ಲೋಕಾಪುರ ಸಮೀಪದ ಸಾಲಾಪುರ ಕ್ರಾಸ್ ಬಳಿ ಶುಕ್ರವಾರ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್ ಮಾಡಿ ಕಬ್ಬಿಗೆ ನಿಗದಿತ ಬೆಲೆ ನೀಡುವಂತೆ ರೈತರು ಬೃಹತ್ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಪ್ರತಿ ಟನ್ ಕಬ್ಬಿಗೆ ₹5,500 ಬೆಲೆ ಸಿಗುವವರೆಗೆ ನಮ್ಮ ಈ ಹೋರಾಟ ವಿಶ್ರಮಿಸುವುದಿಲ್ಲ, ನಿರಂತರವಾಗಿ ನಡೆಯಲಿದೆ ಎಂದು ರೈತ ಮುಖಂಡ ಹಾಗೂ ಹಸಿರು ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮದುರ್ಗ ಹೇಳಿದರು.

ಸಮೀಪದ ಸಾಲಾಪುರ ಕ್ರಾಸ್ ಬಳಿ ಶುಕ್ರವಾರ ರಾಜ್ಯ ಹೆದ್ದಾರಿ ಬಂದ್ ಮಾಡಿ ಹಮ್ಮಿಕೊಂಡ ರೈತರ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿ, ಕಬ್ಬಿನಿಂದ ತಯಾರಾಗುವ ಸಕ್ಕರೆ, ಎಥೆನಾಲ್ ಹಾಗೂ ಉಪಉತ್ಪನ್ನಗಳಿಂದ ಸರ್ಕಾರಕ್ಕೆ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಸಾವಿರಾರು ಕೋಟಿ ರೂಪಾಯಿ ಆದಾಯ ಬರುತ್ತಿದೆ. ಆದರೆ ಹಗಲಿರುಳು ಕಷ್ಟಪಟ್ಟು ಬೆಳೆದ ರೈತನಿಗೆ ಮಾತ್ರ ಸೂಕ್ತ ಬೆಲೆ ಸಿಗುತ್ತಿಲ್ಲ. ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತ: ರಸ್ತೆಗೆ ಅಡ್ಡಲಾಗಿ ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿ ರೈತರು ಧರಣಿ ಕುಳಿತ ಕಾರಣ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತು. ಕಿಮೀವರೆಗೆ ಸಾಲು ಸಾಲು ವಾಹನಗಳು ರಸ್ತೆಯಲ್ಲೇ ನಿಲ್ಲುವಂತಾಗಿದ್ದು, ಸಾರ್ವಜನಿಕರು ಹಾಗೂ ದೂರದ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರು ತೀವ್ರ ಪರದಾಟ ನಡೆಸಿದರು. ಪ್ರತಿಭಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಹಳ್ಳಿಯಿಂದ ದೆಹಲಿವರೆಗೆ ಪ್ರತಿಭಟನೆ ಎಚ್ಚರಿಕೆ: ರಾಜ್ಯದ ವಿವಿಧ ಭಾಗಗಳಲ್ಲಿ ರೈತರು ಈಗಾಗಲೇ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ನಮ್ಮ ರಾಜ್ಯಾಧ್ಯಕ್ಷರ ಆಜ್ಞೆಯಂತೆ ಪ್ರತಿಯೊಂದು ಪ್ರಮುಖ ಹೆದ್ದಾರಿ ಬಂದ್ ಮಾಡುತ್ತೇವೆ. ಸರ್ಕಾರ ನಮ್ಮ ಬೇಡಿಕೆಗೆ ತಕ್ಷಣ ಸ್ಪಂದಿಸದಿದ್ದರೆ ಈ ಹೋರಾಟ ಹಳ್ಳಿಯಿಂದ ದೆಹಲಿಯವರೆಗೂ ವ್ಯಾಪಿಸಲಿದೆ. ಮುಂಬರುವ ದಿನಗಳಲ್ಲಿ ಗುರ್ಲಾಪುರ ಮಾದರಿಯ ಉಗ್ರ ಪ್ರತಿಭಟನೆ ಮರುಕಳಿಸಲಿದೆ ಎಂದು ರೈತ ಮುಖಂಡರು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಬೆಳಗಾವಿ ಜಿಲ್ಲಾಧ್ಯಕ್ಷ ಮಲ್ಲು ದೇಸಾಯಿ, ಉಪಾಧ್ಯಕ್ಷ ಯಲ್ಲಪ್ಪ ದೊಡಮನಿ, ತಾಲೂಕು ಅಧ್ಯಕ್ಷ ಸುರೇಶ ಗುಂಜೇರಿ, ಗೌರವ ಅಧ್ಯಕ್ಷ ಮಹದೇವ ತ್ಯಾವಟಗಿ, ತಾಲೂಕು ಕಾರ್ಯದರ್ಶಿ ಈರಣ್ಣ ರಾಜನಾಳ, ಪ್ರಮುಖ ರೈತ ಮುಖಂಡರಾದ ಲಕ್ಷ್ಮಣ ಸುರಪುರ, ಪ್ರಭು ವರ್ಚಗಲ್, ರಮೇಶ್ ಗುಡಿಯನವರ, ಹಣಮಂತ ತುಬಾಕಿ, ರಮೇಶ ಸಂಗನ್ನವರ ಸೇರಿದಂತೆ ದಾದನಟ್ಟಿ, ವರ್ಚಗಲ್, ಸಾಲಾಪೂರ, ಬಟಕುರ್ಕಿ, ಕಟಕೋಳ, ಸೊಪ್ಪಡ್ಲ ಗ್ರಾಮದ ನೂರಾರು ರೈತರು ಇದ್ದರು.