ಸಾರಾಂಶ
ದಾಬಸ್‌ಪೇಟೆ: ಕಳುವಾಗಿದ್ದ ಮೂರು ದಿನದ ಹೆಣ್ಣು ಮಗು ಪೊಲೀಸರ ಕಾರ್ಯಕ್ಷಮತೆಯಿಂದಾಗಿ ಸಿನಿಮೀಯ ರೀತಿಯಲ್ಲಿ ಪೋಷಕರ ಮಡಿಲು ಸೇರಿದೆ.
ಬೇಗೂರು ಸಮೀಪದ ಮೋರಿ ಮೇಲೆ ಹೆಣ್ಣು ಮಗು ಪತ್ತೆಯಾಗಿದ್ದು ಸ್ಥಳೀಯರ ಮಾಹಿತಿ ಮೇರೆಗೆ ನೆಲಮಂಗಲ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ರಾಜೀವ್ ಮತ್ತು ಅವರ ತಂಡ ಮಗುವನ್ನು ರಕ್ಷಿಸಿ ಮಹಿಳಾ ಮತ್ತು ಮಕ್ಕಳ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಿದ್ದಾರೆ.ಮಗುವಿನ ಬಳಿಯಲ್ಲಿದ್ದ ತಾಯಿ ಕಾರ್ಡ್‌ನಿಂದಾಗಿ ಮಗುವಿನ ತಾಯಿ ಸುಪ್ರಿಯಾ ಮಾಹಿತಿ ಲಭ್ಯವಾಗಿದ್ದು ಪೊಲೀಸರು ಮಹಿಳೆಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಮಗುವನ್ನು ಒಪ್ಪಿಸಿದ್ದಾರೆ. ನಂತರ ಕಾನೂನು ಪ್ರಕ್ರಿಯೆಗಳ ಹಿನ್ನೆಲೆ ಮಗು ಪ್ರಸ್ತುತ ನೆಲಮಂಗಲ ಅರಿಶಿನಕುಂಟೆಯ ದತ್ತು ಸ್ವೀಕಾರ ಕೇಂದ್ರದಲ್ಲಿದ್ದು ಇಲಾಖೆ ವಿಚಾರಣೆಯನ್ನು ಮುಗಿಸಿದ ನಂತರ ಪೋಷಕರಿಗೆ ಮಗು ಹಸ್ತಾಂತರ ಮಾಡಲಾಗುತ್ತದೆ ಎಂದು ಮಕ್ಕಳ ಸಹಾಯ ವಾಣಿ ರಾಮು ಜೋಗಿಹಳ್ಳಿ ತಿಳಿಸಿದ್ದಾರೆ.
ಏನಿದು ಘಟನೆ:ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ನಿವಾಸಿಗಳಾಗಿದ್ದ ಶಶಿಧರ್ ಹಾಗೂ ಸುಪ್ರಿಯಾ ದಂಪತಿ ಪ್ರೀತಿಸಿ ಮದುವೆಯಾಗಿದ್ದರು. ಜಿಗಣಿಯ ಬೆಸ್ತರ ಬೀದಿಯಲ್ಲಿ ವಾಸ್ತವ್ಯ ಹೂಡಿದ್ದರು. ಶಶಿಧರ್ ಖಾಸಗಿ ಕಾರ್ಖಾನೆಗಳಲ್ಲಿ ಉದ್ಯೋಗ ಹುಡುಕಿಕೊಂಡು ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದನು. ಪತ್ನಿ ಸುಪ್ರಿಯಾ ಗರ್ಭವತಿಯಾಗಿ 8 ತಿಂಗಳು ಕಳೆದರೂ ಇಬ್ಬರಿಗೂ ಯಾವುದೇ ರೀತಿಯ ಮಾಹಿತಿ ಇರಲಿಲ್ಲವಂತೆ, ಕಳೆದ ಒಂದು ತಿಂಗಳಹಿಂದೆ ಸುಪ್ರಿಯಾಳಿಗೆ ಹೊಟ್ಟೆನೋವು ಕಾಣಿಸಿಕೊಂಡ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ತೆರಳಿದ್ದ ವೇಳೆ ಈಕೆ ಎಂಟು ತಿಂಗಳ ಗರ್ಭವತಿಯೆಂದು ವೈದ್ಯರು ದೃಢಪಡಿಸಿದ್ದು ಅವರಿಗೆ ಅಚ್ಚರಿಯ ಸಂಗತಿಯಾಗಿತ್ತು.
ನ.28ರಂದು ಸಂಬಂಧಿಕರೊಬ್ಬರು ಮೃತಪಟ್ಟಿರುವ ಕಾರಣಕ್ಕೆ ಪತಿ ಶಶಿಧರ್ ಶಿಕಾರಿಪುರಕ್ಕೆ ತೆರಳಿದ್ದ ವೇಳೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಆಶಾ ಕಾರ್ಯಕರ್ತೆಯ ಸಹಾಯದೊಂದಿಗೆ ಬೆಂಗಳೂರಿನ ವಾಣಿಲಾಸ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಿದ್ದ ಸುಪ್ರಿಯಾಗೆ ಮಗುವಿಗೆ ಹಾಲಿನ ಕೊರತೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಅತ್ತೆ ಮಲ್ಲಮ್ಮ, ಪತಿ ಶಶಿಧರ್ ಅವರೊಂದಿಗೆ ಬಸ್ಸಿನಲ್ಲಿ ಶಿಕಾರಿಪುರಕ್ಕೆ ಪ್ರಯಾಣಿಸುತಿದ್ದ ಮಾರ್ಗ ಮಧ್ಯೆ ಮಗುವಿನ ಅಪಹರಣವಾಗಿತ್ತು. ನೆಲಮಂಗಲದ ಬಳಿ ನೋಡಿದಾಗ ಮಗು ಬಸ್ಸಿನಲ್ಲಿ ನಮ್ಮೊಂದಿಗೆ ಇರಲಿಲ್ಲವೆಂದು ಸುಪ್ರಿಯಾ ಪತಿ ತಿಳಿಸಿದ್ದಾರೆ. ಆದರೆ ಇವರು ಮಗುವಿನ ಹುಟಕಾಟಕ್ಕೆ ಪ್ರಯತ್ನಿಸಲಿಲ್ಲವೆನ್ನಲಾಗಿದೆ.ಅನುಮಾನ:
ಮಗು ಕಳ್ಳತನವಾಗಿರುವ ವಿಷಯ ತಿಳಿದಿದ್ದರೂ ಪೋಷಕರು ಪೊಲೀಸರಿಗೆ ದೂರು ನೀಡುವುದಾಗಲಿ, ಹುಡುಕಾಟ ಮಾಡುವುದಾಗಲಿ ಮಾಡದೇ ಶಿಕಾರಿಪುರಕ್ಕೆ ತೆರಳಿದ್ದರು. ಪೊಲೀಸರು ನಿಮ್ಮ ಮಗು ಸಿಕ್ಕಿದೆ ಎಂದು ಕರೆ ಮಾಡಿದಾಗ, ಮಗುವನ್ನು ಯಾರೋ ಅಪಹರಿಸಲಾಗಿದೆ ಎಂದಷ್ಟೇ ಹೇಳಿದ್ದರು. ಅವರ ಈ ವರ್ತನೆ ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಸಾರ್ವಜನಿಕರು ಪೋಷಕರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಮಗುವಿನೊಂದಿಗೆ ತಾಯಿಯನ್ನು ಕರೆದುಕೊಂಡು ಹೋಗಿದ್ದು ಅಧಿಕಾರಿಗಳು ಮಗುವಿನ ಬಗ್ಗೆ ನಿಗಾವಹಿಸಬೇಕು ಎಂದು ಒತ್ತಾಯಿಸಿದ್ದಾರೆ.ಪೋಟೋ 6: ಟಿ.ಬೇಗೂರು ಬಳಿ ಮೋರಿಯ ಬಳಿ ಸಿಕ್ಕ ಹೆಣ್ಣು ಮಗುವನ್ನು ರಕ್ಷಿಸಿ ಆರೋಗ್ಯ ತಪಾಸಣೆ ಮಾಡಿ ದತ್ತು ಸ್ವೀಕಾರ ಕೇಂದ್ರದಲ್ಲಿ ಬಿಟ್ಟಿರುವ ಅಧಿಕಾರಿಗಳು.