ಸಾರಾಂಶ
ಬಿಜೆಪಿ ತಂಡದಿಂದ ಜಿಲ್ಲೆಯ ಬರಪೀಡಿತ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ
ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಮುಖಂಡರುಕನ್ನಡಪ್ರಭ ವಾರ್ತೆ ಹಾವೇರಿಜಿಲ್ಲೆಯಲ್ಲಿ ಬರಗಾಲದಿಂದ ಬೆಳೆ ಹಾನಿಯಾದ ರೈತರ ಹೊಲಗಳಿಗೆ ಬಿಜೆಪಿ ತಂಡ ಸೋಮವಾರ ಭೇಟಿ ನೀಡಿ ಹಾನಿಯಾದ ಬೆಳೆಗಳ ಪರಿಶೀಲನೆ ನಡೆಸಿತು.
ಮಾಜಿ ಸಚಿವ ಬಿ.ಸಿ. ಪಾಟೀಲ ನೇತೃತ್ವದಲ್ಲಿ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ, ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ವಿರುಪಾಕ್ಷಪ್ಪ ಬಳ್ಳಾರಿ, ಕಳಕಪ್ಪ ಬಂಡಿ, ಶಿವರಾಜ ಸಜ್ಜನರ, ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮೊದಲಾದವರು ರಾಣಿಬೆನ್ನೂರು ತಾಲೂಕಿನ ರಾವುತನಕಟ್ಟೆ, ಬ್ಯಾಡಗಿ ತಾಲೂಕಿನ ಹೂಲಿಹಳ್ಳಿ ಮತ್ತು ಹಾವೇರಿ ತಾಲೂಕಿನ ನೆಲೋಗಲ್ಲ ಗ್ರಾಮದ ರೈತರ ಹೊಲಗಳಿಗೆ ಭೇಟಿ ನೀಡಿದರು. ಮೆಕ್ಕೆಜೋಳ, ಹತ್ತಿ ಸೇರಿದಂತೆ ವಿವಿಧ ಬೆಳೆಗಳು ಮಳೆಯಿಲ್ಲದೇ ಒಣಗಿರುವುದನ್ನು ಪರಿಶೀಲಿಸಿದರು. ಜೋಳ ತೆನೆ ಕಟ್ಟದಿರುವುದನ್ನು ವೀಕ್ಷಿಸಿ, ಬೆಳೆ ಹಾನಿಗೊಳಗಾದ ರೈತರಿಗೆ ಧೈರ್ಯ ತುಂಬಿದರು.ಬಳಿಕ ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಸಿ. ಪಾಟೀಲ, ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದೆ. ಈ ಹಿಂದೆ ಇಂತಹ ಬರಗಾಲ ನೋಡಿರಲಿಲ್ಲ. ಬಿತ್ತನೆ ಮಾಡಿದಷ್ಟು ಮೆಕ್ಕೆಜೋಳವೂ ಬಂದಿಲ್ಲ. ಆದರೆ, ರಾಜ್ಯ ಸರ್ಕಾರ ಇದುವರೆಗೆ ರೈತರಿಗೆ ಪರಿಹಾರ ನೀಡಿಲ್ಲ. ನಮ್ಮ ಸರ್ಕಾರವಿದ್ದಾಗ ಅತಿವೃಷ್ಟಿಯಿಂದ ಹಾಳಾದ ಬೆಳೆಗಳಿಗೆ ತಕ್ಷಣ ಪರಿಹಾರ ನೀಡಿದ್ದೆವು. ಕಾಂಗ್ರೆಸ್ಸಿನವರು ನಾವು ಗ್ಯಾರಂಟಿ ಈಡೇರಿಸಿದ್ದೇವೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಎಲ್ಲಿಯೂ ಬರ ಪರಿಹಾರ ಕೊಡುವ ಬಗ್ಗೆ ಸಿಎಂ, ಡಿಸಿಎಂ ಮಾತನಾಡುತ್ತಿಲ್ಲ. ಈ ಸರ್ಕಾರ ಬಂದ ಮೇಲೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ವಾಗ್ದಾಳಿ ನಡೆಸಿದರು.
ಕೆಲವು ಕಡೆ ಶೇ.95ರಷ್ಟು ಬೆಳೆ ಹಾನಿಯಾಗಿದ್ದರೂ ಅಧಿಕಾರಿಗಳು ಶೇ.5ರಷ್ಟು ಹಾನಿಯಂದು ತಪ್ಪು ವರದಿ ನೀಡಿದ್ದಾರೆ. ಈ ರೀತಿ ತಪ್ಪು ವರದಿ ಕೊಡುವಂತೆ ಸರ್ಕಾರವೇ ಅಧಿಕಾರಿಗಳನ್ನು ತಯಾರು ಮಾಡಿದೆ. ತಪ್ಪು ವರದಿಯನ್ನು ಅಧಿಕಾರಿಗಳ ಕಡೆಯಿಂದ ಸರ್ಕಾರ ಬರೆಸಿಕೊಂಡಿದೆ. ಇದೇ ರೀತಿ ವರದಿ ಕೊಡುವಂತೆ ಅಧಿಕಾರಿಗಳಿಗೆ ಹೇಳಿದ್ದಾರೆ. ಆ ಮೂಲಕ ಬರಗಾಲ ಇಲ್ಲ ಎಂದು ಸಾಬೀತು ಮಾಡಲು ಕಾಂಗ್ರೆಸ್ಸಿನವರು ಹೊರಟಿದ್ದಾರೆ ಎಂದು ಆರೋಪಿಸಿದರು.ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ರೈತರಿಗೆ ಪರಿಹಾರ ಕೊಡಲೂ ಹಣವಿಲ್ಲ. ಶೇ.68ರಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ. ಅಕ್ಕಿಯ ಹಣವೂ ಕೊಟ್ಟಿಲ್ಲ. ಅಕ್ಟೋಬರ್‌ನಲ್ಲೇ ವಿದ್ಯುತ್ ಕ್ಷಾಮ ಎದುರಾಗಿದೆ. ಅಳಿದುಳಿದ ಬೆಳೆ ರಕ್ಷಿಸಿಕೊಳ್ಳಲು ರೈತರ ಪಂಪ್‌ಸೆಟ್‌ಗಳಿಗೆ ಕರೆಂಟ್ ನೀಡುತ್ತಿಲ್ಲ ಎಂದು ದೂರಿದರು.
ಜಿಲ್ಲಾ ಉಸ್ತುವಾರಿ ಸಚಿವರು ರೈತರ ಆತ್ಮಹತ್ಯೆ ಬಗ್ಗೆ ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ. ನಾವು ₹10 ಕೋಟಿ ಕೊಡುತ್ತೇವೆ, ಸಚಿವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ? ಬರಗಾಲದಲ್ಲಿ ರೈತರಿಗೆ ಪರಿಹಾರ ನೀಡದೇ ಕಾಂಗ್ರೆಸ್ ನಾಯಕರು ಜನರ ದಾರಿ ತಪ್ಪಿಸಲು ವಿವಿಧ ನಾಟಕವಾಡುತ್ತಿದ್ದಾರೆ. ಆಪರೇಶನ್ ಕಮಲ, ಹುಲಿ ಉಗುರು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅವರು 136 ಶಾಸಕರಿರುವಾಗ ಆಪರೇಶನ್ ಕಮಲ ಮಾಡಲು ಸಾಧ್ಯವೇ? ಆ ಅಗತ್ಯವೂ ಬಿಜೆಪಿಗೆ ಇಲ್ಲ. ಇದನ್ನು ಯಾರೂ ನಂಬಲ್ಲ. ತಮ್ಮ ಒಳಹುಳುಕು ಮುಚ್ಚಿಕೊಳ್ಳಲು ನಾಟಕವಾಡುತ್ತಿದ್ದಾರೆ. ತಕ್ಷಣ ಬೆಳೆ ಹಾನಿ ಪರಿಹಾರವನ್ನು ರೈತರಿಗೆ ನೀಡಬೇಕು. ಇಲ್ಲದಿದ್ದರೆ ಪಕ್ಷದಿಂದ ರೈತರೊಂದಿಗೆ ಸೇರಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ಜಿಲ್ಲೆಯಲ್ಲಿ ಬರಗಾಲದಿಂದ ಮುಂಗಾರು ಬೆಳೆ ಸಂಪೂರ್ಣ ಹಾನಿಯಾಗಿದೆ. ಮೇ ತಿಂಗಳ ಬಳಿಕ ಜಿಲ್ಲೆಯಲ್ಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಸರ್ಕಾರ ರೈತರ ನೆರವಿಗೆ ಬಂದಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಭೋಜರಾಜ ಕರೂದಿ, ಪಾಲಾಕ್ಷಗೌಡ ಪಾಟೀಲ ಇತರರು ಇದ್ದರು.