ನದಿಗೆ ನೀರು ಹರಿಸುವ ತನಕ ಹೋರಾಟ ನಿಲ್ಲದು: ಸಿದ್ದು ದಣ್ಣೂರ

| Published : Apr 04 2024, 01:11 AM IST / Updated: Apr 04 2024, 08:09 AM IST

ಸಾರಾಂಶ

ಸೊನ್ನ ಬ್ಯಾರೇಜ್‌ನಿಂದ ಭೀಮಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ಕಳೆದ 17 ದಿನಗಳಿಂದ ಧರಣಿ ಸತ್ಯಾಗ್ರಹ ಕುಳಿತಿದ್ದೇವೆ. ಜನ ಜಾನುವಾರುಗಳಿಗೆ ಎಲ್ಲಿಯೂ ಹನಿ ನೀರು ಸಿಗುತ್ತಿಲ್ಲ. ದನಕುರುಗಳು, ಕುರಿಗಾಹಿಗಳು ನದಿಯಲ್ಲಿ ಮರಳು ಅಗೆದು ಗುಂಡಿ ತೋಡಿದರೂ ಹನಿ ನೀರು ಸಿಗುತ್ತಿಲ್ಲ.

 ಚವಡಾಪುರ : ನೀರಿಲ್ಲದೆ ಬರೀದಾಗಿರುವ ಭೀಮಾ ನದಿಗೆ ನೀರು ಹರಿಸುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರೈತ ಮುಖಂಡ ಸಿದ್ದು ದಣ್ಣೂರ ಹೇಳಿದರು.

ಅಫಜಲ್ಪುರ ತಾಲೂಕಿನ ಗುಡ್ಡೆವಾಡಿ ಗ್ರಾಮದಲ್ಲಿ ಭೀಮಾ ನದಿಯಲ್ಲಿ ಧರಣಿ ಕುಳಿತು ಮಾತನಾಡಿ ಸೊನ್ನ ಬ್ಯಾರೇಜ್‌ನಿಂದ ಭೀಮಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ಕಳೆದ 17 ದಿನಗಳಿಂದ ಧರಣಿ ಸತ್ಯಾಗ್ರಹ ಕುಳಿತಿದ್ದೇವೆ. ಜನ ಜಾನುವಾರುಗಳಿಗೆ ಎಲ್ಲಿಯೂ ಹನಿ ನೀರು ಸಿಗುತ್ತಿಲ್ಲ. ದನಕುರುಗಳು, ಕುರಿಗಾಹಿಗಳು ನದಿಯಲ್ಲಿ ಮರಳು ಅಗೆದು ಗುಂಡಿ ತೋಡಿದರೂ ಹನಿ ನೀರು ಸಿಗುತ್ತಿಲ್ಲ. 

3 ಟಿಎಂಸಿಯ ಬ್ಯಾರೇಜ್‌ ಇದ್ದರೂ ಕೂಡ ಬ್ಯಾರೇಜ್ ಕೆಳಭಾಗದ ಹಳ್ಳಿಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ ಎಂದರೆ ಜಲಮೂಲ ಸಂಪೂರ್ಣ ಬರೀದಾಗಿದೆ. ಈ ಭೀಕರ ಬೇಸಿಗೆಯಲ್ಲಿ ನಾವುಗಳು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು 17 ದಿನಗಳಿಂದ ನೀರಿಗಾಗಿ ಧರಣಿ ಕುಳಿತರೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಹೋಗುತ್ತಿದ್ದಾರೆ. ನದಿಗೆ ನೀರು ಹರಿಸುವ ಭರವಸೆ ಯಾರು ನೀಡುತ್ತಿಲ್ಲ. ನದಿಗೆ ನೀರು ಹರಿಸುವ ತನಕ ನಾವು ಧರಣಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ ಹೂಗಾರ, ದತ್ತುಗೌಡ ಪಾಟೀಲ, ಯಲ್ಲಾಲಿಂಗ ನೆಲೋಗಿ, ಭೋಜಪ್ಪ ಕೊಳ್ಳೂರ, ಶರಣಪ್ಪ ಮ್ಯಾಕೇರಿ, ಜಗು ತೇಲ್ಕರ, ಸೋಮಣ್ಣ ನೆಲೋಗಿ, ಸಿದಪ್ಪ ವಾಡೆದ, ಶಿವಕಾಂತ ಸಿಂಗೆ, ಯಶವಂತರಾಯಗೌಡ ಪಾಟೀಲ, ರುಕ್ಮೂದ್ದೀನ್ ಕೊಳ್ಳೂರ, ಅರ್ಜುನ ಕುಂಬಾರ, ಗೌಡಪ್ಪ ಪಾಟೀಲ, ಭಾಗಪ್ಪ ಪೂಜಾರಿ, ಚಂದ್ರಶಾ ಬಿದನೂರ ಕೆರಕನಳ್ಳಿ ಸೇರಿದಂತೆ ಅನೇಕರು ಇದ್ದರು.