ರಾಜ್ಯದಲ್ಲಿರುವುದು ರಾಕ್ಷಸರ ಅಧಿಕಾರ: ನಿಖಿಲ್‌

| N/A | Published : Jul 06 2025, 01:48 AM IST / Updated: Jul 06 2025, 09:19 AM IST

ಸಾರಾಂಶ

ರಾಜ್ಯದಲ್ಲಿ ಈಗ ಅಧಿಕಾರ ನಡೆಸುತ್ತಿರುವವರು ರಾಕ್ಷಸರು, ಇನ್ನೂ ಮೂರು ವರ್ಷ ಎಷ್ಟಾಗುತ್ತೋ, ಅಷ್ಟು ಬಾಚುವ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

 ಯಾದಗಿರಿ :  ರಾಜ್ಯದಲ್ಲಿ ಈಗ ಅಧಿಕಾರ ನಡೆಸುತ್ತಿರುವವರು ರಾಕ್ಷಸರು, ಇನ್ನೂ ಮೂರು ವರ್ಷ ಎಷ್ಟಾಗುತ್ತೋ, ಅಷ್ಟು ಬಾಚುವ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಜನರದೊಂದಿಗೆ ಜನತಾದಳ- ಸದಸ್ಯತ್ವದ ನೋಂದಣಿ ಅಭಿಯಾನದ ಅಂಗವಾಗಿ ಶನಿವಾರ ಯಾದಗಿರಿ ನಗರದ ಸಪ್ತಪದಿ ಕನ್ವೆನ್ಷನ್‌ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಈಗ ಅಧಿಕಾರ ನಡೆಸುತ್ತಿರುವವರು ರಾಕ್ಷಸರು. ಇನ್ನು ಮೂರು ವರ್ಷಗಳ ಮೊದಲೇ ಸರ್ಕಾರ ಕೆಡವಿ ಇವರು ಮನೆಗೆ ಹೋಗುತ್ತಾರೆ. ರಾಜ್ಯದಲ್ಲಿ 2028ರಲ್ಲಿ ಮತ್ತೆ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಪೂರ್ಣ ಪ್ರಮಾಣದ ಸರ್ಕಾರ ರಚನೆಗೊಂಡು ಕುಮಾರಣ್ಣ ಮುಖ್ಯಮಂತ್ರಿಯಾಗುವುದು ಶತಸಿದ್ಧ ಎಂದರು.

ರಾಜ್ಯದ ಉದ್ದಗಲಕ್ಕೂ ಪ್ರವಾಸ ಕೈಗೊಳ್ಳುವ‌ ಮೂಲಕ ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸಿ ಆ ಮೂಲಕ ಮುಂದಿನ ಚುನಾವಣೆಯಲ್ಲಿ ಮಿತ್ರ ಪಕ್ಷ ಬಿಜೆಪಿಯೊಂದಿಗೆ ಅಧಿಕಾರಕ್ಕೆ ಬಂದು ರೈತರ, ಮಹಿಳೆಯರ ಮತ್ತು ಯುವಕರ ಆಶಾಕಿರಣವಾಗಿ ಕೆಲಸ ಮಾಡುವ ಇಚ್ಛೆ ದೇವೇಗೌಡ ಮತ್ತು ಕುಮಾರಸ್ವಾಮಿ ಅವರದ್ದಾಗಿದೆ. ರಾಜ್ಯದ ಎಲ್ಲೆಡೆ ಸುಮಾರು 50 ಲಕ್ಷ ಸದಸ್ಯತ್ವದ ಗುರಿ ಹೊಂದಲಾಗಿದೆ. ಎಲ್ಲರೂ ಮಿಸ್ ಕಾಲ್ ಕೊಡುವ ಸದಸ್ಯತ್ವ ಪಡೆಯಿರಿ ಎಂದರು.

ಕೇಂದ್ರ ಸಚಿವರಾಗಿ ಕುಮಾರಸ್ವಾಮಿ ಅವರು ರಾಜ್ಯದ ಜನರ ಸೇವೆ ಮಾಡುತ್ತಿದ್ದಾರೆ. ತಂಬಾಕು ಬೆಳೆಗಾರರು ತಂಬಾಕನ್ನು ಬೆಳೆದಿದ್ದರೂ ಅದಕ್ಕೆ ಬೆಂಬಲ ಬೆಲೆ ನಿರ್ಧಾರ ಆಗಿರಲಿಲ್ಲ. ಆಗ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಅವರಿಗೆ ಹೇಳಿ ಬೆಂಬಲ ಬೆಲೆ ಘೋಷಿಸಿದ್ದರು. ಮಾವು ಬೆಳೆಗಾರರಿಗೂ ಮಾವಿಗೆ ಬೆಂಬಲ ಬೆಲೆಯನ್ನು ಕೊಡಿಸಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರ ದಿವಾಳಿ:

ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಜೆಡಿಎಸ್ ಕಥೆ ಮುಗಿದೋಯ್ತು ಅಂತಾರೆ. ಆದರೆ ನಿಮ್ಮ ಪಕ್ಷ ಎಷ್ಟು ರಾಜ್ಯದಲ್ಲಿ ಅಧಿಕಾರದಲ್ಲಿದೆ ಎಂದು ಕಾಂಗ್ರೆಸ್‌ನ್ನು ಅವರು ಪ್ರಶ್ನಿಸಿದರು. ನೂರು ವರ್ಷ ಇತಿಹಾಸ ಇರುವ ಕಾಂಗ್ರೆಸ್ ಮೂರು ರಾಜ್ಯಕ್ಕೆ ಸೀಮಿತವಾಗಿದೆ. ಗ್ಯಾರಂಟಿಯಿಂದ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ, ಸರ್ಕಾರಿ ನೌಕರರಿಗೆ ವೇತನ ಕೊಡಲೂ ಈ ಸರ್ಕಾರಕ್ಕೆ ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ನಿಷ್ಠಾವಂತ ಅಧಿಕಾರಿಗಳಿಗೆ ಬೆಲೆ ಇಲ್ಲ. 31 ವರ್ಷ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿ ಮೇಲೆ‌ ಸಿಎಂ ಕಪಾಳ ಮೋಕ್ಷ ಮಾಡಲು ಹೋಗಿದ್ದರು. ಇದಕ್ಕಾಗಿ ಅವರು ಮನನೊಂದು ಸೇವೆಯಿಂದ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದರು ಎಂದರು.

Read more Articles on