ಸಂಸದ ಗೋವಿಂದ ಕಾರಜೋಳ ಬಿಜೆಪಿ ಯುವಮುಖಂಡ ಅನಿತ್‌ ಕುಮಾರ್‌ಗೆ ಜನ್ಮದಿನದ ಶುಭಾಶಯ ಕೋರಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಅಭಿವೃದ್ಧಿಯ ಕೆಲಸಗಳೂ ಆಗುತ್ತಿಲ್ಲ. ಸರ್ಕಾರ ಸಂಪೂರ್ಣ ನಿಷ್ಕ್ರಿಯಗೊಂಡಿದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಎಂ.ಕಾರಜೋಳ ತಿಳಿಸಿದರು. ಸೋಮವಾರ ಭೀಮಸಮುದ್ರಕ್ಕೆ ಭೇಟಿ ನೀಡಿ ಬಿಜೆಪಿ ಯುವ ಮುಖಂಡ ಅವರ ಜನ್ಮದಿನಾಚರಣೆಯಲ್ಲಿ ಭಾಗಿಯಾದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಬರ ಆವರಿಸಿದೆ. ರೈತರು ಬೆಳೆಯ ನಷ್ಟದಿಂದ ಕಂಗಾಲಾಗಿದ್ದಾರೆ. ಜಾನುವಾರಗಳೂ ಕೂಡ ತೊಂದರೆಗೆ ಸಿಲುಕಿವೆ. ಇಂತಹ ಸ್ಥಿತಿ ಇದ್ದರೂ ರಾಜ್ಯ ಸರ್ಕಾರ ರೈತರ ಸಾಲ ಮನ್ನ ಮಾಡುವ ಕೆಲಸಕ್ಕೆ ಮುಂದಾಗುತ್ತಿಲ್ಲ. ಕನಿಷ್ಟ ಗೋಶಾಲೆಗಳನ್ನು ತೆರೆಯುವ ಕೆಲಸಕ್ಕೂ ಕೈ ಹಾಕುತ್ತಿಲ್ಲ ಎಂದರು.

ಅದಿರು ಲಾರಿಗಳ ಓಡಾಟದಿಂದ ಗ್ರಾಮದ ಜನರ ಮೇಲೆ ಆಗುತ್ತಿರುವ ತೊಂದರೆಗಳೂ ನನ್ನ ಗಮನಕ್ಕೆ ಬಂದಿವೆ. ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆದಿದ್ದೇನೆ. ಗಣಿಗಾರಿಕೆಯ ಧೂಳಿನಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ರೈತರ ಬೆಳೆಗಳು ನಾಶವಾಗುವಂತಹ ಪರಿಸ್ಥಿತಿ ಇದೆ. ಕುಡಿಯುವ ನೀರು, ಕೆರೆಕಟ್ಟೆಗಳ ನೀರು ಕಲುಷಿತವಾಗುತ್ತಿದ್ದು, ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಜಿಲ್ಲಾಡಳಿತ ಲಾರಿಗಳ ಓಡಾಟ ನಿಲ್ಲಿಸಲು ಕ್ರಮ ತೆಗೆದುಕೊಳ್ಳಬೇಕೆಂದರು.

ಚಿತ್ರದುರ್ಗ ಬಿಜೆಪಿ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಜಿ.ಅರುಣ್ ಕುಮಾರ್, ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶರತ್ ಪಟೇಲ್, ಬಿಜೆಪಿ ಮುಖಂಡರಾದ ಟಿ.ಜಿ.ಮಲ್ಲಿಕಾರ್ಜುನ್, ನಂದಿ ನಾಗರಾಜ್ ಜಿಲ್ಲಾ ಮಾಜಿ ಬಿಜೆಪಿ ಅಧ್ಯಕ್ಷ ಮುರುಳಿ ಮಾಧುರಿ ಗಿರೀಶ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಸುರೇಶ್, ವೆಂಕಟೇಶ್ ಹಾಗೂ ಅಭಿಮಾನಿಗಳು ಹಾಜರಿದ್ದರು.