ರಾಜ್ಯ ಕಾಂಗ್ರೆಸ್‌ ಸರ್ಕಾರ ಐಸಿಯುನಲ್ಲಿದೆ

| Published : Jun 18 2025, 11:49 PM IST

ಸಾರಾಂಶ

ಎಚ್‌ಎನ್‌ ವ್ಯಾಲಿಯ 210 ಎಂಎಲ್‌ಡಿಗೆ 3 ನೇ ಹಂತದ ಶುದ್ಧೀಕರಣ ಮಾಡಲು ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು. ಇಷ್ಟು ವರ್ಷವಾದರೂ ಆ ಕೆಲಸ ಆಗಿಲ್ಲ. 210 ರಲ್ಲಿ 148 ಎಂಎಲ್‌ಡಿ ನೀರು ಮಾತ್ರ ಬರುತ್ತಿದೆ. ಎಸ್‌ಟಿಪಿ ನೀರಿನಿಂದ ಬೆಳೆದ ತರಕಾರಿಗಳನ್ನೇ ಬೆಂಗಳೂರಿನ ಜನರು ಬಳಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಿದ್ಯುತ್ ದರ, ಬಸ್‌ ಟಿಕೆಟ್‌ ದರ, ಹಾಲಿನ ದರ, ಅಬಕಾರಿ ಸುಂಕ, ಮುದ್ರಾಂಕ ಸುಂಕ ಎಲ್ಲವೂ ಹೆಚ್ಚಿದ್ದರೂ, ರಾಜ್ಯದ ಅಭಿವೃದ್ಧಿ ಮಾತ್ರ ಕುಂಠಿತವಾಗಿದೆ. ಈ ಸರ್ಕಾರ ಐಸಿಯುನಲ್ಲಿದೆ. ಸರ್ಕಾರ ಇನ್ನೂ ಬದುಕಿದೆ ಎಂದು ತೋರಿಸಿಕೊಳ್ಳಲು, ಕಲಬುರ್ಗಿ, ಮಲೆ ಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆ ಮಾಡಿದ್ದಾರೆ ಎಂದು ಸಂಸದ ಡಾ.ಕೆ.ಸುಧಾಕರ್‌ ಟೀಕಿಸಿದರು.

ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಮಾಡುವ ಉದ್ದೇಶದಿಂದ ಕಾಂಗ್ರೆಸ್‌ ಸರ್ಕಾರ ಹಿಂದೆ ಸರಿದಿರುವುದು ಬೇಸರ ತಂದಿದೆ. ಎರಡೂವರೆ ವರ್ಷಗಳಿಂದ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

ತರಕಾರಿ ಬೆಳೆಯಲು ಎಸ್ಟಿಪಿ ನೀರುಎಚ್‌ಎನ್‌ ವ್ಯಾಲಿಯ 210 ಎಂಎಲ್‌ಡಿಗೆ 3 ನೇ ಹಂತದ ಶುದ್ಧೀಕರಣ ಮಾಡಲು ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು. ಇಷ್ಟು ವರ್ಷವಾದರೂ ಆ ಕೆಲಸ ಆಗಿಲ್ಲ. 210 ರಲ್ಲಿ 148 ಎಂಎಲ್‌ಡಿ ನೀರು ಮಾತ್ರ ಬರುತ್ತಿದೆ. ಎಸ್‌ಟಿಪಿ ನೀರಿನಿಂದ ಬೆಳೆದ ತರಕಾರಿಗಳನ್ನೇ ಬೆಂಗಳೂರಿನ ಜನರು ಬಳಸುತ್ತಿದ್ದಾರೆ. ಆದ್ದರಿಂದ ಈ ನೀರನ್ನು ಮೂರನೇ ಹಂತದಲ್ಲಿ ಶುದ್ಧೀಕರಣ ಮಾಡಲೇಬೇಕಿದೆ. ಕಾಂಗ್ರೆಸ್‌ ಸರ್ಕಾರ ಈ ಕುರಿತು ತೀರ್ಮಾನ ಕೈಗೊಳ್ಳಲಿ ಎಂದು ಆಗ್ರಹಿಸಿದರು.

ಬಯಲುಸೀಮೆಗೆ ಎತ್ತಿನಹೊಳೆ ನೀರು ಬರಲಿದೆ ಎಂದು 12 ವರ್ಷದ ಹಿಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಹಿಂದಿನ ಬಿಜೆಪಿ ಸರ್ಕಾರ 2ರಿಂದ 4 ಸಾವಿರ ಕೋಟಿ ರು.ಗಳಿಗೂ ಅಧಿಕ ಅನುದಾನ ನೀಡಿ ಕಾಮಗಾರಿ ಮಾಡಿಸಿತ್ತು. ಕಾಂಗ್ರೆಸ್‌ ಸರ್ಕಾರ ಬಂದ ನಂತರ ನೀರು ಇನ್ನೂ ಸಕಲೇಶಪುರದ ಬಳಿಯೇ ಇದ್ದು, ನಮ್ಮ ರೈತರಿಗೆ ನೀರು ಸಿಗುವುದು ತಡವಾಗುತ್ತಿದೆ ಎಂದರು.

ವೈದ್ಯಕೀಯ ಕಾಲೇಜು ಬಿಜೆಪಿ ಕೊಡುಗೆ

ಮೆಡಿಕಲ್‌ ಕಾಲೇಜನ್ನು ಬಿಜೆಪಿ ಅವಧಿಯಲ್ಲಿ ನಿರ್ಮಿಸಲಾಗಿದೆ. 810 ಕೋಟಿ ರೂ. ಖರ್ಚು ಮಾಡಿದ್ದರೂ, ಆಸ್ಪತ್ರೆ ಆರಂಭವಾಗಿಲ್ಲ. ಕ್ಷೇತ್ರದಲ್ಲಿ ಪರೇಸಂದ್ರ,ಮಂಡಿಕಲ್, ದಿಬ್ಬೂರು, ಮತ್ತು ನಂದಿ ಗ್ರಾಮಗಳಲ್ಲಿ ತಲಾ 10 ಕೋಟಿ ರೂಗಳ ವೆಚ್ಚದಲ್ಲಿ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತಾವು ಅಧಿಕಾರದಲ್ಲಿದ್ದಾಗ ಸ್ಥಾಪಿಸಿದ್ದರೂ ಈಗಿನ ಸರ್ಕಾರ ಇನ್ನೂ ವೈದ್ಯಕೀಯ ಉಪಕರಣಗಳನ್ನು ಪೂರೈಕೆ ಮಾಡಿಲ್ಲ ಎಂದು ದೂರಿದರು.

ಬಿಜೆಪಿ ಬಜೆಟ್‌ನಲ್ಲಿ ಹೈಟೆಕ್‌ ಹೂ ಮಾರುಕಟ್ಟೆ ಘೋಷಿಸಲಾಗಿತ್ತು. ಆ ಯೋಜನೆಯನ್ನು ಈಗಿನ ಸರ್ಕಾರ ಮುಂದುವರಿಸಿಲ್ಲ. 900 ಎಕರೆ ಜಾಗದಲ್ಲಿ ಆಶ್ರಯ ಯೋಜನೆಯಡಿ 27 ಸಾವಿರ ನಿವೇಶನ ರೂಪಿಸಲಾಗಿದೆ. ಈಗಾಗಲೇ ನಗರ ಪ್ರದೇಶದಲ್ಲಿ 5000, ಗ್ರಾಮಾಂತರದಲ್ಲಿ 17000 ಹಕ್ಕುಪತ್ರಗಳನ್ನೂ ನೀಡಿದ್ದು, ಅದನ್ನು ತಡೆಹಿಡಿಯಲಾಗಿದೆ. ಎರಡೂವರೆ ವರ್ಷದಲ್ಲಿ ಒಂದು ಮನೆ ಕಟ್ಟಿಸಿಲ್ಲ, ಒಂದು ನಿವೇಶನ ನೀಡಿಲ್ಲ ಎಂದರು.

ಮಾವಿಗೆ ಬೆಂಬಲ ಬೆಲೆ ನೀಡಿ

ಮಾವು ಹಾಗೂ ದ್ರಾಕ್ಷಿ ಬೆಳೆಗಾರರಿಗೆ ಅನ್ಯಾಯವಾಗಿದೆ. ಆಂಧ್ರಪ್ರದೇಶದಲ್ಲಿ ಸರ್ಕಾರ ಮಾವು ಬೆಳೆಗೆ ಕೆಜಿಗೆ 4 ರೂ. ಬೆಂಬಲ ಬೆಲೆ ನೀಡುತ್ತಿದೆ. ಇಲ್ಲಿನ ಸರ್ಕಾರ ಕೂಡ ಮಾವು ಬೆಳೆಗೆ ಬೆಂಬಲ ಬೆಲೆ ನೀಡಬೇಕು. ಕೇಂದ್ರ ಸರ್ಕಾರ ರಾಗಿ, ಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸಿದೆ ಎಂದರು.

ವಿದ್ಯಾರ್ಥಿಗಳ ಕರೆತರಲು ಚರ್ಚೆ

ಇರಾನ್‌ನಲ್ಲಿ 100ಕ್ಕೂ ಅಧಿಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಆ ವಿದ್ಯಾರ್ಥಿಗಳನ್ನು ಮರಳಿ ಕರೆತರುವ ಬಗ್ಗೆ ವಿದೇಶಾಂಗ ಸಚಿವಾಲಯದೊಂದಿಗೆ ತಾವು ಚರ್ಚಿಸಿರುವುದಾಗಿ ತಿಳಿಸಿದರು.

ಈ ವೇಳೆ ಖಾದಿಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ನಗರಸಭೆ ಅಧ್ಯಕ್ಷ ಎ.ಗಜೇಂದ್ರ,ಉಪಾಧ್ಯಕ್ಷ ಜೆ.ನಾಗರಾಜ್, ಟಿಎಪಿಸಿಎಂಎಸ್ ಅಧ್ಯಕ್ಷ ಆವುಲಕೊಂಡರಾಯಪ್ಪ, ಮಾಜಿ ಅಧ್ಯಕ್ಷರಾದ ಮರಳಕುಂಟೆ ಕೃಷ್ಣಮೂರ್ತಿ,ರಾಮಸ್ವಾಮಿ,ನಗರಸಭೆ ಮಾಜಿ ಅಧ್ಯಕ್ಷೆ ಲೀಲಾವತಿ ಶ್ರೀನಿವಾಸ್, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಮತ್ತಿತರರು ಇದ್ದರು.