ಸಾರಾಂಶ
ಅ. 4ರಂದು ನರಗುಂದ ಪಟ್ಟಣದ ಕೋರ್ಟ್ ವೃತ್ತದ ಬಳಿ, ಮಹದಾಯಿ ಹೋರಾಟ ವೇದಿಕೆಯ ಆವರಣದಲ್ಲಿ ರೈತ ಸಮಾವೇಶ ನಡೆಯಲಿದೆ. ನಾಡಿನ ಹಲವಾರು ಜಿಲ್ಲೆಗಳಿಂದ ವಿವಿಧ ರೈತ ಸಂಘದ ನಾಯಕರು ಆಗಮಿಸಲಿದ್ದಾರೆ.
ನರಗುಂದ: ರೈತ ಹೋರಾಟಕ್ಕೆ ಹೆಸರಾದ ಬಂಡಾಯದ ನೆಲದಲ್ಲಿ ಶುಕ್ರವಾರ ನಡೆಯುವ ರೈತ ಸಮಾವೇಶಕ್ಕೆ ವೇದಿಕೆ ಸಜ್ಜಾಗಿದೆ.
ಅ. 4ರಂದು ಪಟ್ಟಣದ ಕೋರ್ಟ್ ವೃತ್ತದ ಬಳಿ, ಮಹದಾಯಿ ಹೋರಾಟ ವೇದಿಕೆಯ ಆವರಣದಲ್ಲಿ ರೈತ ಸಮಾವೇಶ ನಡೆಯಲಿದೆ. ನಾಡಿನ ಹಲವಾರು ಜಿಲ್ಲೆಗಳಿಂದ ವಿವಿಧ ರೈತ ಸಂಘದ ನಾಯಕರು ಆಗಮಿಸಲಿದ್ದಾರೆ.ಈ ಸಮಾವೇಶದಲ್ಲಿ ರೈತ ಸಮುದಾಯದ ಹಲವಾರು ಸಮಸ್ಯೆಗಳ ಕುರಿತು ಚರ್ಚೆ ನಡೆಯಲಿದೆ. ಬೆಳೆಗಳಿಗೆ ಶಾಶ್ವತ ಬೆಂಬಲ ಬೆಲೆ, ರೈತರ ಆತ್ಮಹತ್ಯೆ ತಡೆಗೆ ಯೋಜನೆ ರೂಪಿಸುವುದು, ಮಹದಾಯಿ, ಕೃಷ್ಣಾ, ಭದ್ರಾ, ಕಾವೇರಿ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳ ಜಾರಿ, ಜಲಾಶಯ ಹೂಳು ತೆಗೆಯುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಸುವ ಕುರಿತು ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು.
ರೈತ ಸೇನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಅವರು ಗುರುವಾರ ರೈತ ಸಮಾವೇಶದ ವೇದಿಕೆ ವೀಕ್ಷಣೆ ಮಾಡಿ, ಆನಂತರ ಮಾತನಾಡಿ, ರಾಜ್ಯ ಮತ್ತು ದೇಶದಲ್ಲಿ ರೈತ ಸಂಘಟನೆಗಳು ಒಗ್ಗೂಡಿಸುವ ಉದ್ದೇಶದಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮೂರು ತಿಂಗಳಿಂದ ಸಿದ್ಧತೆ ನಡೆಸಲಾಗಿದೆ. ರಾಷ್ಟ್ರಮಟ್ಟದ ರೈತ ಸಂಘಟನೆಗಳ ಸಂಪರ್ಕ ಮಾಡಿ, ಮುಖಂಡರನ್ನು ಸಮಾವೇಶಕ್ಕೆ ಆಹ್ವಾನಿಸಲಾಗಿದೆ. ಎಲ್ಲ ಸಂಘಟನೆಗಳ ಮುಖಂಡರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.ವೀರಬಸಪ್ಪ ಹೂಗಾರ, ಮಲ್ಲೇಣ್ಣ ಅಲೇಕಾರ, ಎಸ್.ಬಿ. ಜೋಗಣ್ಣವರ, ಸುಭಾಸ ಗಿರಿಯಣ್ಣವರ, ಮಲ್ಲೇಶ ಅಬ್ಬಗೇರಿ, ಫಕೀರಪ್ಪ ಅಣ್ಣಗೇರಿ, ವಿಜಕುಮಾರ ಹೂಗಾರ, ಅರ್ಜುನ ಮಾನೆ, ಹನುಮಂತ ಸರನಾಯ್ಕರ, ವಾಸು ಚವ್ಹಾಣ ಮುಂತಾದವರು ಇದ್ದರು.