ಸಾರಾಂಶ
ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಹಲವು ದಿನಗಳು ಮಳೆ ಇಲ್ಲದೇ ಬಾಡಿದ್ದವು. ಮಂಗಳವಾರ ರಾತ್ರಿ ಸುರಿದ ಮಳೆಗೆ ಬೆಳೆಗಳು ನಳನಳಿಸುವಂತೆ ಮಾಡಿದ್ದು ಜೀವಕಳೆ ಉಂಟು ಮಾಡಿದೆ.ಹೊಳೆ ಬಂದಾಗ ಮಳೆ ಬರಲ್ಲ ಎಂಬುದು ಜನರ ಮಾತು ಅದರಂತೆ ಕೃಷ್ಣಾನದಿಯಲ್ಲಿ ನೆರೆ ಕಡಿಮೆ ಆಗುವ ತನಕ ಮಳೆ ಬರಲಿಲ್ಲ. ಇದರ ಮಧ್ಯೆ ಆಷಾಢದ ಗಾಳಿ ಬಿಸಿ ಮುಂಗಾರು ಬೆಳೆಗಳು ಬಾಡಿದ್ದವು. ಆಷಾಢ ಕಳೆದು ಕೃಷ್ಣಾನದಿಯಲ್ಲಿ ನೆರೆ ಕಡಿಮೆ ಆಗಿದೆ. ಜೊತೆಗೆ ಗ್ರಾಮೀಣ ಪ್ರದೇಶದ ರೈತರು ದೇವರಿಗೆ ನೀರು ಹಾಕುವುದು, ಕಪ್ಪೆ ಮದುವೆ ಮಾಡುವುದು. ಕತ್ತೆಗಳಿಗೆ ಕಂಕಣ ಭಾಗ್ಯ ಕಟ್ಟುವುದು ಸೇರಿದಂತೆ ಮಳೆಗಾಗಿ ಬಹು ಬಗೆ ಆರಾಧನೆಗಳ ಮಾಡುವ ಮೂಲಕ ದೇವರ ಮೋರೆ ಹೋಗಿದ್ದರು. ರೈತರ ಪ್ರಾರ್ಥನೆಗಳ ಬಳಿಕ ಮಳೆ ಆಗಮನ ಆಗಿದೆ. ಮಳೆ ಬಂದಿರುವುದರಿಂದ ಅನ್ನದಾತರು ಆನಂದ ಗೊಂಡಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ರೈತರು ತೊಗರಿ, ಹತ್ತಿ, ಸಜ್ಜೆ, ಸೂರ್ಯಕಾಂತಿ, ಎಳ್ಳು, ಸೇರಿ ಬಿತ್ತನೆ ಮಾಡಿದ್ದು, ಬೆಳೆಗೆ ಅಗತ್ಯ ತೇವಾಂಶ ಸಿಗುವಷ್ಟು ಮಳೆ ಬಾರದೇ ಬೆಳೆಗಳು ಬಾಡಿದ್ದವು. ಇದರಿಂದ ರೈತರಿಗೆ ನಮ್ಮದು ಕಥೆ ಮುಗಿಯುತ್ತೆ ಎಂದು ತೆಲೆ ಮೇಲೆ ಕೈಹೊತ್ತು ಕುಳಿತಿದ್ದರು. ಇದರ ಜೊತೆಗೆ ಜಾನುವಾರಗಳಿಗೆ ಮೇವಿನ ಅಭಾವವು ಕಾಡಲಾರಂಭಿಸಿ ಮಳೆ ಇಲ್ಲದೇ ಬಂದೆರಗಿದ ಮೇವಿನ ಸಮಸ್ಯೆ ಅನ್ನದಾತನಿಗೆ ಮುಗಿಲು ಹರಿದು ಮೇಲೆ ಬಿದ್ದಂತಾಗಿತ್ತು. ಮಳೆಗಾಗಿ ಮಾಡಿದ ಪ್ರಾರ್ಥನೆ ಕೊನೆಗೂ ಫಲಿಸಿ ರಾತ್ರಿ ಉತ್ತಮ ಮಳೆ ಸುರಿದಿದೆ. ಜೊತೆಗೆ ಆಷಾಢದ ಗಾಳಿಯ ವೇಗ ತಗ್ಗಿದ್ದು ಇನ್ನಷ್ಟು ಮಳೆ ಆಗಮನದ ಲಕ್ಷಣಗಳು ಮೋಡ ಕವಿದ ವಾತಾವರಣ ಖಚಿತಪಡಿಸಿದೆ.ತಾಲೂಕಿನ ಲಿಂಗಸುಗೂರು, ಗುರುಗುಂಟಾ, ಮುದಗಲ್, ನಾಗರಾಳ ಸೇರಿ ಹೋಬಳಿಗಳ ವ್ಯಾಪ್ತಿ ಸುತ್ತಲೂ ಹಸಿ ಮಳೆ ಸುರಿದಿದೆ. ಕೃಷಿ ಇಲಾಖೆ ಮಾಹಿತಿ ಪ್ರಕಾರ ಜುಲೈ ತಿಂಗಳು 75.77 ಮಿ.ಮೀ. ಮಳೆ ಆಗಬೇಕಿತ್ತು ಆದರೆ 67 ಮಿ.ಮೀ. ಮಳೆ ಆಗಿದ್ದು 11ರಷ್ಟು ಕೊರತೆ ಉಂಟಾಗಿದೆ. ಮಳೆ ಕೊರತೆಯಿಂದ ಬೆಳೆ ಬಾಡುವ ಜೊತೆಗೆ ಬೆಳವಣಿಗೆ ಕುಂಠಿತಗೊಂಡಿದೆ. ಅಲ್ಲದೇ ಖುಷ್ಕಿ ಪ್ರದೇಶದಲ್ಲಿ ಮೆಲೂ ರಸಗೊಬ್ಬರ ಹಾಕಲು ಹಿನ್ನಡೆ ಆಗಿದೆ. ಈಗ ಸುರಿದ ಮಳೆ ಮುಂಗಾರು ಬೆಳೆಗೆ ಹೊಸ ಜೀವ ಕಳೆ ಕೊಟ್ಟಿದೆ.
ಬಹಳ ದಿನಗಳು ಮಳೆ ಇಲ್ಲದೇ ಮುಂಗಾರು ಬೆಳೆಗಳು ಬಾಡಿದ್ದವು. ಇದರ ಜೊತೆಗೆ ದನ-ಕರುಗಳಿಗೆ ಮೇವು ಇಲ್ಲದೇ ಚಿಂತೆ ಉಂಟಾಗಿತ್ತು. ಜೊತೆಗೆ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿತು. ಮಂಗಳವಾರ ರಾತ್ರಿ ಸುರಿದ ಉತ್ತಮ ಮಳೆ ಬೆಳೆಗಳ ಬೆಳವಣಿಗೆ ಉತ್ತಮವಾಗಿದೆ- ಕುಪ್ಪಣ್ಣ, ರೈತ ಕಸಬಾ ಲಿಂಗಸುಗೂರು