ರಾಜ್ಯ ಸರ್ಕಾರ ಬಜೆಟ್‌ನಲ್ಲಿ ರೈತರ ಬೇಡಿಕೆಗಳ ಮಂಡಿಸಲು ಒತ್ತಾಯ

| Published : Feb 26 2025, 01:02 AM IST

ರಾಜ್ಯ ಸರ್ಕಾರ ಬಜೆಟ್‌ನಲ್ಲಿ ರೈತರ ಬೇಡಿಕೆಗಳ ಮಂಡಿಸಲು ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರದಲ್ಲಿ ಸಾಮೂಹಿಕ ನಾಯಕತ್ವ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರಾಜ್ಯ ಸರ್ಕಾರ 2025ರ ಬಜೆಟ್‌ ಮಂಡನೆಯಲ್ಲಿ ರಾಜ್ಯ ರೈತರ ಒತ್ತಾಯಗಳ ಮಂಡಿಸಬೇಕು ಎಂದು ಸಂಯುಕ್ತ ಕಿಸಾನ್‌ ಮೋರ್ಚಾ (ಎನ್‌.ಪಿ) ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ ಎಂದು ಸಾಮೂಹಿಕ ನಾಯಕತ್ವ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ಹಾಗೂ ಎಲ್ಲ ಕೃಷಿ ತೋಟಗಾರಿಕೆ ಬೆಳೆಗಳಿಗೂ ಬೆಳೆ ವಿಮೆ ಜಾರಿಯಾಗಬೇಕು, ರೈತರ ಪ್ರಕೃತಿ ವಿಕೋಪ ಬೆಳೆನಷ್ಟಕ್ಕೆ ವಿಮೆ ಪರಿಹಾರ ಸಿಗುವಂತಾಗಬೇಕು ಎಂದರು. ಕೃಷಿ ಸಾಲ ನೀತಿ ಬದಲಾಗಬೇಕು. 1 ಎಕರೆ ಭೂಮಿ ಹೊಂದಿರುವ ರೈತರಿಗೆ 10 ಲಕ್ಷ ರು.ಸಾಲವನ್ನು ಶೇ.3ರ ಬಡ್ಡಿ ದರದಲ್ಲಿ ನೀಡಬೇಕು, ಕಬ್ಬಿನ ಎಫ್‌ಆರ್ಪಿ ದರ ರೈತನ ಹೊಲದಲ್ಲಿನ ದರ ಎಂದು ಬದಲಾಗಬೇಕು ಎಂದರು.

ಸಕ್ಕರೆ ಕಾರ್ಖಾನೆಗಳು ಸಕ್ಕರೆ ಇಳುವರಿ ಮೋಸ ತಪ್ಪಿಸಲು ಕನಿಷ್ಠ ಮಿತಿ 9ಕ್ಕೆ ಜಾರಿ ಆಗಬೇಕು, ಬೆಂಕಿ ಬಿದ್ದು ಸುಟ್ಟ ಕಬ್ಬಿಗೆ ಕಾರ್ಖಾನೆಗಳು ಕಬ್ಬಿನ ಹಣದಲ್ಲಿ ಶೇ.25ರಷ್ಟು ಕಟಾವು ಮಾಡುವುದನ್ನು ತಪ್ಪಿಸಬೇಕು, ಕೃಷಿ ಉತ್ಪನ್ನಗಳಿಗೆ ಎಪಿಎಂಸಿ ಯಲ್ಲಿ ಅಡಮಾನ ಸಾಲ ಯೋಜನೆ ಸದೃಡಗೊಳಿಸಬೇಕು 2000 ಕೋಟಿ ಆವರ್ತನಿಧಿ ಇಡಬೇಕು ಎಂದರು.

ಕೃಷಿಗೆ ಬಳಸುವ ಕೀಟನಾಶಕ, ರಸಗೊಬ್ಬರ ಹನಿ ನೀರಾವರಿ ಉಪಕರಣ ಜಿಎಸ್ಟಿ ತೆರಿಗೆ ರದ್ದುಗೊಳಿಸಬೇಕು. ಟ್ರ್ಯಾಕ್ಟರ್ ಬಿಡಿಭಾಗಗಳ ಕೃಷಿ ಯಂತ್ರಗಳ ಮಾರಾಟ ಕೇಂದ್ರಗಳಲ್ಲಿ ದರ ನಿಗದಿ ಮಾಡಿದ ದರವನ್ನು ಎಲ್ಲಾ ಮಾರಾಟ ಕೇಂದ್ರಗಳಲ್ಲಿ ಬಹಿರಂಗವಾಗಿ ಪ್ರಕಟಿಸಬೇಕು. ಕಾಡಂಚಿನ ಪ್ರಾಣಿಗಳ ಹಾವಳಿಯಿಂದ ರೈತರ ಬೆಳೆಗಳು ನಾಶವಾಗಿ ರೈತರ ಜೀವನ ನಾಶವಾಗುತ್ತಿರುವುದನ್ನು ತಪ್ಪಿಸಲು 50 ವರ್ಷಗಳ ನಿಷೇಧ ಮಾನವ ಹಾನಿ ಪರಿಹಾರ ವೈಜ್ಞಾನಿಕವಾಗಿ ನಿಗದಿಯಾಗಬೇಕು ಎಂದರು.

ಕಳಪೆ ಬೀಜ ಗೊಬ್ಬರ ನರ್ಸರಿ ಸಸಿಗಳು ಕೀಟನಾಶಕ ಮಾರಾಟ ಮಾಡುವವರಿಗೆ ಜಾಮೀನು ರಹಿತ ಕಠಿಣ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿ ಮಾಡಬೇಕು. ಮಹಿಳಾ ಸ್ವಸಹಾಯ ಸಂಘಗಳಿಗೆ ಮೈಕ್ರೋಫೈನಾನ್ಸ್‌ಗಳು ನೀಡುವ ಸಾಲ ಮಸೂಲಾತಿ ಕಿರುಕುಳ ನಿಲ್ಲಿಸಲು ಕಠಿಣ ಕಾನೂನು ಜಾರಿ ಮಾಡಬೇಕು. ರಾಜ್ಯ ಸರ್ಕಾರ ರೈತರಿಗೆ ನೀಡುತ್ತಿದ್ದ ಕಿಸಾನ್ ಸಮ್ಮಾನ್ ಯೋಜನೆ ಹಣ 4000 ಕೂಡಲೇ ಬಿಡುಗಡೆ ಮಾಡಿ ಹಾಗೂ 8000ಕ್ಕೆ ಏರಿಕೆ ಮಾಡಬೇಕು. ರಾಜ್ಯದಲ್ಲಿ ಬಗರ್ ಹುಕುಂ ಸಾಗುವಳಿ ಅರ್ಜಿ ಸಲ್ಲಿಸಿರುವ 32 ಲಕ್ಷ ರೈತರಿಗೆ ಸುಲಭವಾಗಿ ಸಾಗುವಳಿ ಪತ್ರ ಸಿಗುವಂತಾಗಲು ಹಲವು ನಿಯಮಗಳು ತಿದ್ದುಪಡಿ ಮಾಡಬೇಕು. ಕಂದಾಯ ಇಲಾಖೆ ಅಧಿಕಾರಿಗಳ ಶೋಷಣೆ ತಪ್ಪಿಸಬೇಕು ಎಂದರು.

ಹೈನುಗಾರಿಕೆ ರೈತರಿಗೆ ನೀಡುವ ಹಾಲಿನ ಪ್ರೋತ್ಸಾಹ ಧನ ಲೀಟರಿಗೆ 10 ರು. ಏರಿಕೆ ಮಾಡಬೇಕು. ಒಂದು ವರ್ಷದಿಂದ ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ಹಾಲಿನ 5 ರು. ಪ್ರೋತ್ಸಾಹ ಧನ ಸುಮಾರು ಒಂದು ಸಾವಿರ ಕೋಟಿ ಕೂಡಲೇ ಬಿಡುಗಡೆ ಮಾಡಬೇಕು. ರಾಜ್ಯ ಸರ್ಕಾರ ಚುನಾವಣೆಯಲ್ಲಿ ಭರವಸೆ ನೀಡಿದಂತೆ ರಾಜ್ಯದಲ್ಲಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದುಪಡಿಸಲು ರಾಜ್ಯ ಸರ್ಕಾರ ಬಜೆಟ್ ಮಂಡನೆಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ ಎಂದರು.

ಸುದ್ದಿಗೋಷ್ಟಿಯಲ್ಲಿ ಕಬ್ಬು ಬೆಳೆಗಾರ ಸಂಘದ ಜಿಲ್ಲಾ ಉಪಾಧ್ಯಕ್ಷ ಮೂಡಲ್ ಪುರ ಪಟೇಲ್ ಶಿವಮೂರ್ತಿ, ಕಬ್ಬು ಬೆಳೆಗಾರ ಸಂಘದ ಜಿಲ್ಲಾ ಕಾರ್ಯದರ್ಶಿ ಎಚ್ ಮೂರಳ್ಳಿ ಮಹದೇವಸ್ವಾಮಿ, ತಾಲೂಕ ಅಧ್ಯಕ್ಷ ನಂಜದೇವನಪುರ ಸತೀಶ್‌, ಉಪಾಧ್ಯಕ್ಷ ಹೆಗ್ಗೋಠಾರ ಶಿವ ಸ್ವಾಮಿ, ತಾಲೂಕು ಕಾರ್ಯದರ್ಶಿ ಉಡಿಗಾಲ ಸುಂದ್ರಪ್ಪ, ಯಳಂದೂರು ತಾಲೂಕು ಕಾರ್ಯದರ್ಶಿ ಯರಿಯೂರು ಮಹೇಶ್‌ ಇದ್ದರು.