ಸಾರಾಂಶ
ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿ
ಕೇಂದ್ರ ಸರ್ಕಾರಕ್ಕೆ ಬೆಳೆನಷ್ಟದ ವರದಿ ನೀಡಲು ರಾಜ್ಯ ಸರ್ಕಾರ ವಿಫಲವಾಗಿದೆ. ಬಿಜೆಪಿ ಬರ ಅಧ್ಯಯನದ ನಂತರ ಸಿಎಂ ಮತ್ತು ಡಿಸಿಎಂ ಅವರಿಗೆ ರಾಜ್ಯದ ರೈತರ ನೈಜ ವರದಿಯನ್ನು ನೀಡಿ, ಕೂಡಲೆ ವೈಜ್ಞಾನಿಕವಾಗಿ ಬೆಳೆನಷ್ಟ ಪರಿಹಾರ ನೀಡುವಂತೆ ಒತ್ತಾಯಿಸಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.ತಾಲೂಕಿನ ಸೊನ್ನ ಗ್ರಾಮದಲ್ಲಿ ಬರ ವೀಕ್ಷಣೆ ಮಾಡಿ ನಂತರ ಪಟ್ಟಣದ ಬಿಜೆಪಿ ಮುಖಂಡ ಬಲ್ಲಾಹುಣ್ಸಿ ರಾಮಣ್ಣ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದ ರೈತರ ಸ್ಥಿತಿಗತಿಗಳನ್ನು ಖುದ್ದು ಅರಿಯುವ ಯತ್ನ ಬಿಜೆಪಿ ಬರ ಅಧ್ಯಯನ ತಂಡ ಮಾಡುತ್ತಿದೆ. ರೈತರ ಪಂಪ್‌ಸೆಟ್‌ಗಳಿಗೆ ಕನಿಷ್ಠ ೭ತಾಸು ವಿದ್ಯುತ್ ನೀಡುವಲ್ಲಿ ವಿಫಲವಾಗಿರುವ ಸರ್ಕಾರ ಇದೀಗ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿದ್ಯುತ್ ಪರಿವರ್ತಕ ಮತ್ತು ಕಂಬಗಳಿಗೆ ರೈತರಿಂದ ಸಾಕಷ್ಟು ಹಣ ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರ ಸಂಪೂರ್ಣ ರೈತ ವಿರೋಧಿ ನೀತಿ ಅನುಸರಿಸಿ, ಬರ ನಿರ್ವಹಣೆಯಲ್ಲಿ ವಿಫಲವಾಗಿದೆ.ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ ₹೧೦ ಸಾವಿರ ಕೋಟಿ ನೀಡುವುದಾಗಿ ಕೂಡಲ ಸಂಗಮನಾಥನ ಎದುರು ಪ್ರಮಾಣ ಮಾಡಿದ್ದ ಸಿಎಂ ಸಿದ್ದರಾಮಯ್ಯ, ಯಾವುದಕ್ಕೂ ಅನುದಾನ ನೀಡದೆ ಪ್ರಮಾಣ ಮಾಡಿರುವುದನ್ನು ಮರೆತಿದ್ದಾರೆ. ರಾಜ್ಯಕ್ಕೆ ೫ ವರ್ಷದಲ್ಲಿ ಕೇವಲ ₹೨೩೬೫ ಕೋಟಿ ನೀರಾವರಿ ಯೋಜನೆಗಳಿಗೆ ಅನುದಾನ ನೀಡಿ ಸುಳ್ಳು ಹೇಳುತ್ತಾ ಹೊರಟಿದ್ದಾರೆ.
ಜಿಲ್ಲೆಯಲ್ಲಿ ೨.೯೩ ಲಕ್ಷ ಹೆ. ಬೆಳೆ ಬಿತ್ತನೆಯಾಗಿದ್ದು, ಇದರಲ್ಲಿ ೨.೬೯ಲಕ್ಷ ಹೆ.ನಷ್ಟು ಬೆಳೆನಷ್ಟವಾಗಿದೆ. ಈವರೆಗೂ ಸರ್ಕಾರ ನಯಾಪೈಸೆಯ ಪರಿಹಾರ ನೀಡಿಲ್ಲ ಎಂದರು.ಹೂವಿನಹಡಗಲಿ ಶಾಸಕ ಕೃಷ್ಣನಾಯ್ಕ, ಹುಬ್ಬಳ್ಳಿ ಶಾಸಕ ಮಹೇಶ ತೆಂಗಿನಕಾಯಿ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಜಿಲ್ಲಾ ಉಪಾಧ್ಯಕ್ಷ ಭದ್ರವಾಡಿ ಚಂದ್ರಶೇಖರ, ಕೆ.ಎಂ. ತಿಪ್ಪೇಸ್ವಾಮಿ, ಕೃಷ್ಣನಾಯ್ಕ, ಮಂಡಲ ಅಧ್ಯಕ್ಷ ವೀರೇಶ್ವರಸ್ವಾಮಿ, ದಿಶಾ ಸಮಿತಿ ಸದಸ್ಯ ಬಲ್ಲಾಹುಣ್ಸಿ ರಾಮಣ್ಣ, ವೆಂಕಟೇಶ್ ಉಪ್ಪಾರ, ಪುರಸಭೆ ಸದಸ್ಯರಾದ ಜೋಗಿ ಹನುಮಂತಪ್ಪ, ನವೀನ್, ಮಾಜಿ ಸದಸ್ಯ ಕನಕಪ್ಪ, ಮುಖಂಡರಾದ ಮುಟುಗನಹಳ್ಳಿ ಕೊಟ್ರೇಶ್, ನರೇಗಲ್ ಕೊಟ್ರೇಶ್, ರವಿಕುಮಾರ, ನರೇಗಲ್ ಮಲ್ಲಿಕಾರ್ಜುನ, ಎಲಿಗಾರ ರವಿ ಇತರರಿದ್ದರು.