ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂಡಿ ತಾಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘ ತಾಲೂಕು ಆಡಳಿತ ಸೌಧದ ಮುಂದೆ 2ನೇ ಹಂತದ ಅನಿರ್ದಿಷ್ಟಾವಧಿಯ ಮುಷ್ಕರ ಆರಂಭಿಸಿದ್ದು, ಮುಷ್ಕರ ಗುರುವಾರ 4ನೇ ದಿನಕ್ಕೆ ಕಾಲಿಟ್ಟಿದೆ. ಮುಷ್ಕರಕ್ಕೆ ತಾಪಂ ಮಾಜಿ ಸದಸ್ಯ ಗಣಪತಿ ಬಾಣಿಕೋಲ, ಡಿಎಸ್‌ಎಸ್ ತಾಲೂಕು ಸಂಚಾಲಕ ರಮೇಶ ನಿಂಬಾಳಕರ ತೆರಳಿ ಬೆಂಬಲ ಸೂಚಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಗಣಪತಿ ಬಾಣಿಕೋಲ, ರೈತರು, ಸಾರ್ವಜನಿಕರ ನಡುವೆ ಕೊಂಡಿಯಾಗಿರುವ ಗ್ರಾಮಾಡಾಳಿತಾಧಿಕಾರಿಗಳಿಗೆ ಸರ್ಕಾರ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ಗ್ರಾಮಾಡಳಿತ ಅಧಿಕಾರಿಗಳಿಗೆ ಸೌಲಭ್ಯಗಳು ಇಲ್ಲದೆ ಹೇಗೆ ಕರ್ತವ್ಯ ನಿರ್ವಹಿಸಬೇಕು. ಸರ್ಕಾರ ಇವರ ಮುಷ್ಕರವನ್ನು ನಿರ್ಲಕ್ಷ್ಯ ಮಾಡಿದ್ದು, ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಡಿಎಸ್‌ಎಸ್ ತಾಲೂಕು ಸಂಚಾಲಕ ರಮೇಶ ನಿಂಬಾಳಕರ ಮಾತನಾಡಿ, ಶೈಕ್ಷಣಿಕ ವರ್ಷದ ಪರೀಕ್ಷೆ ಫಾರ್ಮ್ ತುಂಬುವುದು, ನೀಟ್,ಸಿಇಟಿ ಪರೀಕ್ಷೆಗಳ ಅರ್ಜಿ ತುಂಬುವ ಪ್ರಕ್ರಿಯೆ ಆರಂಭಗೊಂಡಿದೆ. ಅರ್ಜಿ ಫಾರಂಗಳನ್ನು ಭರ್ತಿ ಮಾಡಲು ಜಾತಿ, ಆದಾಯ, ಕೃಷಿ ಹಿಡುವಳಿ ಪ್ರಮಾಣಪತ್ರಗಳು ಅವಶ್ಯಕವಾಗಿ ವಿದ್ಯಾರ್ಥಿಗಳಿಗೆ ಬೇಕಾಗುತ್ತದೆ. ಸರ್ಕಾರ ಕೂಡಲೆ ಮಧ್ಯಸ್ಥಿಕೆ ವಹಿಸಿ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ರಾವೂರ, ಕಂದಾಯ ಇಲಾಖೆ ನೌಕರರ ಸಂಘದ ತಾಲೂಕು ಅಧ್ಯಕ್ಷ ಶ್ರೀಕಾಂತ ಪೂಜಾರಿ, ಗೌರವಾಧ್ಯಕ್ಷ ಆರ್.ಬಿ.ಮೂಗಿ, ಕಂದಾಯ ನಿರೀಕ್ಷಕ ಎಚ್.ಎಚ್.ಗುನ್ನಾಪೂರ, ಗ್ರಾ.ಆ.ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ವೈ.ಎಲ್.ಪೂಜಾರಿ, ಚಡಚಣ ತಾಲೂಕು ಅಧ್ಯಕ್ಷ ಮಾಳು ಹೊಸೂರ, ಉಪಾಧ್ಯಕ್ಷ ಎಸ್.ಎಚ್.ಲಾಳಸಂಗಿ, ಪ್ರ.ಕಾರ್ಯದರ್ಶಿ ಕೆ.ಎಸ್.ಚೌದರಿ, ವಿ.ಎಂ.ಕೋಳಿ, ಜಿ.ಎಂ.ಬಿರಾದಾರ,ಎಸ್.ಎಸ್.ಮೋದಿ, ಎಂ.ಆರ್.ರಾಠೋಡ, ಎಸ್.ಬಿ.ಹಿರೇಬೇನೂರ ಸೇರಿ ಪದಾಧಿಕಾರಿಗಳು ಮುಷ್ಕರದಲ್ಲಿ ಇದ್ದರು.
ಮುಷ್ಕರಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘ, ಕರವೇ, ಜೆಡಿಎಸ್, ಬಿಜೆಪಿ, ಡಿಎಸ್‌ಎಸ್ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಮುಖಂಡರು ಬೆಂಬಲ ಸೂಚಿಸಿದ್ದಾರೆ.