ಸಾರಾಂಶ
ಎನ್.ನಾಗೇಂದ್ರಸ್ವಾಮಿ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಅಟೆಂಡರ್ಗಳನ್ನು ನಿಯಮ ಉಲ್ಲಂಘಿಸಿ ಹಣ ಪಡೆದು ನೇಮಿಸಿಕೊಳ್ಳಲಾದ ಆರೋಪದ ಬೆನ್ನಲ್ಲೆ ಇಲಾಖೆ ಅವರನ್ನು ಶಾಲಾ ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದೆ.ಅಬ್ದುಲ್ ಕಲಾಂ ಸಂಸ್ಥೆಯ ಮೂಲಕ ಶಿಕ್ಷಣ ಇಲಾಖೆ ಸಹಕಾರದೊಡನೆ ಸದ್ಯ ಕೊಳ್ಳೇಗಾಲ, ಯಳಂದೂರು, ಹನೂರು ಸೇರಿದಂತೆ ಹಲವು ಕಡೆ ಗಣಕಯಂತ್ರ , ಯೋಗ ಶಿಕ್ಷಕರು ಮತ್ತು ಅಟೆಂಡರ್ ನೇಮಕ ಮಾಡಿಕೊಂಡಿದ್ದು ನೇಮಕಾತಿ ವಿಚಾರದಲ್ಲಿ ಅಕ್ರಮ ಎಸಗಲಾಗಿತ್ತು. ಶಿಕ್ಷಣ ಇಲಾಖೆಯ ಈ ನಿರ್ದೇಶನ ಅಬ್ದುಲ್ ಕಲಾಂ ಸಂಸ್ಥೆಯ ಸಿಬ್ಬಂದಿ ಮಾತ್ರವಲ್ಲ ಅಕ್ರಮಕ್ಕೆ ಸಾಥ್ ನೀಡಿದ ಕೆಲ ಇಲಾಖೆಯ ಸಿಬ್ಬಂದಿಗೂ ಗಡಾಂತರ ತಂದಿದೆ ಎಂದು ಹೇಳಲಾಗುತ್ತಿದೆ. ಕಲಾಂ ಸಂಸ್ಥೆ ಸರ್ಕಾರ ನಮಗೆ ಗಣಕಯಂತ್ರ, ಯೋಗ ಶಿಕ್ಷಕರ ನೇಮಕಾತಿಗೆ ಅನುಮತಿ ನೀಡಿದೆ ಎಂದು ಡಿಡಿಪಿಐಗೆ ಮನವಿ ಸಲ್ಲಿಸಿದ ಬೆನ್ನಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆಯೇ ಖುದ್ದು ಆದೇಶ ಹೊರಡಿಸಿದೆ. ಆದೇಶದ ಬೆನ್ನಲ್ಲೆ ಶಾಲೆಗೆ ಆಗಮಿಸಿದ ಗಣಕಯಂತ್ರ, ಯೋಗ ಶಿಕ್ಷಕರು ಹಾಗೂ ಅಟೆಂಡರ್‌ಗಳನ್ನು ಆಯಾ ಮುಖ್ಯ ಶಿಕ್ಷಕರು ಶಾಲೆಗೆ ಸೇರಿಸಿಕೊಂಡಿದ್ದಾರೆ. ಕರ್ತವ್ಯಕ್ಕೆ ಕಲಾಂ ಸಂಸ್ಥೆ ಮೂಲಕ ನೇಮಕಗೊಂಡವರನ್ನು ಕೆಲ ಶಾಲೆಯಲ್ಲಿ ಗುಮಾಸ್ತರಾಗಿ, ಕೆಲ ಶಾಲೆಗಳಲ್ಲಿ ಗಂಟೆ ಬಾರಿಸುವ ಕೆಲಸಕ್ಕೆ ಜವಾಬ್ದಾರಿ ನೀಡಿದ್ದರೆ, ಕೆಲ ಶಾಲೆಗಳಲ್ಲಿ ಯೋಗ ಹೇಳಿಕೊಡುವಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ ಇಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ಹಿನ್ನೆಲೆ ಸದ್ಯ ಅಟೆಂಡರ್ ಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಡಿಡಿಪಿಐ ಮೌಖಿಕ ನಿರ್ದೇಶನ ನೀಡುತ್ತಿದ್ದಂತೆ ಹನೂರು ಬಿಇಒ ಗುರುಲಿಂಗಯ್ಯ ಅವರು ಆದೇಶ ಹೊರಡಿಸಿದ್ದಾರೆ. ಸದ್ಯ ಗುರುಲಿಂಗಯ್ಯ ಅವರ ಆದೇಶದಿಂದಾಗಿ ಇಡೀ ಶಿಕ್ಷಣ ಇಲಾಖೆಗೆ ಗಂಡಾಂತರ ತಂದೊಡ್ಡಿದೆ. ಮೊದಲಿಗೆ ಅಟೆಂಡರ್, ಗುಮಾಸ್ತರ ನೇಮಕಕ್ಕೆ ಅವಕಾಶವಿಲ್ಲ, ಇದು ನಿಯಮ ಉಲ್ಲಂಘನೆ ಹಿನ್ನೆಲೆ ಕರ್ತವ್ಯದಿಂದ ಬಿಡುಗಡೆಗೆ ಸೂಚಿಸಲಾಗಿದೆ. ಸದ್ಯ ಅಟೆಂಡರ್‌ಗಳಿಂದ 50ಸಾವಿರದಿಂದ ಒಂದೂವರೆ ಲಕ್ಷದ ತನಕ ವಸೂಲಿ ಮಾಡಿದ ಬಳಿಕ ನೇಮಿಸಿಕೊಳ್ಳಲಾಗಿದ್ದು ಇದರಲ್ಲಿ ಕಲಾಂ ಸಂಸ್ಥೆ ಮತ್ತು ಇಲಾಖೆಯಲ್ಲಿನ ಹಲವರ ಪಾತ್ರವಿದೆ ಎನ್ನಲಾಗುತ್ತಿದೆ. ಹಾಗಾಗಿ ಈಗ ಸದ್ಯ ಅಟೆಂಡರ್ ಬಿಡುಗಡೆಗೊಳಿಸುವ ವಿಚಾರವೂ ಸದ್ದು ಮಾಡುತ್ತಿದ್ದು ಹಣ ನೀಡಿ ನೇಮಕಗೊಂಡವರ ಪರಿಪಾಟಲು ಹೇಳತೀರದಾಗಿದೆ.
ಕಲಾಂ ಸಂಸ್ಥೆ ಬಗ್ಗೆ ಗೊಂದಲ:ನಿಜಕ್ಕೂ ಅಬ್ದುಲ್ ಕಲಾಂ ಸಂಸ್ಥೆ ಅಸಲಿಯೇ, ನೇಮಕಾತಿಗೆ ಸರ್ಕಾರ ಅನುಮತಿ ನೀಡಿದೆಯೇ, ನೇಮಕಾತಿ ಆದೇಶ ಎಷ್ಟು ತಿಂಗಳು ಎಂಬುದು ಗೌಣ ಎನ್ನಲಾಗುತ್ತಿದೆ. ಸದ್ಯ ನೇಮಕಗೊಂಡವರನ್ನು ನಿಮಗೆ 5 ವರ್ಷಗಳ ಕಾಲ ಕಲಾಂ ಸಂಸ್ಥೆ ಸಂಬಳ ನೀಡಲಿದೆ. ಬಳಿಕ ನಿಮ್ಮ ಹುದ್ದೆ ಕಾಯಂ ಆದರೂ ಅಚ್ಚರಿ ಇಲ್ಲ ಎಂದು ನಂಬಿಸಿ ಲಕ್ಷಾಂತರ ಹಣ ಪಡೆಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಖುದ್ದು ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಈ ಸಂಬಂಧ ಮೊದಲಿಗೆ ಕಲಾಂ ಸಂಸ್ಥೆ ದ್ಯೇಯೊದ್ದೆಶಗಳು ಹಾಗೂ ನೇಮಕಾತಿ ವಿಚಾರದಲ್ಲಿ ಅನ್ಯಾಯ, ಗೊಂದಲ, ಅಕ್ರಮಗಳ ಕುರಿತು ಗಮನಹರಿಸದ ಪಕ್ಷದಲ್ಲಿ ಈ ಸಂಸ್ಥೆ ಹೆಸರಲ್ಲಿ ಇನ್ನಷ್ಟು ಮುಗ್ದರು ಮೋಸ ಹೋಗುವ ಸಾಧ್ಯತೆ ಹೆಚ್ಚಿದೆ. ಇನ್ನಾದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸರ್ಕಾರ, ಉಸ್ತುವಾರಿ ಸಚಿವರು ಗಮನಹರಿಸುವ ಮೂಲಕ ಗಡಿಜಿಲ್ಲೆಯೆ ಉದ್ಯೋಗಾಕಾಂಕ್ಷಿ ಫಲಾನುಭವಿಗಳು ವಂಚನೆಗೊಳಗಾಗದಂತೆ ಕ್ರಮವಹಿಸಬೇಕಿದೆ.ಡಿಡಿಪಿಐ ಆದೇಶದಲ್ಲೆನಿದೆ?ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹೊರಡಿಸಿರುವ ಆದೇಶದಲ್ಲಿ ಈ ನೇಮಕಾತಿ 2024-25ನೇ ಸಾಲಿಗೆ ಮಾತ್ರ ಸೀಮತವಾಗಿದ್ದು ನೇಮಕಗೊಂಡವರು ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಶಾಲಾ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು, ಯೋಗ ಮತ್ತು ಗಣಕ ಯಂತ್ರ ತರಬೇತಿಗೆ ಮಾತ್ರ ಅವಕಾಶ ನೀಡಿ ಆದೇಶ ಹೊರಡಿಸಲಾಗಿದೆ. ಆದೇಶ ಹೊರಡಿಸುವ ವೇಳೆ ಡಿಡಿಪಿಐ ಕಲಾಂ ಸಂಸ್ಥೆಯ ಮನವಿ ಮೇರೆಗೆ ಪ್ರಕಟಣೆ ಆದೇಶ ಹೊರಡಿಸಿದೆ. ಡಿಡಿಪಿಐ ಆದೇಶವೇ ಈಗ ಶಿಕ್ಷಣ ಇಲಾಖೆಯ ಕೆಲವರು ಹಾಗೂ ಕಲಾಂ ಸಂಸ್ಥೆಯ ಹೆಸರು ಬಳಕೆ ಮಾಡಿಕೊಂಡು ಹಣ ವಸೂಲಿಗೆ ಕಾರಣವಾಗಿದೆ ಎನ್ನಲಾಗಿದೆ. ಆದರೆ ಮುಂದೆ ಯೋಗ ಮತ್ತು ಗಣಕಯಂತ್ರಕ್ಕ ನೇಮಕಗೊಂಡವರ ಸ್ಥಿತಿ ಏನು? ಇವರನ್ನು ಹಣ ಪಡೆದು ನೇಮಿಸಿಕೊಳ್ಳಲಾಗಿದೆಯೆ? ಈ ನೇಮಕದ ಪ್ರಮುಖ ಉದ್ದೇಶ ಮಕ್ಕಳಿಗೆ ಅನುಕೂಲಕಲ್ಪಿಸಲು ಆದರೆ, ಕಲಾಂ ಸಂಸ್ಥೆ ಮತ್ತು ಶಿಕ್ಷಣ ಇಲಾಖೆಯ ಕೆಲವರ ಸಾಥ್‌ನಿಂದಾಗಿ ಈಗ ಹಣ ನೀಡಿ ನೇಮಕಗೊಂಡ ಅಟೆಂಡರ್‌ಗಳು ಹೊರಬರಬೇಕಿದೆ. ಮುಂದೆ ಇನ್ನಿತರರು ಹೊರಬಂದು ಮೋಸ ಹೋದರೂ ಅಚ್ಚರಿ ಇಲ್ಲ ಎನ್ನಲಾಗಿದೆ.
ಶಾಸಕ ಮಂಜುನಾಥ್ ಗರಂ! ಹನೂರು ಶಾಸಕ ಎಂ.ಆರ್.ಮಂಜುನಾಥ್ ಅವರಿಗೆ ಈ ಅಕ್ರಮ ನೇಮಕಾತಿ ವಿಚಾರ ತಿಳಿಯುತ್ತಿದ್ದಂತೆ ಸಂಬಂಧಪಟ್ಟ ಶಿಕ್ಷಣ ಇಲಾಖೆ ವಿರುದ್ಧ ಗರಂ ಆದರು ಎನ್ನಲಾಗಿದೆ. ಕೇವಲ ಸಂಸ್ಥೆಯೊಂದರ ಹೆಸರಲ್ಲಿ ನೀಡಿದ ಮನವಿ ಹಿನ್ನೆಲೆ ಸಾಕಷ್ಟು ಅದ್ವಾನಕ್ಕೆ ಕಾರಣವಾಗಿದ್ದು ಫಲಾನುಭವಿಗಳಿಗೆ ಕೆಲಸದ ಆಸೆ ತೋರಿ ಹಣ ಪಡೆಯುತ್ತಿರುವ ವಿಚಾರದಲ್ಲಿ ಶಾಸಕರು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಗರಂ ಆದರು. ಈಗ ಇಲಾಖೆ ಅಟೆಂಡರ್ ಬಿಡುಗಡೆಗೊಳಿಸುವ ಕ್ರಮ ಕೈಗೊಂಡಿದೆ.ನಾವ್ಯಾರು ಚಾ.ನಗರ ಜಿಲ್ಲೆಗೆ ಬಂದಿಲ್ಲ: ಬೇಗಂ ಅಬ್ದುಲ್ ಕಲಾಂ ಸಂಸ್ಥೆಯ ವತಿಯಿಂದ ಕಂಪ್ಯೂಟರ್ ಶಿಕ್ಷಕರ ತರಬೇತಿ, ಅತಿಥಿ ಯೋಗ ಶಿಕ್ಷಕರ ನೇಮಕದ ಕುರಿತು ರಾಜ್ಯಾದ್ಯಂತ ಅನುಮತಿಗಾಗಿ ವಿಧಾನಸೌಧದಲ್ಲಿರುವ ಕಚೇರಿಗೆ ಸರ್ಕಾರ ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದೇವೆ. ಇನ್ನು, ನಮಗೆ ನೇಮಕಾತಿ ಆದೇಶ ಸಿಕ್ಕಿಲ್ಲ, ನಾವು ಮತ್ತು ನಮ್ಮ ಸಂಸ್ಥೆಯ ಸಿಬ್ಬಂದಿ ಚಾಮರಾಜನಗರ ಜಿಲ್ಲೆಗೆ ಬಂದಿಲ್ಲ, ಯಾರನ್ನು ನೇಮಕಾತಿ ಮಾಡಿಕೊಳ್ಳಲು ಯತ್ನಿಸಿಲ್ಲ ಎಂದು ಅಬ್ದುಲ್ ಕಲಾಂ ಸಂಸ್ಥೆಯ ಕೊಪ್ಪಳ ಮೂಲ ಶಾಖೆಯ ಸಂಯೋಜಕ ನಿರ್ದೇಶಕಿ ಬೇಗಂ ಮತ್ತು ಮಹಾಂತೇಶ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಯಾರಾದರೂ ಅಬ್ದುಲ್ ಕಲಾಂ ಸಂಸ್ಥೆ ಹೆಸರಲ್ಲಿ ಗಣಕಯಂತ್ರ, ಯೋಗ ಶಿಕ್ಷಕರ ನೇಮಕಾತಿಗೆ ಹಣ ವಸೂಲಿಗೆ ಬಂದರೆ ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬಾರದು, ಈ ಕುರಿತು ನಮಗೂ ದೂರು ಬಂದಿವೆ. ಕೆಲವರಿಗೆ ಎಚ್ಚರಿಕೆ ನೀಡಿದ್ದೇವೆ, ನಮ್ಮ ಸಂಸ್ಥೆ ಹೆಸರೇಳಿ ಹಣ ಪಡೆದರೆ, ಅಥವಾ ಅನ್ಯಾಯಕ್ಕೊಳಗಾದ ಫಲಾನುಭವಿಗಳು ದಾಖಲೆ ಸಮೇತ ಪೊಲೀಸ್ ಠಾಣೆಗೆ ದೂರು ನೀಡಲಿ. ಯಾರೋ ಹಲವರು ಸಂಸ್ಥೆ ಹೆಸರೇಳಿ ಹಣ ಪಡೆಯುತ್ತಿರುವ ಕುರಿತು ನಮಗೂ ಮಾಹಿತಿಗಳಿವೆ, ಆದರೆ ಹಣ ನೀಡಿದವರು ನಮ್ಮ ಗಮನಕ್ಕೆ ವಿಚಾರ ತಂದಿಲ್ಲ, ಹಾಗಾಗಿ ನೊಂದವರಿದ್ದರೆ ಪೊಲೀಸ್ ಠಾಣೆಗೆ ದೂರು ನೀಡಬಹುದು ಎಂದರು.ಅನುಮತಿ ಪಡೆದ ಶ್ರೀಕಂಠ ಏನೆನ್ನುತ್ತಾರೆ?
ಮಹಾಂತೇಶ್ ಮತ್ತು ಬೇಗಂ ಅವರು ನಮ್ಮ ಅಬ್ದುಲ್ ಸಂಸ್ಥೆಯವರೇ, ಶಿಕ್ಷಣ ವಿಚಾರಕ್ಕೆ ಸಂಬಂಧಿಸಿದಂತೆ ಕಲಾಂ ಸಂಸ್ಥೆಯ ಸತೀಶ್ ಎಂಬುದು ಕೊಪ್ಪಳದಲ್ಲಿದ್ದುಕೊಂಡು ಎಲ್ಲ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ, ಬಿಇಒ ಅವರು ಅಟೆಂಡರ್ ನೇಮಕಾತಿ ವಿಚಾರದಲ್ಲಿ ಆದೇಶ ರದ್ದುಪಡಿಸಿರುವ ವಿಚಾರ ತಿಳಿದಿದೆ. ಅದ್ಯಾಕೆ ಅಟೆಂಡರ್ ನೇಮಿಸಿಕೊಳ್ಳಲಾಯಿತು. ನಮಗೆ ತಿಳಿದಿಲ್ಲ, ಗಣಕಯಂತ್ರ ಮತ್ತು ಯೋಗ ಶಿಕ್ಷಕರ ತರಬೇತಿಗೆ ನಾವು ಡಿಡಿಪಿಐ ಗಮನಕ್ಕೆ ತಂದು ನೇಮಿಸಿಕೊಂಡಿದ್ದೆವೆ, ಹಣಕಾಸು ವಿಚಾರದಲ್ಲಿ ದೂರವಾಣಿಯಲ್ಲಿ ಚರ್ಚಿಸಲ್ಲ, ನೇರ ಬಂದರೆ ಕುಳಿತು ಮಾತನಾಡೋಣ ಎಂದು ಅಬ್ದುಲ್ ಕಲಾಂ ಸಂಸ್ಥೆಯ ಸಂಯೋಜಕ ಶ್ರೀಕಂಠ ಹೇಳಿದ್ದಾರೆ. ನಮ್ಮ ಕಚೇರಿ ಕೊಳ್ಳೇಗಾಲದಲ್ಲೂ ಇದೆ. ನೇಮಕಾತಿಗೊಂಡ ಅತಿಥಿ ಶಿಕ್ಷಕರಿಗೆ 3ತಿಂಗಳು ಸಂಸ್ಥೆಯ ಎಲ್ಲರು ಸೇರಿ ಸಂಬಳ ಪಾವತಿಸುತ್ತೇವೆ, ನಂತರ ಸಂಸ್ಥೆಯ ಮೂಲಕ ಹಣ ಮಾಸಿಕ ದೊರಕಲಿದೆ. ಜನವರಿ ನಂತರ ಪುನಃ ನೇಮಕಾತಿ ಪ್ರಕ್ರಿಯೆ ಜರುಗಲಿದೆ, ಸಂಸ್ಥೆಯಿಂದ ನೇಮಕಗೊಂಡವರು 5ವರ್ಷಗಳ ಕಾಲ ಆಯಾ ಶಾಲೆಯಲ್ಲೆ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.ಅಬ್ದುಲ್ ಕಲಾಂ ಸಂಸ್ಥೆ ಹಣಕಾಸಿನ ವ್ಯವಹಾರ ನಡೆಸಿ ಉದ್ಯೋಗಾಕಾಂಕ್ಷಿಗಳಿಗೆ ವಂಚಿಸಿದ್ದರೆ, ಅಂತವರಿಂದ ಯಾರಾದರೂ ವಂಚನೆಗೊಳಗಾಗಿದ್ದರೆ ದೂರು ನೀಡಬಹುದು, ಖುದ್ದು ದೂರು ನೀಡಿದರೆ ಪರಿಶೀಲಿಸಿ ಸಂಬಂಧಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈ ವಿಚಾರವನ್ನು ಉಸ್ತುವಾರಿ ಸಚಿವರು ನನ್ನ ಗಮನಕ್ಕೆ ತಂದಿದ್ದಾರೆ.- ಡಾ.ಬಿ.ಟಿ. ಕವಿತಾ, ಎಸ್ಪಿ
ಚಾಮರಾಜನಗರ ಜಿಲ್ಲೆಯಲ್ಲಿ ಸಂಸ್ಥೆಗಳ ಹೆಸರಲ್ಲಿ ಯಾರಿಗೂ ಮೋಸ ಆಗಬಾರದು, ಡಿಡಿಪಿಐ ಏಕೆ? ಅಬ್ದುಲ್ ಕಲಾಂ ಸಂಸ್ಥೆಗೆ ಪರಿಶೀಲಿಸದೆ ಆದೇಶ ನೀಡಿದರು. ಇದರ ಉದ್ದೇಶವೇನು? ಇದರಲ್ಲಿ ಅನ್ಯಾಯವಾಗಿದೆಯೇ ಎಂಬುದನ್ನು ಪರಿಶೀಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವೆ.- ವೆಂಕಟೇಶ್, ಜಿಲ್ಲಾ ಉಸ್ತುವಾರಿ ಸಚಿವ