ಮನೆಗೆ ಬಂದ ಅಪರಿಚಿತರು, ಕೋವಿ ಕಂಡು ಕಾಲಿಗೆ ಬುದ್ಧಿ ಹೇಳಿದರು!

| Published : Feb 06 2025, 11:46 PM IST

ಸಾರಾಂಶ

ಕಡಬ ತಾಲೂಕಿನ ಬಳ್ಪ ಗ್ರಾಮದ ಮನೆಯೊಂದಕ್ಕೆ ಅಪರಿಚಿತರು ಬಂದಿದ್ದು, ಕಳ್ಳರೆಂಬ ಶಂಕೆ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಮಹಿಳೆ ಕೋವಿ ಹಿಡಿದುಕೊಂಡು ಬಂದಾಗ ಅಪರಿಚಿತರು ಪರಾರಿಯಾದ ಘಟನೆ ಬುಧವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಕಡಬ ತಾಲೂಕಿನ ಬಳ್ಪ ಗ್ರಾಮದ ಮನೆಯೊಂದಕ್ಕೆ ಅಪರಿಚಿತರು ಬಂದಿದ್ದು, ಕಳ್ಳರೆಂಬ ಶಂಕೆ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಮಹಿಳೆ ಕೋವಿ ಹಿಡಿದುಕೊಂಡು ಬಂದಾಗ ಅಪರಿಚಿತರು ಪರಾರಿಯಾದ ಘಟನೆ ಬುಧವಾರ ನಡೆದಿದೆ.

ಬಳ್ಪ ಗ್ರಾಮದ ಕುಂಜತ್ತಾಡಿ ಕೊಡಂಗುಳಿ ಸೋಮಪ್ಪ ಗೌಡ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ.

ಬೆಳಗ್ಗೆ ೧೧ ಗಂಟೆ ಸುಮಾರಿಗೆ ನಾಯಿ ಬೊಗಳಿದ ಶಬ್ದ ಕೇಳಿ ಮನೆಯಲ್ಲಿದ್ದ ಸೋಮಪ್ಪ ಗೌಡರ ಅತ್ತಿಗೆ ಸಾವಿತ್ರಿ ಅವರು ಹೊರಗೆ ಬಂದಾಗ ಕೊಟ್ಟಿಗೆ ಸಮೀಪ ಅಪರಿಚಿತ ವ್ಯಕ್ತಿಯೊಬ್ಬ ನಿಂತಿದ್ದ. ಆತನಲ್ಲಿ ವಿಚಾರಿಸಿದಾಗ ಯಾವುದೇ ಉತ್ತರ ನೀಡದೆ ಇದ್ದುದರಿಂದ ಮಹಿಳೆ ಮನೆ ಒಳಗೆ ಹೋಗಿ ಕೋವಿ ಹಿಡಿದುಕೊಂಡು ಹೊರಗೆ ಬಂದಿದ್ದು, ಈ ವೇಳೆ ಸಮೀಪದಲ್ಲೇ ಮತ್ತೊಬ್ಬ ಕೂಡ ನಿಂತಿರುವುದು ಕಂಡು ಬಂದಿದೆ. ಕೋವಿ ಹಿಡಿದು ಮಹಿಳೆ ಹೊರಗೆ ಬಂದಿದ್ದನ್ನು ನೋಡಿದ ಇಬ್ಬರೂ ಅಪರಿಚಿತರು ಅಲ್ಲಿಂದ ಪರಾರಿಯಾಗಿದ್ದಾರೆ.ಬಳಿಕ ಮಹಿಳೆ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಅವರು ಹುಡುಕಾಡಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಘಟನೆ ಬಗ್ಗೆ ಸುಬ್ರಹ್ಮಣ್ಯ ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು, ಅವರು ಬಂದು ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.