ಶಿಗ್ಗಾಂವಿಯಲ್ಲಿ 6ನೇ ದಿನಕ್ಕೆ ಗ್ರಾಮ ಆಡಳಿತ ಅಧಿಕಾರಿಗಳ ಹೋರಾಟ

| Published : Feb 18 2025, 12:33 AM IST

ಸಾರಾಂಶ

ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದರೆ ಶೀಘ್ರವೇ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾನಿರತರು ಎಚ್ಚರಿಸಿದರು.

ಶಿಗ್ಗಾಂವಿ: ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಎರಡನೇ ಹಂತದ ಅನಿರ್ದಿಷ್ಟ ಅವಧಿಯ ಧರಣಿ 6ನೇ ದಿನಕ್ಕೆ ಕಾಲಿಟ್ಟಿದ್ದು, ಸ್ಥಳಕ್ಕೆ ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮ್‌ಪೀರ್ ಖಾದ್ರಿ ಭೇಟಿ ನೀಡಿ ಮನವಿ ಸ್ವೀಕರಿಸಿದರು.ಕಳೆದ ಐದು ದಿನಗಳಿಂದ ಕಂದಾಯ ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದರೆ ಶೀಘ್ರವೇ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾನಿರತರು ಎಚ್ಚರಿಸಿದರು.ತಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದು, ಸ್ವತಃ ನಾನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬೇಡಿಕೆಗಳ ಈಡೇರಿಕೆಗೆ ಮನವೊಲಿಸುವುದಾಗಿ ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮ್‌ಪೀರ್ ಖಾದ್ರಿ ಭರವಸೆ ನೀಡಿದರು.

ಜಿಲ್ಲಾ ಅಧ್ಯಕ್ಷ ಡಿ.ಎಂ. ಪಾಟೀಲ, ಗೌ. ಅಧ್ಯಕ್ಷ ಪ್ರಸಾದ ಅಕ್ಕಿ, ಪದಾಧಿಕಾರಿಗಳಾದ ವೆಂಕಟೇಶ ಲಮಾಣಿ, ಶಕುಂತಲಾ ವಡ್ಡರ, ಮಾರುತಿ ದೊಡ್ಡಮನಿ, ರಾಜೇಶ ಜಿ., ಗದಿಗೆಪ್ಪ ಮೇಲಿಮನಿ, ಮರ್ದಾನಸಾಬ ಪಾಪಣ್ಣವರ, ಗಾಯಿತ್ರಿ ಹಲಕರ್ಣಿ, ಮಂಜುನಾಥ ಹಳ್ಳದ, ಮೆಹಬೂಬ ತೆಗ್ಗಿ, ಮಂಜುಳಾ ಕಾಳೆ, ಮಹಾಂತೇಶ ಹಡಪದ, ಅಕ್ಷತಾ ಅಲೆಗಾವ, ಕಿರಣ ತೆರದಾಳ, ಕೆ.ಎ. ಕಿಲ್ಲೆದಾರ, ಸುರೇಶ ಗಂಜಿಗಟ್ಟಿ, ಐ.ಡಿ. ನಂದಿ ಸೇರಿದಂತೆ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.ಮಕ್ಕಳಲ್ಲಿ ಕಲಿಕೆಯ ಉತ್ಸಾಹ ಮೂಡಿಸಿ

ಶಿಗ್ಗಾಂವಿ: ಮಕ್ಕಳಲ್ಲಿ ಉತ್ಸಾಹ ಮೂಡಿಸುವ ನಿಟ್ಟಿನಲ್ಲಿ ಕಲಿಕಾ ಹಬ್ಬದ ಮೂಲಕ ಹಲವು ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿ, ಅವರ ಕಲಿಕಾ ಆಸಕ್ತಿ ಹೆಚ್ಚಿಸುವುದು ಕಲಿಕಾ ಹಬ್ಬದ ಉದ್ದೇಶವಾಗಿದೆ ಎಂದು ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಂಜುನಾಥ ಸಾಳುಂಕೆ ತಿಳಿಸಿದರು.ತಾಲೂಕಿನ ಹಿರೇಮಲ್ಲೂರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬನ್ನೂರ ಸಮೂಹ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಅರುಣ ಹುಡೇದಗೌಡ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳ ಕಲಿಕೆಯಲ್ಲಿ ಕೊರತೆಯಾಗಿದ್ದು, ಅದನ್ನು ಸರಿದೂಗಿಸಲು ಕಲಿಕಾ ಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೊಸ ಶಿಕ್ಷಣ ನೀತಿಯ ಮುಖ್ಯ ಆಶಯಗಳಲ್ಲಿ ಕಲಿಕಾ ಹಬ್ಬವೂ ಒಂದಾಗಿದೆ. ಮಕ್ಕಳ ಪ್ರತಿಭೆ ಗುರುತಿಸಲು ಕಲಿಕಾ ಹಬ್ಬ ಒಂದು ವೇದಿಕೆಯಾಗಿದೆ ಎಂದರು.ಗ್ರಾಮದ ಚಂದ್ರಶೇಖರಯ್ಯ ಹಿರೇಮಠ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಮಲ್ಲನಗೌಡ ಹುತ್ತನಗೌಡ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಹಿರೇಮಲ್ಲೂರ ಗ್ರಾಪಂ ಅಧ್ಯಕ್ಷ ರಾಮನಗೌಡ ಕರಿಗೌಡ್ರ, ತಾಲೂಕು ಶಿಕ್ಷಣ ಇಲಾಖೆ ಸಂಯೋಜಕ ಅಧಿಕಾರಿಗಳಾದ ಉಮೇಶ ಕಡೇಮನಿ, ಬಸನಗೌಡ ಗೋಣಿಗೌಡ್ರ, ಗ್ರಾಮಸ್ಥರಾದ ಚನಬಸನಗೌಡ ಹುತ್ತನಗೌಡ್ರ, ಶಿವನಗೌಡ ಸಣ್ಣಲಿಂಗನಗೌಡ್ರ, ಶಂಕರಗೌಡ್ರ, ಹುತ್ತನಗೌಡ್ರ, ಈಶ್ವರಗೌಡ್ರ ಲಿಂಗನಗೌಡ್ರ, ಬಸಣ್ಣ ಕಡಕೋಳ, ಮೌಲಾಲಿ ನದಾಫ್ ಇತರರಿದ್ದರು.