ರಾಮನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವಂತಿಕೆ ಇರುವುದು ತಳ ಸಮುದಾಯಗಳ ಜನರು ಉತ್ತಮ ಸ್ಥಾನಮಾನ ಗಳಿಸುವುದರಲ್ಲಿಯೇ ವಿನಾ ಪ್ರತಿಮೆಗಳಲ್ಲಿ ಅಲ್ಲ ಎಂದು ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು
ರಾಮನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವಂತಿಕೆ ಇರುವುದು ತಳ ಸಮುದಾಯಗಳ ಜನರು ಉತ್ತಮ ಸ್ಥಾನಮಾನ ಗಳಿಸುವುದರಲ್ಲಿಯೇ ವಿನಾ ಪ್ರತಿಮೆಗಳಲ್ಲಿ ಅಲ್ಲ ಎಂದು ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ನಗರದ ವಿಜಯನಗರ ಬಳಿಯ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಶೈಕ್ಷಣಿಕ ಮತ್ತು ಆರ್ಥಿಕ ಸಬಲೀಕರಣ ಕೇಂದ್ರದ ವತಿಯಿಂದ ಶುಕ್ರವಾರ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳಿಗೆ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ವಿದ್ಯಾರ್ಥಿಗಳು ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದಿರುವ ಪುಸ್ತಕಗಳನ್ನು ಓದಬೇಕು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಈ ಸಮಾಜ ಯಾರನ್ನು ಮುಟ್ಟಲಾರದವರು ಎಂದು ಅಂಚಿನಲ್ಲಿ ನಿಲ್ಲಿಸಿತ್ತೊ ಅವರೇ ಈ ದೇಶದ ಭವಿಷ್ಯ ನಿರ್ಧರಿಸುವ ಸಂವಿಧಾನ ರಚಿಸಿದರು.ತನ್ನ ಜನರಿಗಾಗಿ ಅಂಬೇಡ್ಕರ್ ರವರು ಇಷ್ಟು ಜ್ಞಾನಾರ್ಜನೆ ಮಾಡಿ ವಿಮೋಚನೆ ನೀಡಿದರು. ಅದಕ್ಕಾಗಿ ಅವರು ತಮ್ಮ ನಾಲ್ಕು ಮಕ್ಕಳು ಮತ್ತು ಪತ್ನಿಯನ್ನು ಕಳೆದುಕೊಂಡರು ಎಂದು ತಿಳಿಸಿದರು.
ಅಂಬೇಡ್ಕರ್ ಅವರು ದಿನದ 18 ತಾಸು ಓದುತ್ತಿದ್ದರು. ನಾನು ಊಟ ಇಲ್ಲದೆ ಎರಡು ದಿನ ಇರಬಲ್ಲೆ. ಆದರೆ, ಪುಸ್ತಕ ಇಲ್ಲದೆ ಒಂದು ದಿನವೂ ಇರಲಾರೆ ಎಂದು ಅಂಬೇಡ್ಕರ್ ಹೇಳಿದ್ದರು. 1907 ರಲ್ಲಿ ಅಂಬೇಡ್ಕರ್ ಅವರು ಮೆಟ್ರಿಕ್ಯುಲೇಷನ್ ಪಾಸ್ ಮಾಡಿದಾಗ ಅವರನ್ನು ಸನ್ಮಾನಿಸಲಾಗುತ್ತದೆ. ಆಗ ಅವರ ಮೇಷ್ಟ್ರು ಬುದ್ದನ ಪುಸ್ತಕವನ್ನು ಕೊಡುಗೆಯಾಗಿ ನೀಡುತ್ತಾರೆ. ಅದು ಅವರನ್ನು ಮುಂದೆ ದೇಶದ ಮಹಾನ್ ವ್ಯಕ್ತಿಯಾಗಿ ಮುಂದೆ ರೂಪಿಸುತ್ತದೆಎಂದು ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ನಿಗಮದಿಂದ ಭೀಮ ಕೆಫೆ ಪ್ರಾರಂಭ :ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ತಂದೆ- ತಾಯಿಯ ಪರಿಶ್ರಮದ ಜೊತೆಗೆ ತಮ್ಮ ಈ ಸ್ಥಿತಿಗೆ ಕಾರಣವಾಗಿರುವ ಅಂಬೇಡ್ಕರ್ ಅವರಿಗೆ ಸದಾ ವಿಧೇಯರಾಗಿರಬೇಕು. ಚನ್ನಾಗಿ ಓದಿ ಉತ್ತಮ ಸ್ಥಾನಮಾನವನ್ನು ಅಲಂಕರಿಸಿ ಹೆತ್ತವರು ಮತ್ತು ಸಮುದಾಯಕ್ಕೆ ಕೀರ್ತಿ ತರಬೇಕು. ತಮ್ಮ ಸಮುದಾಯದ ಅಭಿವೃದ್ಧಿಗೆ ಮರಳಿ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ. ನರೇಂದ್ರ ಮಾತನಾಡಿ, ನಿಗಮದಿಂದ ಭೀಮ ಕೆಫೆ, ಅಂಬೇಡ್ಕರ್ ಭವನದಲ್ಲಿ ಗ್ರಂಥಾಲಯ ಆರಂಭದಂತಹ ಸಲಹೆಯನ್ನು ಸ್ವಾಮೀಜಿ ನೀಡಿದ್ದಾರೆ. ಅವುಗಳನ್ನು ಮುಂದಿನ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ಆರಂಭಿಸಲಾಗುವುದು. ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಸಂಘಟಿತರಾಗಿ ಸಮಾಜದ ಗಟ್ಟಿ ದನಿಯಾಗಿ ಕೆಲಸ ಮಾಡಬೇಕು. ಸರ್ಕಾರಿ ನೌಕರರು ಹಾಗೂ ಆರ್ಥಿಕವಾಗಿ ಸ್ಥಿತಿವಂತರಾಗಿರುವವರು ಸಮುದಾಯದ ಬಡ ವಿದ್ಯಾರ್ಥಿಗಳಿಗೆ ನೆರವಾಗಬೇಕು. ಇದೇ ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದರು.ಕನಿಷ್ಠ ಒಂದು ತಾಸಾದರು ಓದಿ :
ಸಹಾಯಕ ಪೋಲೀಸ್ ಆಯುಕ್ತ ಎಚ್.ಕೆ. ಮಹಾನಂದ್ ಮಾತನಾಡಿ, ಕೈಲಾಸಕ್ಕಿಂತ ಕಾಯಕ, ಅಧಿಕಾರಕ್ಕಿಂತ ಆಚಾರ, ಸನ್ಮಾನಕ್ಕಿಂತ ಸಂಸ್ಕಾರ ದೊಡ್ಡದು. ಕಲೆ ಮತ್ತು ಶಿಕ್ಷಣ ಯಾರ ಸ್ವತ್ತೂ ಅಲ್ಲ. ಅಂಬೇಡ್ಕರ್ ಅವರು ತಮ್ಮ ಜೀವನದ ಗುರುಗಳಾಗಿ ಬುದ್ದ, ಸಂತ ಕಬೀರ, ಜ್ಯೋತಿಬಾ ಫುಲೆ ಅವರನ್ನು ಸ್ವೀಕರಿಸಿದ್ದರು. ಒಬ್ಬ ಮನುಷ್ಯ ಮನುಷ್ಯನಾಗಿ ಬದುಕಲು ಕಷ್ಟವಿರುವ ಸಂದರ್ಭದಲ್ಲಿ ಈ ಮೂವರೂ ಮಹಾತ್ಮರಾದರು ಅಂಬೇಡ್ಕರ್ ಅವರು ನಮ್ಮ ಎದೆಯಲ್ಲಿರಬೇಕು. ಅಂಬೇಡ್ಕರ್ ಅವರು ವಿದ್ಯೆ, ಸ್ವಾಭಿಮಾನ ಹಾಗೂ ವಿನಯವನ್ನು ಅವರು ದೇವರೆಂದು ಭಾವಿಸಿದ್ದರು ವಿದ್ಯಾರ್ಥಿಗಳು ಕನಿಷ್ಠ ಒಂದು ತಾಸಾದರೂ ಓದಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮುದಾಯದ ಸುಮಾರು 300 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಬ್ಯಾಡರಹಳ್ಳಿ ಶಿವಕುಮಾರ್, ಶಿವರಾಜ್ ಮತ್ತು ಸರ್ವೋತ್ತಮ ಅವರ ತಂಡದಿಂದ ಗಾಯನ ನಡೆಯಿತು
ದಲಿತ ಸಂಘಟನೆ ಒಕ್ಕೂಟ ಜಿಲ್ಲಾಧ್ಯಕ್ಷ ಶಿವಕುಮಾರಸ್ವಾಮಿ, ಸಮತಾ ಸೈನಿಕ ದಳ ಯುವ ಘಟಕ ರಾಜ್ಯಾಧ್ಯಕ್ಷ ಗೋವಿಂದಯ್ಯ ಎಸ್ಸಿ- ಎಸ್ಟಿ ನೌಕರರ ಸಂಘದ ಜೈ ಪ್ರಕಾಶ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವಿಭೂತಿಕೆರೆ ಶಿವಲಿಂಗಯ್ಯ, ಕರವೇ ಜಿಲ್ಲಾಧ್ಯಕ್ಷ ಎಂ.ಎನ್.ಆರ್. ರಾಜು, ವಿದ್ಯುತ್ ಗುತ್ತಿಗೆದಾರ ಸಂಘದ ಅಧ್ಯಕ್ಷ ವೆಂಕಟೇಶ್, ದಲಿತ ಮುಖಂಡರಾದ ಶಿವಶಂಕರ್, ಪತ್ರಕರ್ತ ಚಲುವರಾಜು, ಗುಡ್ಡೆ ವೆಂಕಟೇಶ್, ಕಿರಣ್‌ರಾಜ್, ಸುರೇಶ್, ಗವಿಯಪ್ಪ, ಡಾ. ಬಿ.ಆರ್. ಅಂಬೇಡ್ಕರ್ ಶೈಕ್ಷಣಿಕ ಮತ್ತು ಆರ್ಥಿಕ ಸಬಲೀಕರಣ ಕೇಂದ್ರದ ಅಧ್ಯಕ್ಷ ರಾಜಶೇಖರ್, ಆಯೋಜಕರಾದ ಪ್ರಜ್ಞಾ ಸಿದ್ದರಾಮು, ಡಾ. ಲೋಕೇಶ್‌ಮೌರ್ಯ, ಸಿ. ಲೋಕೇಶ್, ಎನ್.ಎಸ್. ವಿನೋದ್ ರಾಜ್, ಪರಮೇಶ್‌ಗೌತಮ್, ನಂಜು ವಿ. ರಾಜವಂಶಿ, ಭರತ್, ಪ್ರಸಾದ್, ಪ್ರಕಾಶ್ ಮೌರ್ಯ ಮತ್ತಿತರರು ಉಪಸ್ಥಿತರಿದ್ದರು.-----------------------------------
2ಕೆಆರ್ ಎಂಎನ್ 10.ಜೆಪಿಜಿರಾಮನಗರದ ವಿಜಯನಗರ ಬಳಿಯ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಶೈಕ್ಷಣಿಕ ಮತ್ತು ಆರ್ಥಿಕ ಸಬಲೀಕರಣ ಕೇಂದ್ರದ ವತಿಯಿಂದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
----------------------------------