The statement is not correct: Sulibele

ಚಿಕ್ಕಮಗಳೂರು: ‘ಮುಸ್ಲಿಂ ಧರ್ಮ ಶ್ರೇಷ್ಠ’ ಎಂದು ಸಚಿವ ಬಸವರಾಜ ರಾಯರೆಡ್ಡಿ ನೀಡಿರುವ ಹೇಳಿಕೆ ಸರಿಯಲ್ಲ. ಅವರಿಗೆ ಬಹುಶಃ ಇಸ್ಲಾಂ ಧರ್ಮ ಎಂದರೇನು ಎಂಬುದೇ ಸರಿಯಾಗಿ ತಿಳಿದಿಲ್ಲ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಸ್ಲಾಂ ಧರ್ಮದ ಆಚರಣೆಗಳು ಹಾಗೂ ಯಾತ್ರೆಗಳನ್ನು ಏಕೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಸಚಿವರಿಗೆ ತಿಳಿವಳಿಕೆ ಇಲ್ಲದಿರಬಹುದು. ಓರ್ವ ಸಚಿವರು ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ ಎಂದರು.

ಎಲ್ಲ ಧರ್ಮದ ಬಗ್ಗೆ ಗೌರವ ಇದೆ. ಒಬ್ಬ ಹಿಂದುವಾಗಿ ಉಳಿದ ಎಲ್ಲ ಧರ್ಮಗಳಿಗಿಂತ ಮುಸ್ಲಿಂ ಧರ್ಮ ಶ್ರೇಷ್ಠ ಎಂದು ಹೇಳುವುದು ಸಮಂಜಸವಲ್ಲ. ರಾಜಕೀಯ ಕಾರಣಕ್ಕಾಗಿ ಮುಸ್ಲಿಂ ಮತಗಳನ್ನು ಪಡೆಯುವುದು ಅನಿವಾರ್ಯ ಎಂಬ ಮನಸ್ಥಿತಿಯಿಂದ ಇಂತಹ ಹೇಳಿಕೆಗಳು ಬರುತ್ತಿವೆ ಎಂದು ಆರೋಪಿಸಿದರು.

ಇದೇ ರೀತಿ ಪಾಕಿಸ್ತಾನ ಶ್ರೇಷ್ಠ ರಾಷ್ಟ್ರ ಎಂದು ಯಾರಾದರೂ ಹೇಳಿದರೂ ಆಶ್ಚರ್ಯಪಡಬೇಕಿಲ್ಲ ಎಂದು ವ್ಯಂಗ್ಯವಾಡಿದರು.

ಅವರು ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆ ಮಾಡುತ್ತಾರೆ. ಆದರೆ ಹೊರಗೆ ಬಂದಾಗ ಇದಕ್ಕೆ ವಿರುದ್ಧವಾದ ಹೇಳಿಕೆಗಳನ್ನು ನೀಡುತ್ತಾರೆ ಎಂದು ಟೀಕಿಸಿದರು.