ನಾರಶೆಟ್ಟಿಹಳ್ಳಿಯಲ್ಲಿ ಸ್ಥಗಿತಗೊಂಡಿದ್ದ ಸರ್ಕಾರಿ ಶಾಲೆ ಪುನರಾರಂಭ

| Published : Aug 02 2024, 12:51 AM IST

ಸಾರಾಂಶ

ನಾರಶೆಟ್ಟಿಹಳ್ಳಿ ಗ್ರಾಮದಲ್ಲಿ ಕಳೆದ 7 ವರ್ಷಗಳಿಂದ ಮಕ್ಕಳ ದಾಖಲಾತಿಗಳಿಲ್ಲದೆ ಸ್ಥಗಿತಗೊಂಡಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಪುನರ್‌ ಉದ್ಘಾಟಿಸಲಾಯಿತು.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಗ್ರಾಮಕ್ಕೊಂದು ಕೆರೆ, ಊರಿಗೊಂದು ಶಾಲೆ ಇದ್ದಾಗ ಅಂತಹ ಗ್ರಾಮ ಲವಲವಿಕೆಗಳಿಂದ ತುಂಬಿರುವುದು. ಮಕ್ಕಳ ದಾಖಲಾತಿ ಇಲ್ಲದೆ ಸ್ಥಗಿತಗೊಂಡಿದ್ದ ಶಾಲೆ ಪುನರಾರಂಭ ಗೊಳ್ಳುತ್ತಿರುವುದು ಗ್ರಾಮದ ಜನತೆಗೆ ಸಂತಸ ತಂದಿದೆ ಎಂದು ಇದೇ ಶಾಲೆ ಹಳೆಯ ವಿದ್ಯಾರ್ಥಿ ಮತ್ತು ಇದೇ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕ ಜಯಪ್ಪ ಹೇಳಿದರು.

ಅವರು ಗುರುವಾರ ತಾಲೂಕಿನ ನಾರಶೆಟ್ಟಿಹಳ್ಳಿ ಗ್ರಾಮದಲ್ಲಿ ಕಳೆದ 7ವರ್ಷಗಳಿಂದ ಮಕ್ಕಳ ದಾಖಲಾತಿ ಗಳಿಲ್ಲದೆ ಸ್ಥಗಿತ ಗೊಂಡಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಉದ್ಘಾಟನೆ ನೆರವೇರಿಸಿ ಮಾತನಾಡಿ, ನಾನು ಇದೇ ಗ್ರಾಮದವನಾಗಿದ್ದು ಇದೇ ಶಾಲೆಯಲ್ಲಿ ವಿದ್ಯಾಭ್ಯಾಸಮಾಡಿ ಶಿಕ್ಷಕನಾಗಿ ಮುಖ್ಯ ಶಿಕ್ಷಕನಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ಥಗಿತ ಗೊಂಡಿದ್ದ ಶಾಲೆ ಉದ್ಘಾಟಿಸುವ ಸೌಭಾಗ್ಯ ನನಗೆ ದೊರೆತ್ತಿದ್ದು ಇದು ನನ್ನ ಅದೃಷ್ಟವಾಗಿದೆ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಡಾ.ಎಸ್.ಶಂಕರಪ್ಪ ಮಾತನಾಡಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆಯುವುದಕ್ಕಿಂತ 12 ವರ್ಷದ ಮೊದಲೇ ಅಂದರೆ 1934ರಲ್ಲಿ ಆರಂಭಗೊಂಡ ಶಾಲೆಗೆ 82 ವರ್ಷ ಸಂದಿವೆ. ಈ ಗ್ರಾಮದ ವಿದ್ಯಾರ್ಥಿಗಳು ಆಟೋ ಗಳಲ್ಲಿ ಚನ್ನಗಿರಿ ಪಟ್ಟಣದ ಶಾಲೆಗೆ ಹೋಗಬೇಕಾಗಿತ್ತು ಗ್ರಾಮದ ಜನರ ಒತ್ತಾಯದ ಮೇರೆಗೆ ಮಕ್ಕಳನ್ನು ದಾಖಲಾತಿ ಮಾಡುತ್ತೇವೆ ಎಂದು ಮನವಿಯನ್ನು ಮಾಡಿಕೊಂಡಿದ್ದರ ಮೇರೆಗೆ ಶಾಲೆ ಆರಂಭಿಸಲಾಗಿದೆ. ಶಾಲೆ ಆರಂಭಕ್ಕೆ ಗ್ರಾಮದ ಜನರು ಸಹಕಾರ ನೀಡಿದ್ದಕ್ಕಾಗಿ ಅಭಿನಂಧಿಸಿದರು.

ಇದೇ ವೇಳೆ ಶಾಲೆಗೆ ದಾಖಲಾದ ಎಲ್ಲಾ ಮಕ್ಕಳಿಗೂ ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಿಸಲಾಯಿತು. ಮಧ್ಯಾಹ್ನದ ಬಿಸಿ ಊಟಕ್ಕೆ ಲಾಡು, ಪಾಯಸ, ಚಿತ್ರನ್ನವನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಶಿಕ್ಷಕಿ ಸುಧಾ, ಗ್ರಾಪಂ ಸದಸ್ಯ ನಾಗರಾಜ್, ಗ್ರಾಮದ ಪ್ರಮುಖರಾದ ಕರಿಸಿದ್ದಪ್ಪ, ಜಗದೀಶ್, ನಂಜಪ್ಪ, ಕುಮಾರ್, ಮಂಜಪ್ಪ, ಕಾಂತೇಶ್, ಪ್ರಭು, ರಾಜಪ್ಪ ಮತ್ತು ವಿದ್ಯಾರ್ಥಿಗಳ ಪೋಷಕರುಗಳು ಭಾಗವಹಿಸಿದ್ದರು.