ರಾಯಚೂರಲ್ಲಿ ಸೂರ್ಯನ ‘ಉರಿ’ 42.7 ಡಿಗ್ರಿ ತಾಪಮಾನ ದಾಖಲು

| Published : Mar 20 2025, 01:17 AM IST

ಸಾರಾಂಶ

ರಾಯಚೂರು ಜಿಲ್ಲೆಯಲ್ಲಿ ಮತ್ತೆ ಗರಿಷ್ಠ ತಾಪಮಾನ ಬುಧವಾರ ದಾಖಲಾಗಿದೆ. 42.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದ್ದು, ರಾಜ್ಯದಲ್ಲೇ ಅತ್ಯಧಿಕ ತಾಪಮಾನವಾಗಿದೆ.

ಕನ್ನಡಪ್ರಭ ವಾರ್ತೆ ರಾಯಚೂರು

ಜಿಲ್ಲೆಯಲ್ಲಿ ಮತ್ತೆ ಗರಿಷ್ಠ ತಾಪಮಾನ ಬುಧವಾರ ದಾಖಲಾಗಿದೆ. 42.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದ್ದು, ರಾಜ್ಯದಲ್ಲೇ ಅತ್ಯಧಿಕ ತಾಪಮಾನವಾಗಿದೆ.

ಬೇಸಿಗೆಯ ಬಿರುಬಿಸಿಲಿನ ಹೊಡೆತ ಆರಂಭಗೊಂಡಿದೆ. ಬಿಸಿಲ ನಾಡಿನಾದ್ಯಂತ ಉಷ್ಣಗಾಳಿಯ ಪರಿಣಾಮ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ಮಂಗಳವಾರ ಕಲಬುರಗಿಯಲ್ಲಿ 42.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು. ಬುಧವಾರವೂ ಸಹ ಕಲ್ಯಾಣ ಕರ್ನಾಟಕ ಭಾಗದಲ್ಲಿ ಗರಿಷ್ಠ ತಾಪಮಾನ ಮುಂದುವರೆದಿದೆ. ಇದರಿಂದಾಗಿ ಜಿಲ್ಲೆ ಜನರು ಬೆಳಗ್ಗೆಯಿಂದಲೇ ಸೂರ್ಯನ ತಾಪವನ್ನು ಅನುಭವಿಸುವಂತಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ತಾಪಮಾನದಿಂದಾಗಿ ಬಿಸಿಲೂರಿನ ಮಂದಿ ಕಂಗಾಲಾಗಿದ್ದು, ಮನೆಯನ್ನು ಬಿಟ್ಟು ಬರಲು ಹಿಂದೇಟು ಹಾಕುತ್ತಿದ್ದಾರೆ.

ಕಳೆದ 24 ಗಂಟೆಗಳಲ್ಲಿ ರಾಯಚೂರು ಜಿಲ್ಲೆಯಲ್ಲಿ 42.7 ಡಿ.ಸೆ., ಬೀದರ್ ಮತ್ತು ಬಾಗಲಕೋಟೆಯಲ್ಲಿ 41.9 ಡಿ.ಸೆ, ಬೆಳಗಾವಿಯಲ್ಲಿ 41.8, ಕಲಬುರಗಿಯಲ್ಲಿ 41.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ರಾಜ್ಯದ 17 ಜಿಲ್ಲೆಗಳಲ್ಲಿ 40 ಡಿ.ಸೆ.ಗೂ ಅಧಿಕ ತಾಪಮಾನ ದಾಖಲುಗೊಂಡಿದೆ.

ಉಷ್ಣಗಾಳಿ, ಕನಿಷ್ಠ ತಾಪಮಾನದ ಏರಿಕೆ ಹಾಗೂ ಆರ್ದ್ರತೆ ಪ್ರಮಾಣವು ಹೆಚ್ಚಾಗಿರುತ್ತಿರುವುದರಿಂದ ವಾತಾವರಣದಲ್ಲಿ 1 ರಿಂದ 2 ಡಿ.ಸೆ.ಬಿಸಿಲು ಜಾಸ್ತಿ ಯಾಗುತ್ತಿದೆ. ಬೇಸಿಗೆಯ ಬಿಸಿಲು ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಡಳಿತ ಈಗಾಗಲೇ ಕಟ್ಟೆಚ್ಚರಿಕೆಯ ಸಂದೇಶ ನೀಡಿದೆ.