ಮೈಷುಗರ್ ಸಕ್ಕರೆ ಕಾರ್ಖಾನೆ ಆರಂಭ ಸದ್ಯಕ್ಕೆ ಅನುಮಾನ..!

| Published : Jul 17 2025, 12:30 AM IST

ಮೈಷುಗರ್ ಸಕ್ಕರೆ ಕಾರ್ಖಾನೆ ಆರಂಭ ಸದ್ಯಕ್ಕೆ ಅನುಮಾನ..!
Share this Article
  • FB
  • TW
  • Linkdin
  • Email

ಸಾರಾಂಶ

ಮೈಷುಗರ್ ಸಕ್ಕರೆ ಕಾರ್ಖಾನೆ ಆರಂಭವಾಗುವುದು ಸದ್ಯಕ್ಕೆ ಅನುಮಾನ. ಜುಲೈ ಮಧ್ಯಭಾಗ ಬಂದರೂ ಕಾರ್ಖಾನೆಯೊಳಗೆ ಚೈನ್ ಕ್ಯಾರಿಯರ್, ಬಾಯ್ಲಿಂಗ್ ಹೌಸ್ ರಿಪೇರಿಯಾಗಿಲ್ಲ. ಸಣ್ಣಪುಟ್ಟ ರಿಪೇರಿ ಕಾರ್ಯಗಳು ಮುಂದುವರೆದೇ ಇವೆ. ಇನ್ನೂ ಕಾರ್ಖಾನೆ ಪರಿಪೂರ್ಣವಾಗಿ ಕಾರ್ಯಾರಂಭ ಮಾಡಲು ಕನಿಷ್ಠ ೧೫ ದಿನದಿಂದ ಒಂದು ತಿಂಗಳಾದರೂ ಬೇಕು ಎಂಬ ಮಾತುಗಳು ಕಾರ್ಖಾನೆ ವಲಯದಿಂದಲೇ ಕೇಳಿಬರುತ್ತಿವೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ಸಕ್ಕರೆ ಕಾರ್ಖಾನೆ ಆರಂಭವಾಗುವುದು ಸದ್ಯಕ್ಕೆ ಅನುಮಾನ. ಜುಲೈ ಮಧ್ಯಭಾಗ ಬಂದರೂ ಕಾರ್ಖಾನೆಯೊಳಗೆ ಚೈನ್ ಕ್ಯಾರಿಯರ್, ಬಾಯ್ಲಿಂಗ್ ಹೌಸ್ ರಿಪೇರಿಯಾಗಿಲ್ಲ. ಸಣ್ಣಪುಟ್ಟ ರಿಪೇರಿ ಕಾರ್ಯಗಳು ಮುಂದುವರೆದೇ ಇವೆ. ಇನ್ನೂ ಕಾರ್ಖಾನೆ ಪರಿಪೂರ್ಣವಾಗಿ ಕಾರ್ಯಾರಂಭ ಮಾಡಲು ಕನಿಷ್ಠ ೧೫ ದಿನದಿಂದ ಒಂದು ತಿಂಗಳಾದರೂ ಬೇಕು ಎಂಬ ಮಾತುಗಳು ಕಾರ್ಖಾನೆ ವಲಯದಿಂದಲೇ ಕೇಳಿಬರುತ್ತಿವೆ.

ಬುಧವಾರದಿಂದ ಕಾರ್ಖಾನೆಯೊಳಗೆ ನಿರಂತರ ಕಬ್ಬು ಅರೆಯುವಿಕೆಗೆ ಚಾಲನೆ ನೀಡಲಾಗುವುದು ಎಂದು ಮೊನ್ನೆಯಷ್ಟೇ ಅಧ್ಯಕ್ಷ ಸಿ.ಡಿ.ಗಂಗಾಧರ್ ಅವರು ಹೇಳಿದ್ದರು. ಆದರೆ, ಕಬ್ಬು ಅರೆಯುವಿಕೆ ಇದುವರೆಗೂ ಆರಂಭ ಕಂಡಿಲ್ಲ. ಕಾರ್ಖಾನೆಗೆ ರೈತರು ತಂದ ಕಬ್ಬನ್ನು ಒಂದೆಡೆ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ. ಇದುವರೆಗೂ ಸುಮಾರು ೧೨೦ ರಿಂದ ೧೩೦ ಟನ್ ಕಬ್ಬನ್ನು ತೂಕ ಮಾಡಿಟ್ಟುಕೊಂಡಿದ್ದಾರೆ ಎಂಬ ಮಾಹಿತಿ ದೊರಕಿದೆ.

ಜೂನ್ ತಿಂಗಳಲ್ಲೇ ಮೈಷುಗರ್ ಕಾರ್ಖಾನೆ ಆರಂಭಿಸುವುದಾಗಿ ಅಧ್ಯಕ್ಷರು ಪ್ರಚಾರ ಗಿಟ್ಟಿಸಿಕೊಂಡಿದ್ದರು. ಇದೀಗ ಜುಲೈ ಮೂರನೇ ವಾರವಾದರೂ ಕಾರ್ಖಾನೆ ಆರಂಭಗೊಳ್ಳುವ ಲಕ್ಷಣಗಳೇ ಕಂಡುಬರುತ್ತಿಲ್ಲ. ದುರಸ್ತಿ ಕಾರ್ಯ ಪೂರ್ಣಗೊಳ್ಳುವ ಮುನ್ನವೇ ಬಾಯ್ಲರ್‌ಗೆ ಶಾಸಕ ಪಿ.ರವಿಕುಮಾರ್ ಅವರಿಂದ ಅಗ್ನಿಸ್ಪರ್ಶ ಮಾಡಿಸಿದರು. ಮೊನ್ನೆ ರೈತರಿಂದ ಕಬ್ಬು ಸ್ವೀಕರಿಸುವ, ರೈತ ಮುಖಂಡರಿಂದ ಪ್ರಾಯೋಗಿಕ ಚಾಲನೆಯನ್ನೂ ಕೊಡಿಸಿ ಮೇಲ್ನೋಟಕ್ಕೆ ಕಾರ್ಖಾನೆ ಕಬ್ಬು ಅರೆಯುವುದಕ್ಕೆ ಸಜ್ಜಾಗಿದೆ ಎಂದು ರೈತರು ಮತ್ತು ಜನರನ್ನು ನಂಬಿಸುವ ಪ್ರಯತ್ನವನ್ನೂ ನಡೆಸಿದರು.

ದುರಸ್ತಿ ಕಾರ್ಯ ಪೂರ್ಣಗೊಂಡಿಲ್ಲ:

ಕಾರ್ಖಾನೆಯ ಒಳಹೊಕ್ಕು ನೋಡಿದಾಗ ಇನ್ನೂ ಕಾರ್ಖಾನೆಯೊಳಗೆ ದುರಸ್ತಿ ಕಾರ್ಯಗಳು ಪೂರ್ಣಗೊಳ್ಳದಿರುವ ದೃಶ್ಯಗಳು ಕಂಡುಬರುತ್ತಿವೆ. ಚೈನ್ ಕ್ಯಾರಿಯರ್, ಬಾಯ್ಲಿಂಗ್ ಹೌಸ್ ದುರಸ್ತಿ ಕಂಡಿಲ್ಲ. ಮಿಲ್ ಸೇರಿದಂತೆ ಅಲ್ಲಲ್ಲಿ ಸಣ್ಣಪುಟ್ಟ ದುರಸ್ತಿ ಕೆಲಸಗಳು ನಡೆಯುತ್ತಿವೆ. ಕೆಲವೆಡೆ ಪೈಪ್‌ಲೈನ್ ಅಳವಡಿಸುವ ಕಾರ್ಯವೂ ನಡೆದಿದೆ. ಕಾರ್ಖಾನೆ ಕಬ್ಬು ಅರೆಯುವುದಕ್ಕೆ ಸಂಪೂರ್ಣವಾಗಿ ಸಜ್ಜಾಗದ ಕಾರಣ ಒಪ್ಪಿಗೆ ಕಬ್ಬಿನ ಕಟಾವು ಕೆಲಸವೂ ನಡೆಯುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಕಾರ್ಖಾನೆ ವ್ಯಾಪ್ತಿಯಲ್ಲಿ ಒಪ್ಪಿಗೆಯಾಗಿರುವ ೪.೫೦ ಲಕ್ಷ ಟನ್ ಕಬ್ಬನ್ನು ಕಟಾವು ಮಾಡಲು ಹೊರ ಜಿಲ್ಲೆಗಳಿಂದ ೨೩ ತಂಡಗಳನ್ನು ಕರೆಸಲಾಗಿದೆ ಎಂದು ಅಧ್ಯಕ್ಷರು ಹೇಳಿದ್ದರು. ಸದ್ಯಕ್ಕೆ ಕಾರ್ಖಾನೆ ಕಬ್ಬು ಅರೆಯುವಿಕೆ ಆರಂಭಿಸುವ ಲಕ್ಷಣಗಳು ಗೋಚರಿಸದಿರುವುದರಿಂದ ಖಾಸಗಿ ಕಾರ್ಖಾನೆಗಳಿಗೆ ಕಬ್ಬು ಕಟಾವು ಮಾಡುವುದಕ್ಕೆ ಹೋಗುತ್ತಿದ್ದಾರೆ.

ಮೈಷುಗರ್ ಕಬ್ಬು ಖಾಸಗಿ ಕಾರ್ಖಾನೆಗಳ ಪಾಲು:

ಈಗಾಗಲೇ ಜಿಲ್ಲೆಯಲ್ಲಿರುವ ಖಾಸಗಿ ಕಾರ್ಖಾನೆಗಳಾದ ಕೋರಮಂಡಲ್, ಚಾಂಷುಗರ್, ಎನ್‌ಎಸ್‌ಎಲ್, ನಿರಾಣಿ ಗ್ರೂಪ್ಸ್‌ನ ಪಿಎಸ್‌ಎಸ್‌ಕೆ ಕಾರ್ಖಾನೆಗಳು ಕಬ್ಬು ಅರೆಯುವಿಕೆಯನ್ನು ಪ್ರಾರಂಭಿಸಿವೆ. ಮೈಷುಗರ್ ವ್ಯಾಪ್ತಿಯ ಕಬ್ಬು ಚಾಂಷುಗರ್, ಎನ್‌ಎಸ್‌ಎಲ್, ಪಿಎಸ್‌ಎಸ್‌ಕೆ ಹಾಗೂ ತಮಿಳುನಾಡಿನ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯನ್ನು ಸೇರುತ್ತಿದೆ. ಕಬ್ಬು ಕಟಾವು ಮಾಡಲು ಮೈಷುಗರ್ ಅಧಿಕಾರಿಗಳು ಕರೆತಂದ ಕೂಲಿಯಾಳುಗಳನ್ನೂ ಬಿಡದೆ ಖಾಸಗಿ ಕಾರ್ಖಾನೆಯವರು ಕರೆದೊಯ್ದು ಕಬ್ಬು ಕಟಾವು ಮಾಡಿಸುತ್ತಿರುವುದು ಕಂಡುಬರುತ್ತಿದೆ.

ಮಂಡ್ಯ ತಾಲೂಕಿನ ಕೀಲಾರ, ಹನಕೆರೆ, ಆಲಕೆರೆ, ಭೂತನಹೊಸೂರು, ಮಂಗಲ, ಹನಿಯಂಬಾಡಿ, ಸಂತೆಕಸಲಗೆರೆ, ದುದ್ದ, ಶಿವಳ್ಳಿ, ಬೇವುಕಲ್ಲು ಸೇರಿದಂತೆ ಆ ವ್ಯಾಪ್ತಿಯ ಸುತ್ತಮುತ್ತಲ ಕಬ್ಬೆಲ್ಲವೂ ಪಿಎಸ್‌ಎಸ್‌ಕೆ, ಎನ್‌ಎಸ್‌ಎಲ್, ಚಾಂಷುಗರ್ ಕಾರ್ಖಾನೆಯ ಪಾಲಾಗುತ್ತಿದೆ. ಮೈಷುಗರ್ ನಿರಂತರವಾಗಿ ಕಬ್ಬು ಅರೆಯುವುದೆಂಬ ನಂಬಿಕೆ ಇಲ್ಲದ ರೈತರು ತಮ್ಮ ಕಬ್ಬನ್ನು ದೂರದ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯವರೆಗೂ ಸಾಗಿಸುತ್ತಿದ್ದಾರೆ.

ಮೈಷುಗರ್ ಕಬ್ಬು ಮೊದಲ ಟಾರ್ಗೆಟ್:

ಖಾಸಗಿ ಸಕ್ಕರೆ ಕಾರ್ಖಾನೆಗಳು ಮೈಷುಗರ್ ಕಾರ್ಖಾನೆ ಕಬ್ಬನ್ನು ಮೊದಲ ಗುರಿಯಾಗಿಸಿಕೊಂಡು ಕಟಾವು, ಸಾಗಣೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿ ಬೆಳೆದಿರುವ ಕಬ್ಬಿನ ಜೊತೆಗೆ ಮೈಷುಗರ್ ಕಬ್ಬನ್ನು ಕಬಳಿಸುತ್ತಾ ತ್ವರಿತವಾಗಿ ಅರೆಯುವಿಕೆಯನ್ನು ಮುಗಿಸುತ್ತಿದ್ದಾರೆ. ರೈತರೂ ಕೂಡ ಒಣಗುತ್ತಿರುವ ಕಬ್ಬನ್ನು ಮೈಷುಗರ್ ಆರಂಭಗೊಳ್ಳುವವರೆಗೂ ಕಾಯದೆ ಖಾಸಗಿ ಕಾರ್ಖಾನೆಗಳಿಗೆ ಸಾಗಿಸುವುದಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.

ಕಾರ್ಖಾನೆ ದುರಸ್ತಿ ಕಾರ್ಯವನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿ ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂಬ ಆರೋಪಗಳೂ ರೈತ ಸಮೂಹದಿಂದ ಕೇಳಿಬರುತ್ತಿದೆ. ಜನವರಿಯಿಂದ ಜೂನ್‌ವರೆಗೂ ಕಾರ್ಖಾನೆ ದುರಸ್ತಿ ಕಾರ್ಯ ಕೈಗೊಳ್ಳದೆ ಕಬ್ಬು ಅರೆಯುವ ಸಮಯದಲ್ಲಿ ದುರಸ್ತಿ ಕಾರ್ಯ ನಡೆಸುತ್ತಿರುವುದು ಹಲವರ ಆಕ್ರೋಶಕ್ಕೂ ಕಾರಣವಾಗಿದೆ.

ಹಣ ಕೊಡದ ಸರ್ಕಾರ:

ಮೈಷುಗರ್ ಕಾರ್ಖಾನೆಯ ಬಾಯ್ಲಿಂಗ್ ಹೌಸ್ ದುರಸ್ತಿ ಕಾರ್ಯಕ್ಕೆ ಮತ್ತು ದುಡಿಮೆ ಬಂಡವಾಳವಾಗಿ ರಾಜ್ಯ ಸರ್ಕಾರ ಇದುವರೆಗೆ ನಯಾಪೈಸೆ ಹಣ ಕೊಟ್ಟಿಲ್ಲ. ೨೦೨೩ರಲ್ಲಿ ಸಾಲದ ರೂಪದಲ್ಲಿ ೫೦ ಕೋಟಿ ರು. ಕೊಟ್ಟಿತು. ಕಾರ್ಖಾನೆಯ ವಿದ್ಯುತ್ ಬಾಕಿ ಮನ್ನಾ, ಬೆಂಗಳೂರು ಕೇಂದ್ರ ಕಚೇರಿಯ ತೆರಿಗೆ ಮನ್ನಾ ಮಾಡಿತ್ತು. ಇದನ್ನು ಹೊರತುಪಡಿಸಿ ಕಾರ್ಖಾನೆ ಪುನಶ್ಚೇತನಕ್ಕೆ ಹಣ ಬಿಡುಗಡೆ ಮಾಡುವುದಕ್ಕೆ ಆಸಕ್ತಿಯನ್ನೇ ತೋರಿಸುತ್ತಿಲ್ಲ.

ಕಾರ್ಖಾನೆಯೊಳಗಿರುವ ಬಾಯ್ಲಿಂಗ್ ಹೌಸ್ ದುರಸ್ತಿಗೆ ೬೦ ಕೋಟಿ ರು., ಎಥೆನಾಲ್ ಘಟಕಕ್ಕೆ ೬೦ ಕೋಟಿ ರು. ಸೇರಿ ೧೨೦ ಕೋಟಿ ರು. ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಸರ್ಕಾರ ಈ ಪ್ರಸ್ತಾವನೆಗೆ ಕವಡೆಕಾಸಿನ ಕಿಮ್ಮತ್ತನ್ನೂ ಕೊಟ್ಟಿಲ್ಲ. ಹಣ ಬಿಡುಗಡೆಯಾಗದೆ ಬಾಯ್ಲಿಂಗ್ ಹೌಸ್ ದುರಸ್ತಿ ಕಂಡಿಲ್ಲ. ಬಾಯ್ಲರ್ ದುರಸ್ತಿಯಾಗದೆ ಕಬ್ಬು ಅರೆಯುವಿಕೆ ಅಸಾಧ್ಯ ಎನ್ನುವಂತಹ ಮಾತುಗಳು ಕೇಳಿಬರುತ್ತಿವೆ.ಮೈಷುಗರ್ ಕಾರ್ಖಾನೆಯಲ್ಲಿ ನಿರಂತರವಾಗಿ ಕಬ್ಬು ಅರೆಯಲಾಗುವುದೆಂಬ ಮಾತೆಲ್ಲಾ ಸುಳ್ಳು. ಅಧ್ಯಕ್ಷರು ಖಾಸಗಿ ಕಾರ್ಖಾನೆಯವರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ನಮ್ಮ ವ್ಯಾಪ್ತಿಯ ಕಬ್ಬು, ಕಾರ್ಖಾನೆಯವರು ಕರೆತಂದಿರುವ ಕೂಲಿ ಆಳುಗಳು ಖಾಸಗಿ ಕಾರ್ಖಾನೆಯವರಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನೂ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರನಾಗಿದ್ದು ಕಾರ್ಖಾನೆ ಸಮರ್ಥವಾಗಿ ಕಬ್ಬು ಅರೆಯುವ ನಂಬಿಕೆ ಇಲ್ಲ.

- ರಮೇಶ್, ಗ್ರಾಪಂ ಸದಸ್ಯ, ಕೀಲಾರಪ್ರತಿ ವರ್ಷ ಮೈಷುಗರ್ ಹೇಗೆ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಾರ್ಖಾನೆಯೊಳಗೆ ಕಬ್ಬು ಅರೆಯುವ ನಾಟಕ ಬಿಟ್ಟರೆ ಬೇರೇನೂ ನಡೆಯುತ್ತಿಲ್ಲ. ದುರಸ್ತಿ ಕಾರ್ಯ ಇನ್ನೂ ಮುಗಿದಿಲ್ಲವೆಂದರೆ ಇದು ಕಾರ್ಖಾನೆ ನಡೆಸುವ ರೀತಿಯೇ. ಕಾರ್ಖಾನೆಯೊಳಗೆ ಗುಂಪುಗಾರಿಕೆ, ಹೊಂದಾಣಿಕೆ ಕೊರತೆಯೂ ಕಾರ್ಖಾನೆ ಅಧಃಪತನಕ್ಕೆ ಕಾರಣವಾಗಿದೆ. ಮತ್ತೆ ಕಾರ್ಖಾನೆ ಕೋಮಾ ಸ್ಥಿತಿಗೆ ತಲುಪುವುದರಲ್ಲಿ ಅನುಮಾನವಿಲ್ಲ.

- ಎಂ.ಎಲ್.ತುಳಸೀಧರ್, ಜೆಡಿಎಸ್ ಮುಖಂಡಅಧ್ಯಕ್ಷರು ಬುಧವಾರದಿಂದ ನಿರಂತರವಾಗಿ ಕಬ್ಬು ಅರೆಯುವುದಾಗಿ ಹೇಳಿದ್ದರು. ಜೂನ್ ತಿಂಗಳಲ್ಲೇ ಕಬ್ಬು ಅರೆಯುವಿಕೆ ಆರಂಭವಾಗಬೇಕಿತ್ತು. ಜುಲೈ ಮೂರನೇ ವಾರ ಬಂದರೂ ಕಾರ್ಖಾನೆಯೊಳಗೆ ಕಬ್ಬು ಅರೆಯುವಿಕೆ ಆರಂಭಗೊಂಡಿಲ್ಲ. ಆರಂಭದಿಂದಲೂ ಬಾಯ್ಲಿಂಗ್ ಹೌಸ್ ದುರಸ್ತಿ ಮಾಡಬೇಕೆಂಬ ವಿಚಾರವನ್ನು ಅಧ್ಯಕ್ಷರು ಹೇಳುತ್ತಿದ್ದಾರೆ. ಸ್ಪಷ್ಟವಾಗಿ ಅವರು ಏನನ್ನೂ ಹೇಳುತ್ತಿಲ್ಲ. ಇದೊಂದು ವಿಪರ್ಯಾಸ.

- ಸುನಂದಾ ಜಯರಾಂ, ರೈತ ಮುಖಂಡರು, ಮಂಡ್ಯನಮ್ಮ ಕಬ್ಬು ನಮ್ಮಿಷ್ಟ.. ಮೈಷುಗರ್‌ಗೇ ಕಬ್ಬು ಕೊಡುತ್ತೇವೆಂದು ನಾವೇನು ಅಗ್ರಿಮೆಂಟ್ ಮಾಡಿಕೊಟ್ಟಿಲ್ಲ. ಕಾರ್ಖಾನೆಯನ್ನು ನಂಬಿ ಕುಳಿತರೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆಯೇ ಗತಿ. ನಮ್ಮ ಕಬ್ಬನ್ನು ಯಾರು ಅರೆಯುವುದಕ್ಕೆ ಮುಂದೆ ಬರುವರೋ ಅವರಿಗೆ ಕೊಡುತ್ತೇವೆ. ಕಾರ್ಖಾನೆ ವಿಚಾರದಲ್ಲಿ ಅಧ್ಯಕ್ಷರು ನಿರಂತರವಾಗಿ ಸುಳ್ಳನ್ನೇ ಹೇಳಿಕೊಂಡು ಬರುತ್ತಿದ್ದಾರೆ. ಈಗಲೂ ಅದನ್ನೇ ಮಾಡುತ್ತಿದ್ದಾರೆ. ಇವರನ್ನೆಲ್ಲಾ ನಂಬಿ ಕೂರಲಾಗದು.

- ರುದ್ರಪ್ಪ, ರೈತ, ಹನಿಯಂಬಾಡಿ