ಸಾರಾಂಶ
ರಾಂ ಅಜೆಕಾರು
ಕನ್ನಡಪ್ರಭ ವಾರ್ತೆ ಕಾರ್ಕಳಕಾರ್ಕಳ-ಹೆಬ್ರಿ ರಾಜ್ಯ ಹೆದ್ದಾರಿ 1ರಲ್ಲಿ ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಸಮೀಪ ವಿದ್ಯುತ್ ಕಂಬದ ಸ್ಟೇ ವಯರ್ ಹೆದ್ದಾರಿಯಿಂದ ಕೇವಲ ಒಂದು ಅಡಿ ಅಂತರದಲ್ಲೇ ಇದ್ದು, ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಅನತಿ ದೂರದಲ್ಲೇ ಟ್ರಾನ್ಸ್‌ಫಾರ್ಮರ್ ಕಂಬ ಕೂಡ ರಸ್ತೆಗೆ ಸಮೀಪದಲ್ಲೇ ಇದ್ದು, ರಾತ್ರಿ ವೇಳೆ ವಾಹನ ಸಂಚರಿಸುವಾಗ ಚಾಲಕರಿಗೆ ಗೋಚರಿಸದೆ ಅಪಾಯ ಸಂಭವಿಸುವ ಸಾಧ್ಯತೆಗಳಿವೆ.ಕಳೆದ ವಾರದಿಂದೀಚೆಗೆ ಈ ರಸ್ತೆಯಲ್ಲಿ ಮೂರಕ್ಕೂ ಹೆಚ್ಚು ದ್ವಿಚಕ್ರ ವಾಹನ ಅಪಘಾತತಕ್ಕೀಡಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದ್ದರಿಂದ ಅಪಾಯ ಸಂಭವಿಸುವ ಮೊದಲೇ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸುವುದು ಒಳಿತು.* ರಸ್ತೆ ಅಗಲೀಕರಣ:
ಕಳೆದ ವರ್ಷ ರಾಜ್ಯ ಹೆದ್ದಾರಿ 1ರ ಎಣ್ಣೆಹೊಳೆ ಸೇತುವೆಯಿಂದ ನೆಲ್ಲಿಕಟ್ಟೆ ಚಿಕ್ಕಲ್ಬೆಟ್ಟು ವರೆಗೆ ರಸ್ತೆ ಅಗಲೀಕರಣಗೊಳಿಸಿ ಡಾಂಬರೀಕರಣ ಮಾಡಲಾಗಿತ್ತು. ಆದರೆ ರಸ್ತೆ ಅಗಲೀಕರಣ ಸಂದರ್ಭ ಈ ಟ್ರಾನ್ಸ್‌ಫಾರ್ಮರ್ ಹಾಗೂ ವಿದ್ಯುತ್ ಕಂಬದ ಸ್ಟೇ ವಯರನ್ನು ಇಲಾಖೆ ತೆರವುಗೊಳಿಸಿಲ್ಲ.* ಹಣ ಮೀಸಲಿಟ್ಟಿಲ್ಲ:
ರಾಜ್ಯ ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ಪಿಡಬ್ಲ್ಯುಡಿ ಇಲಾಖೆ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಮೆಸ್ಕಾಂಗೆ ಸೂಕ್ತವಾದ ನಿಗದಿತ ಮೊತ್ತ ಕಟ್ಟಬೇಕಿತ್ತು. ಆದರೆ ಪಿಡಬ್ಲ್ಯುಡಿ ಇಲಾಖೆ ಮೆಸ್ಕಾಂಗೆ ಯಾವುದೇ ಮೊತ್ತ ಸಲ್ಲಿಕೆ ಮಾಡಿಲ್ಲ. ಇದರಿಂದಾಗಿ ಹಣ ಮೀಸಲಿಡದೆ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕಂಬಗಳು ಹಾಗೂ ಸ್ಟೇ ವಯರ್ ಕಂಬವು ತೆರವಾಗಿಲ್ಲ.* ಸ್ಥಳೀಯರ ಆಕ್ರೋಶ:ಈಗಾಗಲೇ ಈ ರಸ್ತೆಯಲ್ಲಿ ಹಲವು ಅಪಘಾತಗಳು ವರದಿಯಾಗಿವೆ. ಕಳೆದ ಮೂರು ದಿನಗಳಲ್ಲಿ ಒಟ್ಟು ಮೂರು ಬೈಕ್‌ಗಳು ಅಪಘಾತಕ್ಕೀಡಾಗಿವೆ. ವೇಗವಾಗಿ ಬರುವ ಬೃಹತ್ ವಾಹನಗಳು, ಕಾರುಗಳು ವಿದ್ಯುತ್ ಕಂಬದ ಸ್ಟೇ ವಯರ್‌ಗೆ ಸಿಲುಕಿ, ಜೊತೆಗೆ ಅದರ ಇನ್ನೊಂದು ಪಾಶ್ವದಲ್ಲಿರುವ ಟ್ರಾನ್ಸ್‌ಫಾರ್ಮರ್ ಕಂಬಕ್ಕೆ ಗುದ್ದಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಪ್ರಾಣ ಹಾನಿಯೂ ಸಂಭವಿಸಬಹುದು. ಆದ್ದರಿಂದ ಈ ಬಗ್ಗೆ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.----ರಸ್ತೆ ಅಗಲೀಕರಣ ಸಂದರ್ಭ ವಿದ್ಯುತ್ ಕಂಬಗಳ ತೆರವು ಕಾರ್ಯ ಮಾಡಬೇಕಿತ್ತು. ಆದರೆ ಸ್ಟೇ ವಯರ್ ಹಾಗೂ ಟ್ರಾನ್ಸ್ ಫಾರ್ಮರ್ ರಸ್ತೆಗೆ ಪಕ್ಕದಲ್ಲೇ ಇರುವುದು ಮಾಹಿತಿ ಬಂದಿದೆ. ಅದಕ್ಕೆ ಬೇಕಾದ ರೂಪುರೇಷೆಗಳನ್ನು ಸಿದ್ಧಪಡಿಸಿ ತೆರವುಗೊಳಿಸಲಾಗುವುದು. ರಸ್ತೆ ಅಗಲೀಕರಣ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಯಾವುದೇ ಹಣವನ್ನು ಮೀಸಲಿಟ್ಟಿಲ್ಲ.। ಶಿಲ್ಪಾ, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕಾರ್ಕಳ
-------------ಸ್ಟೆವಯರ್ ಹಾಗೂ ಟ್ರಾನ್ಸ್ ಫಾರ್ಮರ್ ಕಂಬಗಳಿಂದ ಕಳೆದ ಒಂದು ತಿಂಗಳಲ್ಲಿ 10ಕ್ಕೂ ಹೆಚ್ಚು ಅಪಘಾತಗಳು ನಡೆದಿವೆ. ತಿರುವು ರಸ್ತೆಯಾದ್ದರಿಂದ ವಾಹನಗಳಿಗೆ ಸ್ಟೇ ವಯರ್ ಕಾಣಿಸುವುದಿಲ್ಲ. ಮಳೆ ಸಂದರ್ಭದಲ್ಲಿ ಕಾರು ಹಾಗೂ ದ್ವಿಚಕ್ರಗಳಿಗೆ ಸ್ಟೆ ವಯರ್ ಕಾಣಿಸುವುದಿಲ್ಲ.। ಕೃಷ್ಣನಾಯಕ್, ಹಿರ್ಗಾನ
-----------ಈಗಾಗಲೇ ರಸ್ತೆ ಬದಿಯ ವಿದ್ಯುತ್ ಕಂಬವನ್ನು ತೆರವುಗೊಳಿಸಲು ಇಲಾಖೆಗೆ ಮನವಿ ಸಲ್ಲಿಸಲಾಗುವುದು.
। ಸಂತೋಷ್ ಶೆಟ್ಟಿ ಹಿರ್ಗಾನ ಸಾಮಾಜಿಕ ಕಾರ್ಯಕರ್ತರು