಿಗೆ ಹಲವು ಸುತ್ತಿನ ಸಭೆ ನಡೆಸಿದ್ದು, ಜಿಲ್ಲಾಡಳಿತ ಸಮಾವೇಶಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಎಲ್ಲೆಲ್ಲೂ ಕಟೌಟ್:ಗ್ಯಾರಂಟಿ ಸಮಾವೇಶಕ್ಕೆ ಆಗಮಿಸುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರು ಶಾಸಕರಿಗೆ ಶುಭ ಕೋರುವ ಫ್ಲೆಕ್ಸ್‌ಗಳು ಹಾಗೂ ಕಟೌಟುಗಳ ನಗರದ ತುಂಬಾ ರಾರಾಜಿಸುತ್ತಿವೆ. ಮುಂಚೂಣಿ ಕಾರ್ಯಕರ್ತರು ತಮ್ಮ ನಾಯಕರ ಫೋಟೋದೊಂದಿಗೆ ತಮ್ಮ ಭಾವಚಿತ್ರವನ್ನೂ ಹಾಕಿಕೊಂಡು ಮಿಂಚುತ್ತಿರುವ ಫ್ಲೆಕ್ಸ್‌ಗಳು ಎಲ್ಲೆಡೆ ಕಂಡುಬಂದಿದೆ. ಜಿಲ್ಲಾ ಕಾಂಗ್ರೆಸ್ ಸಮಿತಿಯು ಕಾರ್ಯಕ್ರಮ ಯಶಸ್ವಿಗೆ ಬಿರುಸಿನಿಂದ ಕೆಲಸ ಮಾಡುತ್ತಿದೆ.
ಲೋಕಸಭೆ ಚುನಾವಣೆ ಸಮೀಪದಲ್ಲಿರುವ ಕಾರಣ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವ ಮತ್ತು ಆ ಮೂಲಕ ಮುಂದಿನ ಚುನಾವಣೆಯಲ್ಲಿ ಲಾಭಗಳಿಸಿಕೊಳ್ಳುವ ಹವಣಿಕೆಯಲ್ಲಿ ಆಡಳಿತ ಪಕ್ಷವಿದೆ. ಅಲ್ಲಮಪ್ರಭು ಮೈದಾನದಲ್ಲಿ ಸುಮಾರು 50 ಸಾವಿರ ಜನರು ಸೇರುವ ನಿರೀಕ್ಷೆಯಿದೆ. ಮೈದಾನದಲ್ಲಿ ಬೃಹತ್ ಪೆಂಡಾಲ್ ಮತ್ತು ವೇದಿಕೆ ನಿರ್ಮಾಣ ಮಾಡಲಾಗಿದೆ. ಫಲಾನುಭವಿಗಳಿಗೆ ಕುಡಿಯುವ ನೀರು, ಉಪಾಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ. ಪ್ರತಿ ತಾಲೂಕಿನಿಂದಲೂ ಫಲಾನುಭವಿಗಳು ಆಗಮಿಸಲಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಅನ್ನಭಾಗ್ಯ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಯುವನಿಧಿ ಯೋಜನೆಗಳ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆಯಿದೆ.- - - ಬಾಕ್ಸ್ ಗ್ಯಾರಂಟಿ ಸಮಾವೇಶಕ್ಕೆ ಬನ್ನಿ: ಎಂ.ಶ್ರೀಕಾಂತ್ ಶಿವಮೊಗ್ಗ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯ ಪ್ರತಿ ಅರ್ಹರಿಗೆ ತಲುಪಿಸುವ ಉದ್ದೇಶದಿಂದ ನಡೆಸುತ್ತಿರುವ ಗ್ಯಾರಂಟಿ ಸಮಾವೇಶಕ್ಕೆ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಮನವಿ ಮಾಡಿದ್ದಾರೆ.
ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರೆಂಟಿ ಯೋಜನೆಗಳ ಜಿಲ್ಲಾಮಟ್ಟದ ಫಲಾನುಭವಿಗಳ ಸಮಾವೇಶ ಫೆ.24 ರಂದು ನಗರದ ಅಲ್ಲಮ ಪ್ರಭು (ಫ್ರೀಡಂ ಪಾರ್ಕ್) ಆವರಣದಲ್ಲಿ ಆಯೋಜಿಸಲಾಗಿದ್ದು, ಅರ್ಹ ಫಲಾನುಭವಿಗಳ ಕಾರ್ಯಕ್ರಮದಲ್ಲಿ ಹಾಜರಿರುವಂತೆ ಕೋರಿದ್ದಾರೆ.ಕಾರ್ಯಕ್ರಮದಲ್ಲಿ ಜಿಲ್ಲಾದ್ಯಂತ ಸುಮಾರು 50 ಸಾವಿರ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಭಾಗವಹಿಸಲಿದ್ದು, ಫಲಾನುಭವಿಗಳ ಅನುಕೂಲಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆ. ಹಾಗಾಗಿ, ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಜಾತಿ, ಮತ ನೋಡದೇ ಎಲ್ಲ ವರ್ಗದ ಜನರಿಗೂ ಯೋಜನೆ ತಲುಪಿಸಿದೆ. ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಗೆ ೪.೫೮ ಲಕ್ಷ ಫಲಾನುಭವಿಗಳು, ಗೃಹ ಲಕ್ಷಿ ಯೋಜನೆಗೆ 3.55 ಲಕ್ಷ ಫಲಾನುಭವಿಗಳು, ಅನ್ನಭಾಗ್ಯದಿಂದ 3.80 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಿದೆ. ಶಕ್ತಿ ಯೋಜನೆಯಿಂದ ಜಿಲ್ಲಾ ವ್ಯಾಪ್ತಿಯಲ್ಲಿ 1.60 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.ಇನ್ನು ಶಿವಮೊಗ್ಗದಲ್ಲಿ ನಡೆಯುತಿರುವ ಗ್ಯಾರೆಂಟಿ ಸಮಾವೇಶವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಚಿವರು, ಶಾಸಕರು, ಪ್ರಮುಖರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದ್ದಾರೆ.- - - ಬಾಕ್ಸ್-2
ಸಾರಿಗೆ ವ್ಯವಸ್ಥೆ ವ್ಯತ್ಯಯ: ಮನವಿಶಿವಮೊಗ್ಗ: ಶಿವಮೊಗ್ಗ ನಗರದ ಅಲ್ಲಮಪ್ರಭು ಮೈದಾನ (ಫ್ರೀಡಂ ಪಾರ್ಕ್)ನಲ್ಲಿ ಫೆ.24 ರಂದು ಸರ್ಕಾರದ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶಕ್ಕೆ ಫಲಾನುಭವಿಗಳು ಆಗಮಿಸುವ ಸಲುವಾಗಿ ನಿಗಮದ ಶಿವಮೊಗ್ಗ ವಿಭಾಗವು 100 ಬಸ್‍ಗಳನ್ನು ಸಾಂದರ್ಭಿಕ ಒಪ್ಪಂದದ ಮೇರೆಗೆ ಒದಗಿಸಲಾಗುತ್ತಿದೆ. ಆದ್ದರಿಂದ ಫೆ.23ರಂದು ಮಧ್ಯಾಹ್ನದಿಂದ 24ರವರೆಗೆ ನಿಗಮದ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ನಗರ, ಸಾಮಾನ್ಯ ಹಾಗೂ ವೇಗದೂರ ಸಾರಿಗೆಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಕ ಪ್ರಯಾಣಿಕರು ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳು ಸಹಕರಿಸುವಂತೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.- - -
-23ಎಸ್ಎಂಜಿಕೆಪಿ03:ಶಿವಮೊಗ್ಗದ ಅಲ್ಲಮ ಪ್ರಭು ಆವರಣದಲ್ಲಿ ಶನಿವಾರ ನಡೆಯಲಿರುವ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಜಿಲ್ಲಾಮಟ್ಟದ ಸಮಾವೇಶಕ್ಕಾಗಿ ಸಿದ್ಧಗೊಂಡಿರುವ ಬೃಹತ್ ವೇದಿಕೆ.