ಸಾರಾಂಶ
ಶಿರಹಟ್ಟಿ: ನಿಮ್ಮೆಲ್ಲರ ಸಾಧನೆ ತಾಲೂಕು, ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಮ್ಮೆ ತರುವ ಜತೆಗೆ ಇತರ ಮಕ್ಕಳಿಗೆ ಮಾದರಿಯಾಗಿದೆ. ಪ್ರತಿಭಾನ್ವಿತರೆಲ್ಲ ನಮ್ಮೂರಿನ ಆಸ್ತಿ ಇದ್ದಂತೆ. ನಿಮ್ಮ ಯಶಸ್ಸು ನಮಗೆಲ್ಲರಿಗೂ ಹೆಮ್ಮೆ ತಂದಿದೆ ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಹೇಳಿದರು.
ಪಟ್ಟಣದ ತಮ್ಮ ಕಾರ್ಯಾಲಯದಲ್ಲಿ ರಾಜ್ಯ ಪ್ರಶಸ್ತಿ ಪಡೆದ ಶಿಕ್ಷಕಿ ರತ್ನಾ ಬದಿ, ಯುಪಿಎಸ್‌ಸಿ ಪರೀಕ್ಷೆಯಲ್ಲಿ ೩೪೩ನೇ ಶ್ರೇಣಿಯೊಂದಿಗೆ ತೇರ್ಗಡೆಯಾದ ಯಲ್ಲಪ್ಪ ಗೋಶೆಲ್ಯನವರ ಹಾಗೂ ೩೧ನೇ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಪಾಲ್ಗೊಂಡು ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಜೀವಿ ಪರಿಸರ ವ್ಯವಸ್ಥೆ ಅರ್ಥ ಅರ್ಥಮಾಡಿಕೊಳ್ಳೋಣ ಎಂಬ ವಿಷಯ ಮಂಡಣೆ ಮಾಡಿದ ೯ನೇ ತರಗತಿ ವಿದ್ಯಾರ್ಥಿನಿ ಪೂಜಾ ಭರಮಪ್ಪ ಸ್ವಾಮಿ ಅವರನ್ನು ಸನ್ಮಾನಿಸಿ ಮಾತನಾಡಿದರು.ವಿದ್ಯೆ ಯಾರ ಸ್ವತ್ತು ಅಲ್ಲ. ಪ್ರತಿಯೊಬ್ಬರಲ್ಲಿ ವಿಶೇಷ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕರ್ತವ್ಯ ಶಿಕ್ಷಕರ ಹಾಗೂ ಪಾಲಕರ ಆದ್ಯ ಕರ್ತವ್ಯವಾಗಿದೆ.ಅವಕಾಶಗಳು ತಾನಾಗಿಯೇ ಬರುವದಿಲ್ಲ. ಅದಕ್ಕೆ ನಮ್ಮ ಶ್ರಮ ಹಾಗೂ ಛಲ ಅಗತ್ಯ.ವಿಧ್ಯಾರ್ಥಿಗಳು ಏಕಾಗ್ರತೆಯಿಂದ ಹಾಗೂ ಅತ್ಮವಿಶ್ವಾಸದಿಂದ ಏನನ್ನಾದರೂ ಸಾಧಿಸಲು ಸಾಧ್ಯ. ವಿಷಾದಕರ ಸಂಗತಿ ಎಂದರೆ ಮಕ್ಕಳ ಬಹುತೇಕ ಸಮಯ ಮೊಬೈಲ್ ಹಾಗೂ ದೃಶ್ಯಮಾಧ್ಯಮದತ್ತ ಹೆಚ್ಚು ವ್ಯಯವಾಗುತ್ತಿದೆ. ಇದು ಅತ್ಯಂತ ನೋವಿನ ಸಂಗತಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ನಮ್ಮ ಗ್ರಾಮೀಣ ಪ್ರತಿಭೆಗಳಾದ ಯಲ್ಲಪ್ಪ ಗೋಶಲ್ಯನವರ ಸತತ ಅಧ್ಯಯನದಿಂದ ಇಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು,ಇದೇ ರೀತಿ ವಿದ್ಯಾನಗರದ ನಿವಾಸಿ ಪೂಜಾ ಭರಮಪ್ಪ ಸ್ವಾಮಿ ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಜರುಗಿದ ರಾಷ್ಟ್ರಮಟ್ಟದ ವಿಜ್ಞಾನ ಸಮಾವೇಶದಲ್ಲಿ ಪಾಲ್ಗೊಂಡು ಪ್ರಶಸ್ತಿ ಪತ್ರ ಪಡೆದಿದ್ದಾರೆ. ಇಂತಹ ಸಾಧನೆ ಸುಲಲಿತವಾಗಿ ಲಭಿಸುವುದಿಲ್ಲ.ಅದಕ್ಕೆ ಸತತ ಪರಿಶ್ರಮ ಹಾಗೂ ಸಾಧನೆ ಮಾಡಬೇಕೆಂಬ ನಮ್ಮಲ್ಲಿ ಆತ್ಮಸ್ಥೆರ್ಯ ಅಗತ್ಯ ಎಂದು ಹೇಳಿದರು.ಬಿಜೆಪಿ ಮುಖಂಡ ಬಸವರಾಜ ಪಲ್ಲೇದ ಮಾತನಾಡಿ, ಮಕ್ಕಳಿಗಾಗಿ ಆಸ್ತಿ ಮಾಡಬೇಡಿ.ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂಬ ನಿಟ್ಟಿನಲ್ಲಿ ಪ್ರತಿಯೋರ್ವ ಪಾಲಕರು ಅರಿತುಕೊಳ್ಳಬೇಕು. ಈ ನಮ್ಮ ಭಾಗದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಮೂಲ ಸೌಕರ್ಯದ ಕೊರತೆಯಿಂದ ಶೈಕ್ಷಣಿಕ ಪ್ರತಿಗೆ ಹಿನ್ನಡೆಯಾಗಿದೆ. ಮಕ್ಕಳಿಗೆ ಶಿಕ್ಷಣ ನೀಡುವುದೇ ನಿಜವಾದ ಆಸ್ತಿ ಎಂದು ಶಿಕ್ಷಣದ ಮಹತ್ವ ಪ್ರತಿಪಾದಿಸಿದರು.
ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಯಲ್ಲಿ ಹೆಚ್ಚು ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆ ಆಗುತ್ತಿದ್ದು, ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ನುರಿತ ಶಿಕ್ಷಕರು, ಹಂತ ಹಂತ ಬೋಧನಾ ವಿಧಿ,ಗ್ರಂಥಾಲಯ, ಗಣಕಯಂತ್ರ ಸೇರಿದಂತೆ ಹಲವಾರು ಯೋಜನೆ ಸರ್ಕಾರಿ ಶಾಲೆಯಲ್ಲಿ ಕಾಣಬಹುದು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಉದ್ದೇಶ ಕೂಡ ಶಿಕ್ಷಣ ವ್ಯವಸ್ಥೆಯಲ್ಲಿ ನೂತನ ಪ್ರಯೋಗ ತರುವಂತಹ ವಿನೂತನ ಪ್ರಯೋಗ ನಡೆಯುತ್ತಿದೆ. ಈ ಕುರಿತು ಪ್ರಚಾರ ಸಹ ಅಗತ್ಯವಾಗಿದೆ ಎಂದು ಹೇಳಿದರು.ಶಿಕ್ಷಕಿ ರತ್ನಾ ಬದಿ, ಯಲ್ಲಪ್ಪ ಗೋಶೆಲ್ಯನವರ, ಪೂಜಾ ಭರಮಪ್ಪ ಸ್ವಾಮಿ, ಜಾನು ಲಮಾಣಿ, ಫಕ್ಕೀರೇಶ ರಟ್ಟಿಹಳ್ಳಿ, ನಾಗರಾಜ ಲಕ್ಕುಂಡಿ, ಸಂದೀಪ ಕಪ್ಪತ್ತನವರ ಮಾತನಾಡಿದರು. ನಂದಾ ಪಲ್ಲೇದ, ಗೂಳಪ್ಪ ಕರಿಗಾರ, ಬಸವರಾಜ ತುಳಿ, ಪರಶುರಾಮ ಡೊಂಕಬಳ್ಳಿ, ಅಶೋಕ ವರವಿ, ರಾಮಣ್ಣ ಕಂಬಳಿ, ಸಂಜೀವ ಸೋಗಿನ, ಬಸವರಾಜ ಶಾಲಿ, ಬಸವರಾಜ ವಡವಿ, ಚಂದ್ರಕಾಂತ ಸ್ವಾಮಿ, ಗೀತಾ ಹಲಸೂರ, ಪ್ರವೀಣ ಸ್ವಾಮಿ, ವೀರಣ್ಣ ಅಂಗಡಿ, ಮಲ್ಲು ಕಬಾಡಿ ಇದ್ದರು.