- ಪ್ರೊ.ಎಚ್.ಲಿಂಗಪ್ಪ ಕೃತಿಗಳು ಮಾದಿಗರ ಇತಿಹಾಸ, ಹಿನ್ನೆಲೆಯ ಕನ್ನಡಿ: ಡಾ.ಮೀರಸಾಬಿಹಳ್ಳಿ ಶಿವಣ್ಣ ಅಭಿಮತ - - -
ಕನ್ನಡಪ್ರಭ ವಾರ್ತೆ ದಾವಣಗೆರೆದಲಿತರ ಸೇವೆ, ದಲಿತ ಸಾಹಿತ್ಯಕ್ಕೆ ತಮ್ಮ ಒಟ್ಟು ಬದುಕನ್ನೇ ಅರ್ಪಿಸಿಕೊಂಡ ಪ್ರೊ. ಎಚ್.ಲಿಂಗಪ್ಪನವರ ಮಾತಂಗಿ ಕಥನ ಕೃತಿ ಈಗಿನ ತಲೆಮಾರಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ಒಂದು ಅನನ್ಯ ಸಾಂಸ್ಕೃತಿಕ ಪಠ್ಯವಾಗಿದೆ ಎಂದು ಹಿರಿಯ ಜಾನಪದ ತಜ್ಞ ಡಾ.ಮೀರಸಾಬಿಹಳ್ಳಿ ಶಿವಣ್ಣ ಶ್ಲಾಘಿಸಿದರು.
ನಗರದ ರೋಟರಿ ಬಾಲಭವನದ ಶ್ರೀ ಸಿ.ಕೇಶವಮೂರ್ತಿ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಪ್ರೊ. ಎಚ್.ಲಿಂಗಪ್ಪನವರ ಮಾತಂಗಿ ಕಥನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಇಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಪರಿಚಯಿಸುವ ಒಂದು ಅನನ್ಯ ಸಾಂಸ್ಕೃತಿಕ ಪಠ್ಯವಾಗಿ ಮಾತಂಗಿ ಕಥನ ಮೂಡಿಬಂದಿದೆ ಎಂದರು.ಗ್ರಾಮೀಣ ಮೂಲದವರಿಗೆ ಮಾತಂಗಿ ಸಂಸ್ಕೃತಿ ಬಗ್ಗೆ ಒಂದಿಷ್ಟು ಅರಿವು, ತಿಳಿವಳಿಕೆ ಇರಬಹುದು. ಆದರೆ, ನಗರ, ಪಟ್ಟಣ ವಾಸಿಗಳಾದ ಈಗಿನ ಜನಾಂಗಕ್ಕೆ ನಮ್ಮ ಸಂಸ್ಕೃತಿ, ಪರಂಪರೆಯ ಅರಿವೇ ಇಲ್ಲದಂತಹ ಕಾಲಘಟ್ಟದಲ್ಲಿದ್ದೇವೆ. ಮಾತಂಗಿ ಕಥನದಂತಹ ಸಾಂಸ್ಕೃತಿಕ ಪಠ್ಯಗಳು ಇಂದಿನ ಸಂದರ್ಭದಲ್ಲಿ ಹೆಚ್ಚು ಅಗತ್ಯವಿದೆ. ಇಂಥದ್ದೊಂದು ಕೃತಿಯು ನಮ್ಮ ಸಂಸ್ಕೃತಿಯನ್ನು ಈಗಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಪ್ರೊ. ಎಚ್.ಲಿಂಗಪ್ಪ ರಚಿತ ಮಾತಂಗರ ಕಥನ ಕೃತಿಗೂ ಮತ್ತು ಈಗ ಬಿಡುಗಡೆಯಾದ ಮಾತಂಗಿ ಕಥನ ಕೃತಿಗೂ ಸಾಕಷ್ಟು ವ್ಯತ್ಯಾಸವಿದೆ. ಮಾತಂಗರ ಕಥನವು ಸಮುದಾಯದಲ್ಲಿ ಆಗಿಹೋದ ರವಿದಾಸ ಸೇರಿದಂತೆ ಮಹಾನ್ ಸಾಧಕರನ್ನು ಮತ್ತು ಮಾತಂಗರನ್ನು ಪರಿಚಯಿಸುವ ಕೃತಿಯಾಗಿದೆ. ಆದರೆ, ಮಾತಂಗಿ ಕಥನವು ಮಾದಿಗರ ಮನೆತನದ ಹಾಗೂ ಕುಲದೇವತೆಯಾದ ಮಾತಂಗಿ ಕುರಿತಾದ ಕಥನವಾಗಿದೆ ಎಂದು ಅವರು ಹೇಳಿದರು.
ಬುದ್ಧ, ಬಸವ, ಅಂಬೇಡ್ಕರ್‌ರ ಚಿಂತನೆಗಳನ್ನು ದಲಿತ ದೃಷ್ಟಿಕೋನ ಮತ್ತು ದಲಿತ ಆಯಾಮದ ಮೂಲಕ ವಿವರಿಸುವ ಪ್ರೊ. ಎಚ್.ಲಿಂಗಣ್ಣ ಸಾಹಿತ್ಯ ತನ್ನದೇ ವೈಶಿಷ್ಟ್ಯ ಹೊಂದಿದೆ. ಬುದ್ಧ, ಬಸವ, ಅಂಬೇಡ್ಕರ್ ಬಗ್ಗೆ ಹಲವಾರು ಕೃತಿಗಳು ಬಂದಿವೆ. ಅದರಲ್ಲಿ ದಲಿತ ದೃಷ್ಟಿಕೋನದ ಕೊರತೆ ಇತ್ತು. ಆದರೆ, ಪ್ರೊ.ಲಿಂಗಪ್ಪನವರು ಇಡೀ ವ್ಯಕ್ತಿತ್ವ ಮತ್ತು ಪುರಾಣವನ್ನು ಒಂದು ವಿಶಿಷ್ಟ ಆಯಾಮದಲ್ಲಿ ಕಥಾ ರೂಪದಲ್ಲಿ ಕಟ್ಟಿಕೊಡುವಂತಹ ಅದ್ಭುತ ಕೆಲಸ ಮಾಡಿರುವುದು ಗಮನಾರ್ಹ ಎಂದು ಡಾ.ಮೀರಸಾಬಿಹಳ್ಳಿ ಶಿವಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಲೇಖಕ, ಸಂಸ್ಕೃತಿ ಚಿಂತಕ ಮೈಸೂರಿನ ಡಾ. ಬಿ.ವಿ. ವಸಂತಕುಮಾರ ಮಾತನಾಡಿ, ಗ್ರಾಮ ದೇವತೆಗಳ ಬಗ್ಗೆ ಅಧ್ಯಯನ ನಡೆಸಿದರೆ ಎಲ್ಲ ಗ್ರಾಮಗಳಲ್ಲೂ ಹೆಣ್ಣು ದೇವತೆಗಳೇ ಗ್ರಾಮ ದೇವತೆ ಆಗಿದ್ದಾರೆಯೇ ಹೊರತು, ಗಂಡು ದೇವರಲ್ಲ. ದಲಿತ ಕವಿ ಸಿದ್ದಲಿಂಗಯ್ಯ ಸಹ ತಮ್ಮ ಪಿಎಚ್.ಡಿ ಸಂಶೋಧನೆಯಲ್ಲೇ ಇದನ್ನೇ ಸ್ಪಷ್ಟಪಡಿಸಿದ್ದಾರೆ. ಮಾತೃದೇವತೆಯ ಆರಾಧನೆಯ ಮೂಲಗಳು ಸಿಂಧೂ ಬಯಲಿನ ನಾಗರೀಕತೆಗೆ ಹೋಗಿ ನಿಲ್ಲುತ್ತದೆ. ಮಾತೃದೇವತೆಯ ಪ್ರತೀಕವೇ ಮಾತಂಗಿ ಎಂದರು.ಈಚಿನ ದಿನಗಳಲ್ಲಿ ವೈಜ್ಞಾನಿಕತೆ ಮತ್ತು ವೈಚಾರಿಕತೆಯ ಹೆಸರಿನಲ್ಲಿ ತಮ್ಮದೇ ಆದ ಸಾಂಸ್ಕೃತಿಕ ನೆನಪುಗಳನ್ನು ಮಾಢ್ಯವೆಂದು ಕರೆಯುವ ಹೊಸ ಪ್ರವೃತ್ತಿ ಬೆಳೆದಿದೆ. ಕುಂಕುಮ, ಅರಿಷಿಣ ಅಥವಾ ಪೂಜೆಯೆಂದರೆ ಕೇವಲ ರಾಜಕೀಯ ಲಾಂಛನ ಅಥವಾ ಮೌಢ್ಯವಲ್ಲ, ಅದೊಂದು ಸಾಂಸ್ಕೃತಿಕ ಅಸ್ಮಿತೆ, ತತ್ವಶಾಸ್ತ್ರದ ಗುರುತು, ಕುಂಕುಮದ ಕೆಂಪು ಬಣ್ಣವು ಶಕ್ತಿಯನ್ನು ಸೂಚಿಸಿದರೆ, ಅರಿಷಿಣನವು ಫರ್ಟಿಲಿಟಿ ಅಥವಾ ಫಲವತ್ತತೆಯನ್ನು ಸೂಚಿಸುತ್ತವೆ ಎಂದು ಅವರು ವಿವರಿಸಿದರು.
ಕರ್ನಾಟಕ ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ಆಲೂರು ನಿಂಗರಾಜ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಾಧ್ಯಕ್ಷ ಮುತ್ತಣ್ಣ ವೈ ಬೆಣ್ಣೂರ, ಸಾಹಿತಿ ಡಾ.ದಾಸನೂರು ಕೂಸಣ್ಣ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಡಾ.ವಾಮದೇವಪ್ಪ, ಸಿ.ವಿ.ಪಾಟೀಲ, ಕೃತಿ ಕರ್ತೃ ಪ್ರೊ.ಎಚ್.ಲಿಂಗಪ್ಪ, ಟಿ.ಎಸ್.ರಾಜೇಂದ್ರಪ್ರಸಾದ್, ಹಿರಿಯ ಲೇಖಕ ಎನ್.ಟಿ. ಎರ‍್ರಿಸ್ವಾಮಿ, ವ್ಯಾಸಗೊಂಡನಹಳ್ಳಿ ರಾಜಪ್ಪ, ಗೋ.ರುದ್ರಯ್ಯ, ಅಣಬೇರು ಜೀವನಮೂರ್ತಿ ಇತರರು ಇದ್ದರು.- - -
(ಕೋಟ್)* ಮಾದಿಗರದು ಭವ್ಯ, ದಿವ್ಯ ಇತಿಹಾಸ ಮಾದಿಗ ಸಮುದಾಯಕ್ಕೆ ಅತ್ಯಂತ ಭವ್ಯ, ದಿವ್ಯ ಇತಿಹಾಸ, ಪರಂಪರೆಯೇ ಇದೆ. ಆದರೆ, ಇಂದು ಸಮುದಾಯದಲ್ಲಿ ಒಂದು ರೀತಿಯ ಸಾಂಸ್ಕೃತಿಕ ಮರೆವು ಅಥವಾ ವಿಸ್ಮರಣೆ ಆವರಿಸಿದೆ. ಇಷ್ಟು ದೊಡ್ಡ ಇತಿಹಾಸ, ಮಹಾಪುರುಷರು, ಸಾಧಕರನ್ನು ಹೊಂದಿರುವ ಸಮಾಜ ಇಂದು ಕೇವಲ ಒಳ ಮೀಸಲಾತಿಗಾಗಿ ಹೋರಾಟ, ಸಂಘರ್ಷದ ಹಾದಿ ಹಿಡಿಯಬೇಕಾಗಿ ಬಂದಿರುವುದು ಅತ್ಯಂತ ವಿಷಾದನೀಯ ಸಂಗತಿ.
- ಡಾ.ಮೀರಸಾಬಿಹಳ್ಳಿ ಶಿವಣ್ಣ, ಹಿರಿಯ ಜಾನಪದ ತಜ್ಞ.- - -
* ಮಾತಂಗಿ ಅಂದ್ರೆ ತಾಯ್ತನ, ಪ್ರೀತಿ ಕುವೆಂಪುರ ''''ಪ್ರತಿಕೃತಿಯಲ್ಲ ಪ್ರತಿಮಾ ಮಾಧ್ಯಮ''''ವೆಂಬ ಲೇಖನದಂತೆ, ಪುರಾಣ, ಸಾಹಿತ್ಯವನ್ನು ಸಂಕೇತಗಳ ಮೂಲಕ ಅರ್ಥೈಸಿಕೊಳ್ಳಬೇಕೇ ಹೊರತು, ವಾಚ್ಯಾರ್ಥದಿಂದಲ್ಲ. ಕೇವಲ ವೈಜ್ಞಾನಿಕವಾಗಿ ನೀರನ್ನು ಎಚ್2ಒ ಅಂತಾ ವ್ಯಾಖ್ಯಾನಿಸಬಹುದು. ಆದರೆ, ಅನುಭವದ ನೆಲೆಯಲ್ಲಿ ಅದು ಜೀವಜಲವಾಗಿದೆ. ಅದೇ ರೀತಿ ಮಾತಂಗಿಯೆಂದರೆ ಕೇವಲ ಕಲ್ಲು ಅಥವಾ ದೇವರ ಪ್ರತಿಮೆಯಲ್ಲ, ಅದು ತಾಯ್ತನ, ಪ್ರೀತಿ ಮತ್ತು ಕರುಣೆಯ ಸಾಂಸ್ಕೃತಿಕ ಸಂಕೇತವಾಗಿದೆ.- ಡಾ. ಬಿ.ವಿ.ವಸಂತಕುಮಾರ, ಹಿರಿಯ ಲೇಖಕ, ಸಂಸ್ಕೃತಿ ಚಿಂತಕ, ಮೈಸೂರು.
- - --19ಕೆಡಿವಿಜಿ1, 2, 3: ದಾವಣಗೆರೆಯಲ್ಲಿ ಭಾನುವಾರ ಕರ್ನಾಟಕ ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಪ್ರೊ. ಎಚ್.ಲಿಂಗಪ್ಪನವರ ಮಾತಂಗಿ ಕಥನ ಪುಸ್ತಕವನ್ನು ಜಾನಪದ ತಜ್ಞ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಇತರ ಗಣ್ಯರು ಬಿಡುಗಡೆಗೊಳಿಸಿದರು.