ಸಾರಾಂಶ
ರಾಜ್ಯದ ಜೇನು ತುಪ್ಪವನ್ನು ನಿರ್ದಿಷ್ಟ ‘ಬ್ರ್ಯಾಂಡ್‌ನೇಮ್’ ಮೂಲಕ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲು ತೋಟಗಾರಿಕೆ ಇಲಾಖೆ ಕ್ರಮ ಕೈಗೊಂಡಿದ್ದು, ಲಾಲ್‌ಬಾಗ್‌ನಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಲೋಕಾರ್ಪಣೆ ಮಾಡಲಿದೆ.
ಕನ್ನಡಪ್ರಭ ವಾರ್ತೆ, ಬೆಂಗಳೂರು
ರಾಜ್ಯದ ಜೇನು ತುಪ್ಪವನ್ನು ನಿರ್ದಿಷ್ಟ ‘ಬ್ರ್ಯಾಂಡ್‌ನೇಮ್’ ಮೂಲಕ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲು ತೋಟಗಾರಿಕೆ ಇಲಾಖೆ ಕ್ರಮ ಕೈಗೊಂಡಿದ್ದು, ಲಾಲ್‌ಬಾಗ್‌ನಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಲೋಕಾರ್ಪಣೆ ಮಾಡಲಿದೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಶಮ್ಲಾ ಇಕ್ಬಾಲ್, ರಾಜ್ಯದಲ್ಲಿ ವಿವಿಧ ಹೆಸರುಗಳಲ್ಲಿ ಉತ್ಪಾದನೆಯಾಗುತ್ತಿರುವ ಜೇನು ತುಪ್ಪವನ್ನು ನಿರ್ದಿಷ್ಟ ಬ್ರ್ಯಾಂಡ್ ನೇಮ್ ಮೂಲಕ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕೆಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಜೇನು ತುಪ್ಪ ಉತ್ಪಾದಿಸುವ ಮುಂಚೂಣಿ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೂ ಸೇರಿದೆ. ಹೀಗಾಗಿ ರಾಜ್ಯದ ಜೇನು ತುಪ್ಪದ ವಹಿವಾಟು ವಿಸ್ತರಿಸಿ ಉತ್ತಮ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಈ ಕ್ರಮಕೈಗೊಂಡಿದೆ ಎಂದರು. ರಾಜ್ಯದಲ್ಲಿ ಸುಮಾರು 27 ಸಾವಿರ ಮಂದಿ ಜೇನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ವಾರ್ಷಿಕ 1,200 ಮೆಟ್ರಿಕ್ ಟನ್ ಜೇನುತುಪ್ಪ ಉತ್ಪಾದನೆಯಾಗುತ್ತಿದೆ. ನೈಸರ್ಗಿಕವಾಗಿ ಅರಣ್ಯ ಪ್ರದೇಶದಲ್ಲಿ ಜೇನು ಸಂಗ್ರಹಣೆ ಮತ್ತು ಜೇನು ಸಾಕಾಣಿಕೆ ಮೂಲಕ ಜೇನು ತುಪ್ಪ ಉತ್ಪಾದಿಸಲಾಗುತ್ತಿದೆ. ಬಯಲು ಸೀಮೆಯ ಜಿಲ್ಲೆಗಳಲ್ಲಿ ರೈತರು ಉಪ ಕಸುಬಾಗಿ ಜೇನು ಸಾಕಾಣಿಕೆ ಮಾಡುತ್ತಿದ್ದಾರೆ. ಜೇನು ಕೃಷಿಕರು ಒಂದೊಂದು ಪ್ರದೇಶದಲ್ಲಿ ಒಂದೊಂದು ಹೆಸರಿನಲ್ಲಿ ವಹಿವಾಟು ನಡೆಸುತ್ತಿದ್ದಾರೆ. ಹೀಗಾಗಿ, ರಾಜ್ಯದ ಜೇನು ತುಪ್ಪಕ್ಕೆ ಜಾಗತಿಕ ಮನ್ನಣೆ ಇಲ್ಲವಾಗಿದೆ ಎಂದು ಹೇಳಿದರು.ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್. ರಮೇಶ್ ಮಾತನಾಡಿ, ಕರ್ನಾಟಕದಲ್ಲಿ ಜೇನು ಕೃಷಿಗೆ ವಿಶೇಷ ಒತ್ತು ನೀಡುವ ಹಾಗೂ ನಾನಾ ಬಗೆಯ ಜೇನು ಉತ್ಪಾದಕರನ್ನು ಒಂದೇ ವೇದಿಕೆಗೆ ತಂದು ಕರ್ನಾಟಕದ ಜೇನನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವುದು ಇದರ ಉದ್ದೇಶ. ಈ ಕುರಿತು ಸಂಶೋಧನೆಗಳು, ಜೇನು ಗುಣಮಟ್ಟದ ಪರಿಶೀಲನೆ ಇತ್ಯಾದಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.