ಸಾರಾಂಶ
ಒಂದು ಕಡೆ ಗ್ಯಾರಂಟಿ ಕೊಡುತ್ತೇವೆ ಎಂದು ಜನರ ಕಣ್ಣೊರೆಸುವ ನಾಟಕ ಆಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಇನ್ನೊಂದು ಕಡೆ ದರ ಏರಿಸಿ ಜನರಿಂದ ಸುಲಿಗೆ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ರಾಣಿಬೆನ್ನೂರು: ಒಂದು ಕಡೆ ಗ್ಯಾರಂಟಿ ಕೊಡುತ್ತೇವೆ ಎಂದು ಜನರ ಕಣ್ಣೊರೆಸುವ ನಾಟಕ ಆಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಇನ್ನೊಂದು ಕಡೆ ದರ ಏರಿಸಿ ಜನರಿಂದ ಸುಲಿಗೆ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿರುವ ಜೆಡಿಎಸ್ ಕಚೇರಿಗೆ ಭಾನುವಾರ ಭೇಟಿ ನೀಡಿದ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ಮೇಲೆ ಒಂದಾದ ಮೇಲೆ ಒಂದರಂತೆ ಗ್ಯಾರಂಟಿಗಳನ್ನೇನೋ ರಾಜ್ಯ ಸರ್ಕಾರ ಕೊಟ್ಟಿದೆ. ಆದರೆ, ಗ್ಯಾರಂಟಿ ಹಣವನ್ನು ಜನರಿಂದಲೇ ವಸೂಲಿ ಮಾಡಿ ಖಜಾನೆ ತುಂಬಿಸಿಕೊಳ್ಳುತ್ತಿದೆ. ಮುದ್ರಾಂಕ ಶುಲ್ಕ, ಮಾರ್ಗದರ್ಶಿ ಮೌಲ್ಯ ಏರಿಕೆ, ಮದ್ಯದ ದರ ಏರಿಕೆ, ಬಸ್ ದರ ಏರಿಕೆ ಸೇರಿದಂತೆ ಸಿಕ್ಕ ಸಿಕ್ಕ ಕಡೆಯೆಲ್ಲಾ ಸರ್ಕಾರ ದರ ಏರಿಕೆ, ದಂಡ ಪ್ರಯೋಗ ಮಾಡುತ್ತಿದೆ. ಈಗ ಬೆಂಗಳೂರು ನಗರದ ಮೆಟ್ರೋ ರೈಲು ಪ್ರಯಾಣ ದರವನ್ನು ಜನರೇ ಬೆಚ್ಚಿ ಬೀಳುವಷ್ಟರ ಮಟ್ಟಿಗೆ ಶೇ.೪೦ರಿಂದ ೫೦ರಷ್ಟು ಏರಿಕೆ ಮಾಡಿದೆ ಎಂದು ಟೀಕಿಸಿದರು.ಅಭಿವೃದ್ಧಿ ಎಂದರೆ ಈ ಸರ್ಕಾರದ ಪಾಲಿಗೆ ಕೇವಲ ದರ ಏರಿಕೆ ಎನ್ನುವಂತಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಎನ್ನುವುದು ಸತ್ತು ಹೋಗಿದ್ದು, ಅಭಿವೃದ್ಧಿ ಸಂಪೂರ್ಣವಾಗಿ ಸ್ಥಗಿತವಾಗಿದೆ. ಮಹಿಳೆಯರಿಗೆ ಬರೀ ಎರಡು ಸಾವಿರ ಕೊಟ್ಟು ಬೇರೆ ಕಡೆ ಸಾಲ ಮಾಡಿ ಅದರ ಹೊರೆಯನ್ನು ಜನರ ಮೇಲೆಯೇ ಹೇರುತ್ತಿದ್ದಾರೆ ಎಂದು ಕಿಡಿಕಾರಿದರು.ಗ್ಯಾರಂಟಿ ಕೊಡಲಿಕ್ಕೂ ಕಾಂಗ್ರೆಸ್ ಸರ್ಕಾರ ಸಾಲ ಮಾಡುತ್ತಿದೆ. ಈಗಾಗಲೇ ರಾಜ್ಯದ ಸಾಲ 7 ಲಕ್ಷ ಕೋಟಿಗೆ ಮುಟ್ಟಿದೆ. ಆ ಸಾಲ ತೀರಿಸೋದು ಕೂಡ ನೀವೇ. ಬಳ್ಳಾರಿ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಬಾಣಂತಿಯರು, ನವಜಾತ ಮಕ್ಕಳು ಅಸು ನೀಗುತ್ತಿದ್ದಾರೆ.ಸರ್ಕಾರಕ್ಕೆ ಈ ಬಗ್ಗೆ ಚಿಂತೆ ಇಲ್ಲ ಎಂದು ಆರೋಪಿಸಿದರು.ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲ ಕ್ಷೇತ್ರಗಳಲ್ಲಿ ವಿಫಲವಾಗಿದೆ. ಜನರು ಇವರಿಗೆ ಮತ ಹಾಕಿದ್ದಕ್ಕೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ನಮ್ಮ ಪಕ್ಷ ಜನರ ಪರವಾಗಿ ದನಿಯೆತ್ತಿ ಹೋರಾಟ ನಡೆಸುತ್ತಿದೆ. ಕಾರ್ಯಕರ್ತರು, ಮುಖಂಡರು ಬೀದಿಗಿಳಿದು ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.ರಾಜ್ಯದಲ್ಲಿ ತಳಮಟ್ಟದಿಂದ ಜೆಡಿಎಸ್ ಸಂಘಟನೆಗೆ ಒತ್ತು ಕೊಡಲಾಗುವುದು. ಹಾಗೆಯೇ ಉತ್ತರ ಕರ್ನಾಟಕದ ಭಾಗದಲ್ಲಿಯೂ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸುವ ಪ್ರಯತ್ನ ಮಾಡಲಾಗುವುದು ಎಂದು ಕುಮಾರಸ್ವಾಮಿ ಅವರು ಹೇಳಿದರು.ಇದೇ ವೇಳೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸನ್ಮಾನ ಮಾಡಲಾಯಿತು. ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಸೇರಿದಂತೆ ಇತರರು ಇದ್ದರು.
ಸಾಲ ಮಾಡಿದ್ದೀರಿ, ಅಪರಾಧ ಮಾಡಿಲ್ಲ: ಮೈಕ್ರೋ ಫೈನಾನ್ಸ್ ಉಪಟಳಕ್ಕೆ ರಾಜ್ಯದ ಬಡಜನರು ತತ್ತರಿಸಿ ಹೋಗಿದ್ದಾರೆ. ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸಾಲ ಮಾಡಿದ್ದೀರಿ, ಅಪರಾಧ ಮಾಡಿಲ್ಲ. ಹೀಗಾಗಿ ಯಾರೂ ಆತ್ಮಹತ್ಯೆ ಮಾಡಿಕೊಳ್ಳುವ ಅಗತ್ಯ ಇಲ್ಲ. ನಮ್ಮ ರಾಜ್ಯ ಸರ್ಕಾರವೇ ಏಳು ಲಕ್ಷ ಕೋಟಿ ಸಾಲ ಮಾಡಿ ಧೈರ್ಯವಾಗಿದ್ದು, ಇನ್ನೂ ಲೂಟಿ ಹೊಡೆಯುತ್ತಿದೆ. ಹೀಗಿದ್ದ ಮೇಲೆ ಅಲ್ಪಸ್ವಲ್ಪ ಸಾಲ ಮಾಡಿರುವ ಜನರು ಯಾಕೆ ಹೆದರಬೇಕು. ಯಾವುದೇ ಕಾರಣಕ್ಕೂ ಹೆದರಬೇಡಿ, ನಿಮ್ಮ ಜತೆ ನಾವಿದ್ದೇವೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಧೈರ್ಯ ತುಂಬಿದರು.