ಸಾರಾಂಶ
ಮಹಾದೇವಪ್ಪ ನೀನು ಫ್ರೀ ನಾವು ಫ್ರೀ ಅಂತಾ ಸುಳ್ಳು ಹೇಳುವ ಸರ್ಕಾರ ನಮ್ಮದಲ್ಲ. ೧೦ ಕೆಜಿ ಅಕ್ಕಿ ಕೊಡುತ್ತೇವೆ ಎಂದವರು ಅಕ್ಕಿ ಕೊಡಲು ಆಗುತ್ತಿಲ್ಲ. ವಿನಾಕಾರಣ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತ ಕಾಲಹರಣ ಮಾಡುತ್ತಿದೆ.
ಬ್ಯಾಡಗಿ: ಗ್ಯಾರಂಟಿ ಸರಿದೂಗಿಸಲು ಜನರನ್ನು ನಶೆಯಲ್ಲಿ ಏರಿಸುತ್ತಾ ಜನಸಾಮಾನ್ಯರ ದಿನಬಳಕೆಯ ವಸ್ತುಗಳ ಬೆಲೆ ಏರಿಸುತ್ತಾ ರಾಜ್ಯ ಸರ್ಕಾರ ಸುಳ್ಳಿನ ನಶೆಯಲ್ಲಿ ತೇಲಾಡುತ್ತಿದೆ ಎಂದು ಕಲ್ಲಿದ್ದಲು ಗಣಿ ಮತ್ತು ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೇವಡಿ ಮಾಡಿದರು.
ತಾಲೂಕಿನ ತಡಸ ಗ್ರಾಮದಲ್ಲಿ ಶುಕ್ರವಾರ ವಿಕಸಿತ ಭಾರತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಚುನಾವಣೆ ಸಂದರ್ಭದಲ್ಲಿ ಘೋಷಿಸಿದ ಗ್ಯಾರಂಟಿಗಳನ್ನು ಹೊಂದಿಸುವ ಸಲುವಾಗಿ ಜನರನ್ನು ನಶೆಯಲ್ಲಿ ತೇಲಾಡುವಂತೆ ಮಾಡುವ ಮೂಲಕ ಗ್ಯಾರಂಟಿಗೆ ಹಣ ವಸೂಲಿ ಮಾಡುತಿದ್ದಾರೆ. ಅದಕ್ಕೂ ಹೊಂದದೇ ಇದ್ದರೆ ದರ ಏರಿಕೆ ಮಾಡುತ್ತಾರೆ ಎಂದರು.
ನ.೧೫ರಂದು ವಿಕಸಿತ ಭಾರತ ಕಾರ್ಯಕ್ರಮ ಪ್ರಾರಂಭವಾಗಿತ್ತು. ಸರ್ಕಾರಗಳ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದು ಹಾಗೂ ಯೋಜನೆಯ ಅರ್ಹ ಫಲಾನುಭವಿಗಳಿಗೆ ಇದನ್ನು ತಲುಪಿಸುವ ಉದ್ದೇಶ ವಿಕಸಿತ ಭಾರತ ಸಂಕಲ್ಪ ಯಾತ್ರೆ ಹೊಂದಿದೆ. ಏನು ಹೇಳುತ್ತೇವೋ ಅದನ್ನು ಪರಿಪೂರ್ಣ ಮಾಡುವುದೇ ಮೋದಿ ಗ್ಯಾರಂಟಿ. ಸ್ವಾತಂತ್ರ‍್ಯ ಬಂದು ೭೫ ವರ್ಷವಾದರೂ ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದೆ. ಮುಂದೆ ಅಭಿವೃದ್ಧಿ ಹೊಂದಿದ ದೇಶ ಮಾಡಬೇಕಿದೆ. ಮೋದಿ ಅಧಿಕಾರಕ್ಕೆ ಬರುವ ಮೊದಲು ಬ್ಯಾಂಕ್‌ಗಳು ದಿವಾಳಿ ಹೊಂದಿದ್ದವು. ಐದು ಅಶಕ್ತ ದೇಶದಲ್ಲಿ ಭಾರತ ಕೂಡಾ ಇತ್ತು. ಈಗ ಶಕ್ತ ದೇಶವಾಗುತ್ತಿದೆ ಎಂದರು.ನೀನು ಫ್ರೀ ನಾವು ಫ್ರೀ: ಮಹಾದೇವಪ್ಪ ನೀನು ಫ್ರೀ ನಾವು ಫ್ರೀ ಅಂತಾ ಸುಳ್ಳು ಹೇಳುವ ಸರ್ಕಾರ ನಮ್ಮದಲ್ಲ. ೧೦ ಕೆಜಿ ಅಕ್ಕಿ ಕೊಡುತ್ತೇವೆ ಎಂದವರು ಅಕ್ಕಿ ಕೊಡಲು ಆಗುತ್ತಿಲ್ಲ. ವಿನಾಕಾರಣ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತ ಕಾಲಹರಣ ಮಾಡುತ್ತಿದೆ. ವಿಕಸಿತ ಭಾರತ ಕಾರ್ಯಕ್ರಮಕ್ಕೆ ಯಾರೂ ಹೊಗಬೇಡಿ ಎಂದು ಸಿದ್ದರಾಮಯ್ಯ ಅರ್ಡರ್ ಮಾಡಿದ್ದಾರೆ. ಹಾಗಾಗಿ ಅಧಿಕಾರಿಗಳು ಬರುತ್ತಿಲ್ಲ ಎಂದು ದೂರಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನ, ಗ್ರಾಪಂ ಅಧ್ಯಕ್ಷೆ ರೂಪಾ ಸಣ್ಣಬಾರ್ಕಿ, ಉಪಾಧ್ಯಕ್ಷ ದಾದಪೀರ ಹಳೇವೂರ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ, ಬ್ಯಾಡಗಿ ತಾಲೂಕಾಧ್ಯಕ್ಷ ಹಾಲೇಶ ಜಾಧವ, ಮುರಿಗೆಪ್ಪ ಶೆಟ್ಟರ್, ಗವಿಸಿದ್ದಪ್ಪ ದ್ಯಾವಣ್ಣನವರ, ಫಾಲಕ್ಷಗೌಡ ಪಾಟೀಲ, ರಾಜು ಹೊಸಕೇರಿ, ಬಸವರಾಜ ಛತ್ರದ, ಸರೋಜಾ ಉಳ್ಳಾಗಡ್ಡಿ, ದ್ಯಾಮನಗೌಡ ಪಾಟೀಲ, ಶಂಕ್ರಣ್ಣ ಮಾತನವರ, ಬಸವರಾಜ ಹಲಗೇರಿ, ಸುರೇಶ ಯತ್ನಳ್ಳಿ, ಡಾ. ಕೆಲಗಾರ, ನ್ಯಾಯವಾದಿ ನಿಂಗಪ್ಪ ಬಟ್ಲಕಟ್ಟಿ, ದೀಲಿಪ ಸೇರಿದಂತೆ ಇನ್ನಿತರರು ಇದ್ದರು.