ಸಭೆಯಲ್ಲಿ ಪ್ರತಿಧ್ವನಿಸಿದ ಶಾಹು ಮಹಾರಾಜರ ಪ್ರತಿಮೆ

| Published : Dec 06 2024, 09:01 AM IST

ಸಭೆಯಲ್ಲಿ ಪ್ರತಿಧ್ವನಿಸಿದ ಶಾಹು ಮಹಾರಾಜರ ಪ್ರತಿಮೆ
Share this Article
  • FB
  • TW
  • Linkdin
  • Email

ಸಾರಾಂಶ

ಶಾಹು ನಗರದಲ್ಲಿ ಸ್ವಾಗತ ಕಮಾನು ನಿರ್ಮಾಣ, ಛತ್ರಪತಿ ಶಾಹು ಮಹಾರಾಜರ ಪ್ರತಿಮೆ ಪ್ರತಿಷ್ಠಾಪನೆ ವಿಚಾರ ಬೆಳಗಾವಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಶಾಹು ನಗರದಲ್ಲಿ ಸ್ವಾಗತ ಕಮಾನು ನಿರ್ಮಾಣ, ಛತ್ರಪತಿ ಶಾಹು ಮಹಾರಾಜರ ಪ್ರತಿಮೆ ಪ್ರತಿಷ್ಠಾಪನೆ ವಿಚಾರ ಬೆಳಗಾವಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು.

ಮೇಯರ್‌ ಸವಿತಾ ಕಾಂಬಳೆ ಅಧ್ಯಕ್ಷತೆಯಲ್ಲಿ ಗುರುವಾರ ಮಹಾನಗರ ಪಾಲಿಕೆ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಶಾಹುನಗರದಲ್ಲಿ ಛತ್ರಪತಿ ಶಾಹು ಮಹಾರಾಜರ ಪ್ರತಿಮೆ ಸ್ಥಾಪಿಸುವಂತೆ ಒಕ್ಕೊರಲಿನಿಂದ ಆಗ್ರಹಿಸಿದರು. ಶಾಸಕ ಆಸೀಫ್‌ ಸೇಠ್‌ ಅವರು ನಮಗೂ ಶಾಹು ಮಹಾರಾಜರ ಬಗ್ಗೆ ಅಪಾರ ಅಭಿಮಾನವಿದೆ. ಆದರೆ, ಶಾಹು ನಗರದ ಗಡಿ ಈವರೆಗೆ ನಿರ್ಧಾರವಾಗಿಲ್ಲ. ಗಡಿ ನಿರ್ಧಾರವಾದ ಬಳಿಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಸ್ವಾಗತ ಕಮಾನು ಹಾಗೂ ಶಾಹು ಮಹಾರಾಜರ ಪ್ರತಿಮೆ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.ಗಡಿ ನಿರ್ಧಾರದ ವಿಚಾರ ಪ್ರಸ್ತಾಪವಾಗುತ್ತಿದ್ದಂತೆಯೇ ನಗರ ಸೇವಕ ಶ್ರೇಯಸ್‌ ನಾಕಾಡಿ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಶಾಸಕ ಆಸೀಫ್‌ ಸೇಠ್‌ ಮತ್ತು ನಾಕಾಡಿ ನಡುವೆ ವಾಗ್ವಾದ ನಡೆಯಿತು. ರವಿ ಧೋತ್ರೆ ಸೇರಿದಂತೆ ಆಡಳಿತಾರೂಢ ಪಕ್ಷದ ಸದಸ್ಯರು ನಾಕಾಡಿ ಅವರಿಗೆ ಧ್ವನಿಗೂಡಿಸಿದರು. ರಮೇಶ ಸೊಂಟಕ್ಕಿ ಮಾತನಾಡಿ, ಆ ಭಾಗದ ಜನರ ಅಭಿಪ್ರಾಯ ಸಂಗ್ರಹಿಸಿ, ಅದರ ಸಾಧಕ- ಬಾಧಕ ನೋಡಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಸಭೆಯ ಗಮನ ಸೆಳೆದರು.

ನಗರದ ಕ್ಲಬ್ ರಸ್ತೆಗೆ ಕೇಂದ್ರ ಮಾಜಿ ಸಚಿವ ದಿ.ಬಿ.ಶಂಕರಾನಂದ ಅವರ ಜನ್ಮ ಶತಾಬ್ದಿ ಹಿನ್ನೆಲೆಯಲ್ಲಿ ಅವರ ಹೆಸರನ್ನು ಇಡಬೇಕು. ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸುವಂತೆ ಸದಸ್ಯ ಸಂದೀಪ ಜೀರಗ್ಯಾಳ ಆಗ್ರಹಿಸಿದರು. ರಮೇಶ ಸೊಂಟಕ್ಕಿ ಮಾತನಾಡಿ, ಕ್ಲಬ್‌ ರಸ್ತೆ ಮಾರ್ಗಕ್ಕೆ ಅಧಿಕೃತವಾಗಿ ಯಾವ ಹೆಸರಿದೆ ಎಂಬುದನ್ನು ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳಬೇಕು ಎಂದರು. ಈ ಕುರಿತು ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಂಜಿನಿಯರ್‌ ಲಕ್ಷ್ಮೀ ನಿಪ್ಪಾಣಿಕರ ಸಭೆಗೆ ತಿಳಿಸಿದರು.

ಸಭೆಯ ನೋಟಿಸ್‌ ನಡವಳಿಕೆ, ನಿರ್ಣಯ ಅಂಗೀಕಾರ ಸೇರಿದಂತೆ ಮತ್ತಿತರ ಅಗತ್ಯ ದಾಖಲೆಗಳನ್ನು ಸದಸ್ಯರಿಗೆ ಮರಾಠಿ ಭಾಷೆಯಲ್ಲಿ ನೀಡುವಂತೆ ಸದಸ್ಯರು ಆಗ್ರಹಿಸಿದರು. ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಹಾಗಾಗಿ,ಕನ್ನಡ ಭಾಷೆಯಲ್ಲೇ ದಾಖಲೆ ನೀಡಲಾಗುತ್ತದೆ ಎಂದು ಉಪ ಆಯುಕ್ತ ವಿಜಯಕುಮಾರ ತಿಳಿಸಿದರು. ಇದಕ್ಕೆ ಮರಾಠಿ ಭಾಷಿಕ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.ಕನ್ನಡ ಭಾಷೆಯಜೊತೆಗೆ ಮರಾಠಿ ಭಾಷೆಯಲ್ಲಿಯೂ ದಾಖಲೆ ನೀಡುವಂತೆ ಆಗ್ರಹಿಸಿದರು. ಮಧ್ಯ ಪ್ರವೇಶಿಸಿದ ಶಾಸಕ ಆಸೀಫ್‌ ಸೇಠ್‌ ಈ ಕುರಿತು ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ರಸ್ತೆ ಪುನಾರಂಭಕ್ಕೆ ಆಗ್ರಹ:

ಶಾಸಕ ಅಭಯ ಪಾಟೀಲ ಮಾತನಾಡಿ, ಮಹಾನಗರ ಪಾಲಿಕೆಗೆ ₹ 20 ಕೋಟಿ ತಲೆ ದಂಡ ತಂದಿದ್ದ ಹಳೆಯ ಪಿಬಿ ರಸ್ತೆಯನ್ನು ಪುನಾರಂಭಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಈ ರಸ್ತೆಯಲ್ಲಿ ಸಂಚಾರ ನಿಷೇಧಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಡಿ. 9 ರಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನನಡೆಯಲಿದೆ. ಈ ಹಿನ್ನೆಲೆಯಲ್ಲಿ ಒಂದು ಬದಿಯಲ್ಲಿ ರಸ್ತೆ ಸಂಚಾರ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಅಲ್ಲದೇ, ಪಾಲಿಕೆ ಕಾನೂನಿನ ಪ್ರಕಾರ ಭೂಮಿಯನ್ನು ಸ್ವಾಧೀನಕ್ಕೆ ಪಡೆದು ರಸ್ತೆಯನ್ನು ಪುನಾರಂಭಿಸಬೇಕು ಎಂದು ಆಗ್ರಹಿಸಿದರು.

ಹಳೆಯ ಪಿಬಿ ರಸ್ತೆ ವಿಚಾರವಾಗಿ ಶಾಸಕ ಆಸೀಫ್‌ ಸೇಠ್‌ ಮತ್ತು ಅಭಯ ಪಾಟೀಲ ನಡುವೆ ವಾಗ್ವಾದ ನಡೆಯಿತು. ಈ ರಸ್ತೆ ವಿಚಾರದಲ್ಲಿ ನಾನು ರಾಜಕಾರಣ ಮಾಡುತ್ತಿಲ್ಲ. ನೀವು ರಾಜಕಾರಣ ಮಾಡುವುದಾದರೆ ನಾನು ಕೂಡ ಎಲ್ಲದ್ದಕ್ಕೂ ಸಿದ್ಧ ಎಂದು ಹೇಳಿದರು.