ಜಿಲ್ಲಾ ಸರ್ಕಾರಿ ಆಸ್ಪತ್ರೆ ಸಮೀಪದ ಸ್ವಾಭಿಮಾನ ಭವನದಲ್ಲಿ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಸಹಯೋಗದಲ್ಲಿ ಭಾನುವಾರ ಮಾತೆ ಸಾವಿತ್ರಿಬಾಯಿ ಫುಲೆ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆಯನ್ನು ಭಕ್ತಿಭಾವ ಮತ್ತು ಚಿಂತನೆಯೊಂದಿಗೆ ಆಚರಿಸಲಾಯಿತು. ಕಾರ್ಯಕ್ರಮವನ್ನು ದಲಿತ ಹಿರಿಯ ಮುಖಂಡ ಎಚ್. ಕೆ. ಸಂದೇಶ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಸಮೀಪದ ಸ್ವಾಭಿಮಾನ ಭವನದಲ್ಲಿ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಸಹಯೋಗದಲ್ಲಿ ಭಾನುವಾರ ಮಾತೆ ಸಾವಿತ್ರಿಬಾಯಿ ಫುಲೆ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆಯನ್ನು ಭಕ್ತಿಭಾವ ಮತ್ತು ಚಿಂತನೆಯೊಂದಿಗೆ ಆಚರಿಸಲಾಯಿತು. ಕಾರ್ಯಕ್ರಮವನ್ನು ದಲಿತ ಹಿರಿಯ ಮುಖಂಡ ಎಚ್. ಕೆ. ಸಂದೇಶ್ ಉದ್ಘಾಟಿಸಿದರು.ಉದ್ಘಾಟನಾ ಭಾಷಣದಲ್ಲಿ ಅವರು, ವಿದ್ಯಾವಂತಿಕೆ ಅಪರೂಪವಾಗಿದ್ದ ಕಾಲದಲ್ಲೇ ದಲಿತ ಚಳವಳಿ ಹುಟ್ಟಿ ಅಕ್ಷರ ಕೊಡಿ, ಭೂಮಿ ಕೊಡಿ, ಹಾಸ್ಟೆಲ್ ಕೊಡಿ ಸೇರಿದಂತೆ ಮೂಲಭೂತ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಿತು ಎಂದು ಹೇಳಿದರು. ತಂಡೋಪತಂಡವಾಗಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸಿದ ಪರಿಣಾಮವೇ ಇಂದು ಅನೇಕ ಸೌಲಭ್ಯಗಳು ಲಭ್ಯವಾಗಿವೆ ಎಂದರು.
ಸಾವಿತ್ರಿಬಾಯಿ ಫುಲೆ, ಕುವೆಂಪು, ಟಿಪ್ಪುಸುಲ್ತಾನ್ ಸೇರಿದಂತೆ ಅನೇಕ ಹೋರಾಟಗಾರರು ಸಮಾಜ ಪರಿವರ್ತನೆಗೆ ದಾರಿ ತೋರಿಸಿದ್ದಾರೆ ಎಂದು ಸ್ಮರಿಸಿದರು. ಇದೇ ವೇಳೆ ಜನವರಿ ೨೦ರಂದು ನಗರದಲ್ಲಿ ನಡೆಯಲಿರುವ ಐತಿಹಾಸಿಕ ಕಾರ್ಯಕ್ರಮಕ್ಕೆ ಬಾಬಾಸಾಹೇಬರ ಮೊಮ್ಮಗ ಆಗಮಿಸಲಿರುವುದರಿಂದ ಎಲ್ಲರೂ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಶಿಕ್ಷಕಿ ಹಾಗೂ ಲೇಖಕಿ ಉಮಾದೇವಿ ಸಾವಿತ್ರಿಬಾಯಿ ಫುಲೆರವರ ಶಿಕ್ಷಣ ಹೋರಾಟದ ಮಹತ್ವವನ್ನು ವಿವರಿಸಿದರು. ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ರೋಹಿತ್ ಅಗಸರವಳ್ಳಿ ಕುವೆಂಪು ಅವರ ಮಾನವತಾವಾದಿ ಚಿಂತನೆಗಳ ಕುರಿತು ವಿಚಾರ ಮಂಡಿಸಿದರು. ದಲಿತ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಡಾ. ದೇವರಾಜು ಸಂವಿಧಾನ ಪೀಠಿಕೆ ಬೋಧಿಸಿದರು. ಸಾವಿತ್ರಿಬಾಯಿ ಫುಲೆ ಕುರಿತು ನಡೆದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಫುಲೆ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಡಾ. ಕೆ.ಸಿ. ಸೋಮಲತಾ, ದಲಿತ ಸಮನ್ವಯ ಸಮಿತಿ ಮುಖಂಡ ಕೃಷ್ಣದಾಸ್, ಹಿರಿಯ ಸಾಹಿತಿ ಕೆ.ಬಿ. ಗುರುಮೂರ್ತಿ, ದಲಿತ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಎಂ.ಕೆ. ಕೃಷ್ಣಯ್ಯ, ರಾಜ್ಯ ಸಂಘಟನಾ ಸಂಚಾಲಕ ಈರೇಶ್ ಹಿರೇಹಳ್ಳಿ, ಕವಿ ಬಚನಹಳ್ಳಿ ಕೃಷ್ಣಪ್ಪ, ಉಪಾಧ್ಯಕ್ಷ ವಸಂತ ಕುಮಾರ್, ಸಾಹಿತ್ಯ ಕಾರ್ಯದರ್ಶಿ ಮಧು ಕೆ. ದೇವರಾಜು, ಖಜಾಂಚಿ ಟಿ.ಸಿ. ಪ್ರವೀಣ್, ನಿರ್ದೇಶಕ ವಿರೇಂದ್ರ, ರಾಜೇಶ್ ಸೇರಿದಂತೆ ಅನೇಕ ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.