ಸಾರಾಂಶ
- ಬೆಳಗಾವಿಯಲ್ಲಿ 20ರಂದು ರಾಜ್ಯ ಗೊಲ್ಲ ಸಂಘ ಶತಮಾನೋತ್ಸವ, ಯಾದವನಾನಂದ ಶ್ರೀ 16ನೇ ಪಟ್ಟಾಭಿಷೇಕ ಸಮಾರಂಭ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ರಾಜ್ಯದಲ್ಲಿ ಗೊಲ್ಲ (ಯಾದವ) ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಶಿಫಾರಸು ಮಾಡಿದೆ. ಆದರೆ, ಇದುವರೆಗೆ ನಮ್ಮ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎಂದು ಕರ್ನಾಟಕ ರಾಜ್ಯ ಗೊಲ್ಲ (ಯಾದವ) ಸಂಘದ ರಾಜ್ಯಾಧ್ಯಕ್ಷ , ವಿಧಾನ ಪರಿಷತ್ತು ಸದಸ್ಯ ಡಿ.ಟಿ. ಶ್ರೀನಿವಾಸ ಹೇಳಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಟಿಗೆ ಸೇರ್ಪಡೆ ಸೇರಿದಂತೆ ನಮ್ಮ ಸಮುದಾಯವು ಶಿಕ್ಷಣ ಸೇರಿದಂತೆ ಸೌಲಭ್ಯ, ಹಕ್ಕುಗಳಿಗಾಗಿ ಮುಂದಿನ ದಿನಗಳಲ್ಲಿ ಹೋರಾಟಕ್ಕೂ ಸಜ್ಜಾಗಲಿದೆ ಎಂದರು.
ಅರೆ ಅಲೆಮಾರಿ ಸಮುದಾಯಗಳ ಸೌಲಭ್ಯವನ್ನು ಸರ್ಕಾರ ನಮ್ಮ ಸಮಾಜಕ್ಕೆ ನೀಡುತ್ತಿದೆ. ರಾಜ್ಯದಲ್ಲಿ ಸುಮಾರು 25-30 ಲಕ್ಷ ಗೊಲ್ಲರಿದ್ದಾರೆ. ಗೊಲ್ಲ, ಗೋಪಾಲ, ಹಣಬರು, ಯಾದವ, ಕಾಡುಗೊಲ್ಲ, ಅಸ್ತನಾಗೊಲ್ಲ, ಯಾದವ್, ಅಡವಿಗೊಲ್ಲ, ಗೋಪಾಲಿ, ಗೌಳಿ, ಗೌಲಿ, ಗಾವಲಿ, ಗಾವ್ಲಿ, ಹಟಣಬರು, ಕಾವಡಿ, ಕೊಲಾಯನ್, ಕೋನಾರ್, ಕೊನ್ನೂರ್, ಕೃಷ್ಣ ಗಾವಲಿ, ಕೃಷ್ಣ ಗೊಲ್ಲ, ಮಣಿಯಾನಿ, ಊರಾಲಿ ಹೀಗೆ ನಾನಾ ಜಾತಿಗಳಿಂದ ಸಮಾಜವನ್ನು ಗುರುತಿಸಲಾಗುತ್ತಿದೆ ಎಂದು ವಿವರಿಸಿದರು.ಸಂಘವು 1924ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಇದೀಗ ಶತಮಾನೋತ್ಸವ ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಂಘದ ಶತಮಾನೋತ್ಸವ ಹಾಗೂ ಶ್ರೀ ಯಾದವನಾನಂದ ಸ್ವಾಮಿಗಳ 16ನೇ ವರ್ಷದ ಪಟ್ಟಾಭಿಷೇಕ ಸಮಾರಂಭವನ್ನು ಏ.20ರಂದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಜಿಲ್ಲಾ ಕ್ರೀಡಾಂಗಣದ ಅಮಟೂರು ಬಾಳಪ್ಪ ಸ್ಮರಣಾರ್ಥ ಮಂಟಪದಲ್ಲಿ ಏ.20ರಂದು ಹಮ್ಮಿಕೊಳ್ಳಲಾಗಿದೆ. ಸಿಎಂ ಸಿದ್ದರಾಮಯ್ಯ ಸಮಾರಂಭ ಉದ್ಘಾಟಿಸುವರು. ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ್, ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ, ಧೀರಜ್ ಮುನಿರಾಜು, ಎಂ.ನಾಗರಾಜ ಯಾದವ್ ಸೇರಿದಂತೆ ಜನಪ್ರತಿನಿಧಿಗಳು, ಮಠಾಧೀಶರು ಭಾಗವಹಿಸಲಿದ್ದಾರೆ. ಸಮಾಜ ಬಾಂಧವರು ಸಮಾವೇಶದಲ್ಲಿ ಭಾಗವಹಿಸುವಂತೆ ಕೋರಿದರು.
ಬೆಳಗಾವಿ ಸಮಾವೇಶ ಗೊಲ್ಲರ ಶಕ್ತಿ ಪ್ರದರ್ಶನವೂ ಆಗಲಿದೆ. ನಮ್ಮ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕು, ಶೈಕ್ಷಣಿಕ ಮೀಸಲಾತಿ ಸೇರಿದಂತೆ ಹಕ್ಕು, ಸೌಲಭ್ಯ ಕಲ್ಪಿಸುವಂತೆ ವೇದಿಕೆಯಲ್ಲಿ ಒತ್ತಾಯ ಮಾಡಲಾಗುವುದು. ಇಂದಿಗೂ ಸಮಾಜದಲ್ಲಿ ಸಾಕ್ಷರತೆ ಪ್ರಮಾಣ ಪೂರ್ಣವಾಗಿಲ್ಲ. ವಿಜಯಪುರ, ಬಾಗಲಕೋಟೆ ಸುಮಾರು 1500 ಕುಟುಂಬ ಜಾಡಮಾಲಿ ಕೆಲಸ ಮಾಡುತ್ತಿವೆ. ಬೀದರ್‌ನಲ್ಲಿ ಗುಳೆ ಹೋಗಿ, ಮಳೆ ಬಂದರಷ್ಟೇ ಗೊಲ್ಲರು ಊರಿಗೆ ಮರಳುತ್ತಾರೆ. ಸ್ನಾತಕೋತ್ತರ ಪದವಿ ಪ್ರವೇಶಕ್ಕೆ 2 ಸೀಟು ಮೀಸಲಿದ್ದುದು, ಈಗ ಒಂದು ಸೀಟನ್ನು ಮಾತ್ರ ನೀಡಲಾಗುತ್ತಿದೆ. ರೋಸ್ಟರ್ ಪದ್ಧತಿಯನ್ನೇ ಪಾಲಿಸುತ್ತಿಲ್ಲ. ಅರೆ ಅಲೆಮಾರಿ ಶಾಲೆಗಳು ಅನುಕೂಲವಾಗಿಲ್ಲ. ಹಾಸ್ಟೆಲ್ ಕಲ್ಪಿಸಲು ಸಮಾಜ ಕಲ್ಯಾಣ ಇಲಾಖೆ ಮುಂದಾಗಲಿ ಎಂದು ಒತ್ತಾಯಿಸಿದರು.ಸಂಘದ ಮುಖಂಡರಾದ ತಿಪ್ಪೇಸ್ವಾಮಿ, ವೆಂಕಟೇಶ, ಲಕ್ಷ್ಮೀನಾರಾಯಣ, ಶಶಿ, ಶಶಿಕುಮಾರ, ಹನುಮಂತಪ್ಪ, ನರಸಿಂಹೇಗೌಡ, ಕೃಷ್ಣಪ್ಪ, ಶ್ರೀನಿವಾಸ, ಮಂಜಣ್ಣ ಇತರರು ಇದ್ದರು.
- - -ಕೋಟ್ * ಮೌಢ್ಯ ನಿವಾರಣೆಗೆ ಒಟ್ಟಾಗಿ ಶ್ರಮ ಚಿತ್ರದುರ್ಗ, ದಾವಣಗೆರೆ, ಬೆಳಗಾವಿ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬುಳ್ಳಾಪುರ, ಕೋಲಾರ ಭಾಗದಲ್ಲಿ ಗೊಲ್ಲ ಸಮುದಾಯ ಜನರು ಹೆಚ್ಚಾಗಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಜಗಳೂರು ತಾಲೂಕಿನಲ್ಲಿ ಹೆಚ್ಚಾಗಿದ್ದೇವೆ. ಕಂದಾಚಾರ, ಮೂಢನಂಬಿಕೆ ಇಂದಿಗೂ ಸಮುದಾಯದಲ್ಲಿ ಅಲ್ಲಲ್ಲಿ ಆಚರಣೆಯಲ್ಲಿವೆ. ಅವುಗಳ ನಿವಾರಣೆಗೆ ಸಂಘ, ಸಮಾಜದ ಮಾಜಿ ಶಾಸಕರಾದ ಪೂರ್ಣಿಮಾ ಶ್ರೀನಿವಾಸ ಸೇರಿದಂತೆ ಎಲ್ಲರೂ ಶ್ರಮಿಸುತ್ತಿದ್ದೇವೆ ಎಂದು ಶ್ರೀನಿವಾಸ್ ಹೇಳಿದರು.- - -
-7ಕೆಡಿವಿಜಿ1.ಜೆಪಿಜಿ:ದಾವಣಗೆರೆಯಲ್ಲಿ ಸೋಮವಾರ ಕರ್ನಾಟಕ ರಾಜ್ಯ ಗೊಲ್ಲ (ಯಾದವ) ಸಂಘದ ರಾಜ್ಯಾಧ್ಯಕ್ಷ, ವಿಪ ಸದಸ್ಯ ಡಿ.ಟಿ.ಶ್ರೀನಿವಾಸ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.