ರಾಜ್ಯ ಸರ್ಕಾರದ ರೈತ ಪರ ತೀರ್ಮಾನ ಸ್ವಾಗತಾರ್ಹ

| Published : Sep 06 2025, 01:00 AM IST

ಸಾರಾಂಶ

ರಾಮನಗರ: ಬಿಡದಿ ಟೌನ್ ಶಿಪ್ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರೈತರ ಪರವಾದ ತೀರ್ಮಾನ ಕೈಗೊಂಡಿರುವುದನ್ನು ಸ್ವಾಗತಿಸುತ್ತೇವೆ ಎಂದು ತಾಪಂ ಮಾಜಿ ಸದಸ್ಯರಾದ ರೈತ ಮುಖಂಡ ಹೊಸೂರು ರಾಜಣ್ಣ ತಿಳಿಸಿದರು.

ರಾಮನಗರ: ಬಿಡದಿ ಟೌನ್ ಶಿಪ್ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರೈತರ ಪರವಾದ ತೀರ್ಮಾನ ಕೈಗೊಂಡಿರುವುದನ್ನು ಸ್ವಾಗತಿಸುತ್ತೇವೆ ಎಂದು ತಾಪಂ ಮಾಜಿ ಸದಸ್ಯರಾದ ರೈತ ಮುಖಂಡ ಹೊಸೂರು ರಾಜಣ್ಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಎಕರೆಗೆ ನಿಯಮಗಳ ಪ್ರಕಾರ 1.50ರಿಂದ 2.50 ಕೋಟಿ ಭೂ ಪರಿಹಾರ ನೀಡಲಾಗುವುದು. ಪರಿಹಾರ ಬೇಡ ಎನ್ನುವ ಭೂ ಮಾಲೀಕರಿಗೆ ಅಭಿವೃದ್ದಿ ಹೊಂದಿದ ಭೂಮಿಯಲ್ಲಿ ಶೇಕಡ 50 - 50 ಹಾಗೂ ರಸ್ತೆ ಪಕ್ಕದಲ್ಲಿ ನಿರ್ಮಾಣಗೊಳ್ಳುವ ವಾಣಿಜ್ಯ ಕಟ್ಟಡಗಳಲ್ಲಿ ಶೇಕಡ 45-55ರ ಅನುಪಾತದಷ್ಟು ನೀಡಲು ಸರ್ಕಾರ ಒಪ್ಪಿರುವುದು ಖುಷಿ ತಂದಿದೆ ಎಂದರು.

ಕಳೆದ 18 ವರ್ಷಗಳಿಂದ ಹೋರಾಟ ನಡೆಸುತ್ತಿದ್ದ ರೈತರ ಪರವಾಗಿ ಉತ್ತಮ ತೀರ್ಮಾನ ತೆಗೆದುಕೊಳ್ಳಲು ಕಾರಣರಾದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಮಾಜಿ ಸಂಸದ ಡಿ.ಕೆ.ಸುರೇಶ್, ಶಾಸಕ ಬಾಲಕೃಷ್ಣ ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

2006ರಲ್ಲಿ ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ಘೋಷಣೆ ಮಾಡಿದರು.ಡಿಎಲ್ ಎಫ್ 500 ಕೋಟಿ ಹೂಡಿಕೆ ಕೂಡ ಮಾಡಿತು. ಇದರಿಂದ ಆತಂಕಕ್ಕೊಳಗಾದ ರೈತರು ಪ್ರತಿರೋಧ ವೊಡ್ಡಿದರಲ್ಲದೆ ನಿರಂತರವಾಗಿ ಹೋರಾಟ ನಡೆಸಿದೇವು. ನ್ಯಾಯಾಲಯ ಮೊರೆ ಹೋದರು ತಡೆಯಾಜ್ಞೆ ತರಲು ಸಾಧ್ಯವಾಗಲಿಲ್ಲ.

ಟೌನ್ ಶಿಪ್ ಗೆ ಗುರುತಿಸಿದ್ದ ಭೂಮಿಯನ್ನು ರೆಡ್ ಜೋನ್ ಅಂತ ಘೋಷಣೆ ಮಾಡಲಾಗಿತ್ತು. ಈ ಕಾರಣದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯಲಿಲ್ಲ. 2020ರಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾದಾಗ ಕುಮಾರಸ್ವಾಮಿರವರು ಟೌನ್ ಶಿಪ್ ತಮ್ಮ ಕನಸಿನ ಕೂಸು ಎಂದಿದ್ದರು. ಆಗಲೂ ಟೌನ್ ಶಿಪ್ ಯೋಜನೆ ಕೈಬಿಡುವಂತೆ ಹೋರಾಟ ಮಾಡಿದಾಗ ಒಪ್ಪಲಿಲ್ಲ ಎಂದರು.

ಜೆಡಿಎಸ್ , ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ರೆಡ್ ಜೋನ್ ಅನ್ನು ತೆಗೆಯುವ ಪ್ರಯತ್ನ ಮಾಡಲಿಲ್ಲ. ಪ್ರಾರಂಭದಲ್ಲಿ ರೈತರಲ್ಲಿದ್ದ ಹೋರಾಟದ ಹುರುಪು ಆನಂತರ ತಣ್ಣಗಾಯಿತು. ಆದರೂ ಶಾಸಕ ಬಾಲಕೃಷ್ಣರವರು ರೈತರಿಗೆ ಬೆಂಬಲವಾಗಿ ನಿಂತು ನಿರಂತರವಾಗಿ ಹೋರಾಟ ಮಾಡಿದರು.

ಟೌನ್ ಶಿಪ್ ಯೋಜನೆ ಕೈ ಬಿಡುವ ಅಥವಾ ಒಳ್ಳೆಯ ಪರಿಹಾರ ಕೊಡಿಸುವ ಭರವಸೆಯನ್ನು ಬಾಲಕೃಷ್ಣ ನೀಡಿದ್ದರು. ಅದರಂತೆ ರೈತರಿಗೆ ನ್ಯಾಯಯುತವಾದ ಪರಿಹಾರ ಕೊಡಿಸಿದ್ದಾರೆ ಎಂದು ಹೇಳಿದರು.

ಈಗ ಡಿ ನೋಟಿಫೈ ಮಾಡಲು ಅವಕಾಶ ಇಲ್ಲ. ಸರ್ಕಾರ ನಿಗದಿ ಮಾಡಿರುವ ದರ ತೃಪ್ತಿದಾಯಕವಾಗಿದೆ. ಏನಾದರು ಸಣ್ಣ ಪುಟ್ಟ ವ್ಯತ್ಯಾಸ ಇದ್ದರೆ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳುತ್ತೇವೆ. ಈಗ ಟೌನ್ ಶಿಪ್ ವಿರೋಧ ಮಾಡುತ್ತಿರುವ ನಾಯಕರು ತಮ್ಮ ಸರ್ಕಾರದ ಅ‍ವಧಿಯಲ್ಲಿ ರೆಡ್ ಜೋನ್ ತೆಗೆಯುವ ಪ್ರಯತ್ನ ಏಕೆ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದರು.

ರೈತರ ಹೋರಾಟವನ್ನು ನಾವು ಗೌರವಿಸುತ್ತೇವೆ. ಟೌನ್ ಶಿಪ್ ಯೋಜನೆಯಲ್ಲಿ ಅರ್ಧ ಎಕರೆ ಭೂಮಿ ಕಳೆದುಕೊಳ್ಳುವ ರೈತನು ನೆಮ್ಮದಿಯ ಜೀವನ ನಡೆಸಬೇಕು. ಕಟ್ಟ ಕಡೆಯ ರೈತನಿಗೂ ನ್ಯಾಯ ಸಿಗುವ ವಿಶ್ವಾಸವಿದೆ. ಆದರೆ, ರಾಜಕೀಯ ಕಾರಣಕ್ಕಾಗಿ ಚಳವಳಿ ನಡೆಸುತ್ತಿರುವ ಹೋರಾಟಗಾರರು ರೈತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಹೊಸೂರು ರಾಜಣ್ಣ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಕೃಷ್ಣಮೂರ್ತಿ, ಸಿದ್ದರಾಜು, ರಾಮಾಂಜನೇಯ, ಶಿವಕುಮಾರ್, ತ್ಯಾಗರಾಜು ಇತರರಿದ್ದರು.

ಕೋಟ್ .................

ಬಿಡದಿ ಟೌನ್ ಶಿಪ್ ಯೋಜನೆಯ ಅಂತಿಮ ಅಧಿಸೂಚನೆಯ ದಿನಾಂಕದಿಂದ ಹಣಕಾಸು/ ಅಭಿವೃದ್ಧಿಪಡಿಸಿದ ಜಾಗವನ್ನು ಪರಿಹಾರ ನೀಡುವವರೆಗೆ ರೈತರ ಜೀವನೋಪಾಯಕ್ಕೆ ಪ್ರತಿ ಎಕರೆಗೆ ವಾರ್ಷಿಕ ಅನುದಾನ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಖುಷ್ಕಿ ಭೂಮಾಲೀಕರಿಗೆ ವಾರ್ಷಿಕವಾಗಿ 30 ಸಾವಿರ, ತರಿ ಭೂಮಾಲೀಕರಿಗೆ ವಾರ್ಷಿಕವಾಗಿ 40 ಸಾವಿರ, ಭಾಗಾಯ್ತು ಭೂ ಮಾಲೀಕರಿಗೆ ವಾರ್ಷಿಕ 50 ಸಾವಿರ ಅನುದಾನ ಸಿಗಲಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ.

- ಸಿದ್ದರಾಜು, ರೈತ, ಬೈರಮಂಗಲ

5ಕೆಆರ್ ಎಂಎನ್ 2.ಜೆಪಿಜಿ

ತಾಪಂ ಮಾಜಿ ಸದಸ್ಯರಾದ ರೈತ ಮುಖಂಡ ಹೊಸೂರು ರಾಜಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.