ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನಾವೆಲ್ಲರೂ ಹಿಂದೂಗಳು, ನಮಗೆ ಎಲ್ಲ ಸ್ವಾಮೀಜಿಗಳ ಬಗ್ಗೆ ಭಕ್ತಿಭಾವ ಗೌರವವಿದೆ. ಆದರೆ, ವಕ್ಫ್ ಬೋರ್ಡ್ ವಿರುದ್ಧ ನಡೆಯುತ್ತಿರುವ ಹೋರಾಟ ರಾಜಕೀಯವಾಗಿದ್ದು, ರಾಜಕೀಯ ಪ್ರೇರಿತವಾಗಿ ಒಂದು ಪಕ್ಷ ಹೋರಾಟ ಮಾಡುವ ಸಂದರ್ಭದಲ್ಲಿ ಆ ಹೋರಾಟಕ್ಕೆ ಮಠಾಧೀಶರು ಬೆಂಬಲಿಸುವುದು ಸರಿಯಲ್ಲ ಎಂದು ಮಾಜಿ ಶಾಸಕ ಪ್ರೊ.ರಾಜು ಆಲಗೂರ ಕಿಡಿಕಾರಿದರು.ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯದಲ್ಲಿ ಬಿಜೆಪಿ ನಾಯಕರು ವಕ್ಫ್ ವಿಷಯದಲ್ಲಿ ಸಂಪೂರ್ಣ ರಾಜಕಾರಣ ಮಾಡುತ್ತಿದ್ದಾರೆ. ಮಹಾರಾಷ್ಟ್ರ ಹಾಗೂ ಕರ್ನಾಟಕ ಉಪ ಚುನಾವಣೆ ಹಿನ್ನೆಲೆಯಲ್ಲಿ ಈ ವಿಷಯವನ್ನು ರಾಜಕೀಯ ಮಾಡಿ ಅದರ ಲಾಭ ಪಡೆಯುವ ಹುನ್ನಾರ ನಡೆಸಿದ್ದು, ಈ ಹೋರಾಟಕ್ಕೆ ಮಠಾಧೀಶರು ಬೆಂಬಲ ನೀಡುವುದು ಸರಿಯಲ್ಲ ಎಂದು ಹೇಳಿದರು.
ವಕ್ಫ್ ಎನ್ನುವುದನ್ನೇ ರದ್ದುಗೊಳಿಸಲು ಬಿಜೆಪಿ ಮುಂದಾಗಿದೆ, ವಿಶ್ವ ಹಿಂದೂ ಪರಿಷತ್, ಭಜರಂಗದಳ ಮೊದಲಾದ ಹಿಂದೂಪರ ಸಂಘಟನೆಗಳ ಪಿತೂರಿ ಈ ವಿಷಯದಲ್ಲಿ ಅಡಗಿದೆ ಎಂದರು.ಜೆಪಿಸಿ ಅಧ್ಯಕ್ಷರು ಬರುತ್ತಿದ್ದಾರೆ. ಆದರೆ ನಾವು ಅವರನ್ನು ಭೇಟಿ ಮಾಡುವ ಉದ್ದೇಶ ನಮಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಯಾವ ನಿಯೋಗದೊಂದಿಗೆ ಅವರನ್ನು ಭೇಟಿ ಮಾಡುತ್ತಿಲ್ಲ. ಅವರು ಒಂದೇ ಪಕ್ಷದ ಪರವಾಗಿ ಬರುತ್ತಿದ್ದಾರೆ. ಅದರ ಬದಲು ಎಲ್ಲ ಸದಸ್ಯರ ಸಮ್ಮುಖದಲ್ಲಿ ಅವರು ಬರುತ್ತಿದ್ದರೆ ನಾವೇ ಮೊದಲು ಅವರನ್ನು ಭೇಟಿ ಮಾಡುತ್ತಿದ್ದೆವು. ಆದರೆ, ರಾಜಕೀಯವಾಗಿ ಬರುತ್ತಿದ್ದಾರೆ. ಹೀಗಾಗಿ ಅವರನ್ನು ಭೇಟಿ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ ಮಾನಿಪ್ಪಾಡಿ ವರದಿ ಆಧರಿಸಿ ಒಂದಂಶವನ್ನೂ ಸಂಸತ್ತಿನಲ್ಲಿ ಪ್ರಶ್ನೆ ಮಾಡದೇ ಈ ಬಗ್ಗೆ ಪ್ರಶ್ನೆ ಮಾಡಿದ್ದೇನೆ ಎಂದು ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸುವ ಕೆಲಸವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಸಂಸದೆ ಶೋಭಾ ಕರಂದ್ಲಾಜೆ ಕೇಳಿದ ಪ್ರಶ್ನೆ ಹಾಗೂ ಸುದೀರ್ಘವಾದ ಸಚಿವರ ಉತ್ತರವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಪ್ರಶ್ನೆಯಲ್ಲಿ ಎಲ್ಲಿಯೂ ಅನ್ವರ ಮಾನಿಪ್ಪಾಡಿ ಅವರ ವರದಿ ಉಲ್ಲೇಖಿಸಿಲ್ಲ. ಆದರೂ ಈ ವರದಿ ಹಿನ್ನೆಲೆಯಲ್ಲಿ ನಾನು ಪ್ರಶ್ನೆ ಮಾಡಿರುವೆ ಎಂದು ಸುಳ್ಳು ಹೇಳುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ. ವಿಜಯಪುರ ಜನರು ಮುಗ್ದರು, ಏನೂ ಹೇಳಿದರೂ ನಂಬುತ್ತಾರೆ ಎಂದು ಈ ರೀತಿ ಸುಳ್ಳು ಹೇಳುವುದು ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಶೋಭೆಯಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಡಾ.ಗಂಗಾಧರ ಸಂಬಣ್ಣಿ, ವಸಂತ ಹೊನಮೋಡೆ ಮುಂತಾದವರು ಇದ್ದರು.