ರಾಜ್ಯ ಸರ್ಕಾರ ಪಂಚಮಸಾಲಿ ಮೀಸಲಾತಿ ಹೋರಾಟ ಹತ್ತಿಕ್ಕುತ್ತಿದೆ: ಸ್ವಾಮೀಜಿ ಆರೋಪ

| Published : Aug 08 2024, 01:34 AM IST

ರಾಜ್ಯ ಸರ್ಕಾರ ಪಂಚಮಸಾಲಿ ಮೀಸಲಾತಿ ಹೋರಾಟ ಹತ್ತಿಕ್ಕುತ್ತಿದೆ: ಸ್ವಾಮೀಜಿ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಹತ್ತಿಕ್ಕುತ್ತಿದೆ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ದಾವಣಗೆರೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

- ಬೆಳಗಾವಿ ಹೋರಾಟ ವೇಳೆ ಸಿಎಂ ಸಿದ್ದರಾಮಯ್ಯ ಸಭೆ ಕರೆಯುವ ಭರವಸೆ ಈಡೇರಿಲ್ಲ

- ಮುಂಗಾರು ಅಧಿವೇಶನದಲ್ಲಿ ಮೀಸಲಾತಿ ವಿಚಾರ ಚರ್ಚೆಗೆ 20 ಶಾಸಕರಿಗೆ ಅನುಮತಿ ನೀಡಿಲ್ಲ

- ಬೆಳಗಾವಿಯಲ್ಲಿ ಸೆ.12ರಂದು ವಕೀಲರ ಸಭೆ ನಡೆಸಿ, ಮುಂದಿನ ಹೋರಾಟದ ಬಗ್ಗೆ ಚರ್ಚೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ರಾಜ್ಯ ಸರ್ಕಾರ ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಹತ್ತಿಕ್ಕುತ್ತಿದೆ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿಗೆ ಒತ್ತಾಯಿಸಿ ಬೆಳಗಾವಿಯಲ್ಲಿ ಹೋರಾಟ ನಡೆಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ಕರೆಯುವ ಭರವಸೆ ನೀಡಿದ್ದರು. ಆದರೆ, ಈವರೆಗೆ ಸಭೆ ಕರೆದಿಲ್ಲ ಎಂದರು.

ಮುಂಗಾರು ಅಧಿವೇಶನದಲ್ಲಿ ಮೀಸಲಾತಿ ವಿಚಾರವಾಗಿ ಚರ್ಚಿಸಲು ಅನುಮತಿ ಕೋರಿ ಪಂಚಮಸಾಲಿ ಸಮಾಜದ 20 ಶಾಸಕರು ಸ್ಪೀಕರ್ ಅವರಿಗೆ ಮನವಿ ಸಲ್ಲಿಸಿದ್ದರೂ ಅನುಮತಿ ನೀಡಲಿಲ್ಲ. ಅಧಿವೇಶನದ ಅಂತಿಮ ದಿನ ಯತ್ನಾಳ್ ಅವರಿಗೆ ಅನುಮತಿ ನೀಡಲಾಯಿತಾದರೂ ಅನಿರ್ದಿಷ್ಟಾವಧಿಗೆ ಅಧಿವೇಶನ ಮುಂದೂಡಲಾಯಿತು. ಈ ಎಲ್ಲವೂ ನೋಡಿದರೆ ಸರ್ಕಾರ ಮೀಸಲಾತಿ ಹೋರಾಟ ಹತ್ತಿಕ್ಕುತ್ತಿದೆ ಎಂದೆನಿಸುತ್ತಿದೆ ಎಂದರು.

ಸ್ಪೀಕರ್ ಅವರು ಪಂಚಮಸಾಲಿ ಸಮಾಜದ ಶಾಸಕರಿಗೆ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡದ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ನೇರವಾಗಿ ಭೇಟಿ ಮಾಡಿ, ಚರ್ಚಿಸುವಂತೆ ಮತ್ತು ಭೇಟಿ ಸಾಧ್ಯ ಆಗದಿದ್ದಲ್ಲಿ ನೇರವಾಗಿ ಮೀಸಲಾತಿ ಹೋರಾಟದಲ್ಲಿ ಭಾಗವಹಿಸುವಂತೆ ತಿಳಿಸಿದ್ದೇವೆ ಎಂದು ಶ್ರೀಗಳು ಹೇಳಿದರು.

ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಪಂಚಮಸಾಲಿ ಮೀಸಲಾತಿ ವಿಷಯದ ಬಗ್ಗೆ ಚರ್ಚೆ ಕೈಗೆತ್ತಿಕೊಳ್ಳುವಂತೆ ಪಂಚಮಸಾಲಿ ಸಮಾಜದ ಶಾಸಕರ ಗಮನಕ್ಕೆ ತರಲಾಗಿದೆ. ಬೆಳಗಾವಿಯಲ್ಲಿ ಸೆ.12ರಂದು ಪಂಚಮಸಾಲಿ ಸಮಾಜದ ವಕೀಲರ ಸಭೆ ನಡೆಸಿ, ಮುಂದಿನ ಹಂತದ ಹೋರಾಟದ ಬಗ್ಗೆಯೂ ಚರ್ಚೆ ನಡೆಸಲಾಗುವುದು. ಮೀಸಲಾತಿ ಹೋರಾಟವನ್ನು ಸರ್ಕಾರ ಹತ್ತಿಕ್ಕುವ ಪ್ರಯತ್ನ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.

- - -

ಟಾಪ್‌ ಕೋಟ್‌

ಸಿರಿಗೆರೆಯ ಮಠ ಬಹುದೊಡ್ಡ ಇತಿಹಾಸ ಹೊಂದಿರುವ ಮಠ. ಭಕ್ತರು ಮತ್ತು ಮಠದ ನಡುವಿನ ವಿಚಾರ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಸಿರಿಗೆರೆಯ ಸ್ವಾಮಿಗಳು ಬಹಳ ಹಿರಿಯರು. ಅವರು ಎಲ್ಲವನ್ನೂ ಬಗೆಹರಿಸುವ ಮತ್ತು ನಮ್ಮಂತಹ ಕಿರಿಯರಿಗೆ ಮಾರ್ಗದರ್ಶಕರಾಗುವ ವಿಶ್ವಾಸ ಇದೆ. ಆದಷ್ಟು ಬೇಗ ಎಲ್ಲವೂ ಬಗೆಹರಿಯಲಿ

- ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ, ಕೂಡಲ ಸಂಗಮ

- - -