ಸಮಾಜದ ಸ್ವಾಮೀಜಿಗಳು ಮುಖಂಡರ ಭಿನ್ನಾಭಿಪ್ರಾಯ ಸಲ್ಲದು

| Published : Oct 11 2024, 11:46 PM IST

ಸಮಾಜದ ಸ್ವಾಮೀಜಿಗಳು ಮುಖಂಡರ ಭಿನ್ನಾಭಿಪ್ರಾಯ ಸಲ್ಲದು
Share this Article
  • FB
  • TW
  • Linkdin
  • Email

ಸಾರಾಂಶ

ಜನಾಂಗದ ಪಾಲ್ಗೊಳ್ಳುವಿಕೆ ಮತ್ತು ಮಠಾಧೀಶರುಗಳ ಸಹಕಾರದಿಂದ ಕುಂಚಿಟಿಗರು ಸಾಮಾಜಿಕ ಮೀಸಲಾತಿ ಪಡೆಯಲು ಸಾಧ್ಯ ಎಂದು ಶ್ರೀಕ್ಷೇತ್ರ ಕುಂಚಗಿರಿ ಹೊಸದುರ್ಗ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀಶಾಂತವೀರ ಸ್ವಾಮೀಜಿ ಕರೆ ನೀಡಿದರು.

ಕನ್ನಡಪ್ರಭವಾರ್ತೆ ಮಧುಗಿರಿ

ಜನಾಂಗದ ಪಾಲ್ಗೊಳ್ಳುವಿಕೆ ಮತ್ತು ಮಠಾಧೀಶರುಗಳ ಸಹಕಾರದಿಂದ ಕುಂಚಿಟಿಗರು ಸಾಮಾಜಿಕ ಮೀಸಲಾತಿ ಪಡೆಯಲು ಸಾಧ್ಯ ಎಂದು ಶ್ರೀಕ್ಷೇತ್ರ ಕುಂಚಗಿರಿ ಹೊಸದುರ್ಗ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀಶಾಂತವೀರ ಸ್ವಾಮೀಜಿ ಕರೆ ನೀಡಿದರು.

ತಾಲೂಕಿನ ಲಕ್ಷೀದೇವಿಪುರ ಗ್ರಾಮದಲ್ಲಿ ಗುರುವಾರ ನಡೆದ ಶ್ರೀಲಕ್ಷ್ಮೀ ದೇವಸ್ಥಾನದ ಕಳಸ ಪ್ರತಿಷ್ಠಾಪನೆ, ಮಹಾದ್ವಾರ ಉದ್ಘಾಟನಾ ಹಾಗೂ ಧಾರ್ಮಿಕ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಭಕ್ತರು ಹಾಗೂ ಮಠಗಳ ನಡುವಿನ ಸಂವಾದ ಸಾಧ್ಯವಾಗದೆ ಒಡಕು ಮೂಡಿದೆ. ಇದರಿಂದ ಸಮಸ್ಯಗಳು ಬಗೆ ಹರಿಯದೆ ಹಾಗೆ ಉಳಿದಿವೆ. ಜನಾಂಗದ ಮುಖಂಡರು ಹಾಗೂ ಭಕ್ತರು ಹಾಗೂ ಸ್ವಾಮೀಜಿಗಳು ಪರಸ್ಪರ ಭಿನ್ನಾಭಿಪ್ರಾಯ ತೊರೆದು ನಮ್ಮ ಸಮಾಜದ ಏಳಿಗೆಗೆ ಒಗ್ಗಟ್ಟಾಗಿ ವಿಚಾರಗಳನ್ನು ಒಮ್ಮತದಿಂದ ಬಗೆಹರಿಸಿಕೊಳ್ಳಲು ಮುಂದಾಗಬೇಕು. ಸಣ್ಣಪುಟ್ಟ ಸಮುದಾಯಗಳು ಯಾವುದೇ ಗೊಂದಲವಿಲ್ಲದೆ ಒಗ್ಗಟ್ಟಾಗುತ್ತಿವೆ. ಇದನ್ನು ನೋಡಿ ನಮ್ಮ ಸಮಾಜದ ಬಂಧುಗಳು ಸಂಘಟಿತರಾಗದಿದ್ದರೆ ಮಠಾಧೀಶರಾದ ನಾವುಗಳು ಪ್ರತಿಷ್ಠೆ ಬಿಡದಿದ್ದರೆ ನಮ್ಮಲ್ಲಿರುವ ಬಡವರಿಗೆ ನಾವೇ ವಂಚಿಸಿದಂತಾಗುತ್ತದೆ. ಈ ವಿಚಾರವನ್ನು ಕಂಚಿಟಿಗ ಸಂಘಟನೆಗಳು ಸರಿಯಾಗಿ ಅರ್ಥ ಮಾಡಿಕೊಂಡು ಮಠಾಧೀಶರನ್ನು ಪರಸ್ಪರ ಒಗ್ಗೂಡಿಸುವ ಕೆಲಸ ಮಾಡಬೇಕೆ ಹೊರೆತು ಸ್ವಾಮಿಗಳ ನಡುವೆ ಬಿನ್ನಾಭಿಪ್ರಾಯಗಳನ್ನು ಬಿತ್ತಿ ಬಿಕ್ಕಟ್ಟು ಉಂಟು ಮಾಡುವ ಕೆಲಸ ಮಾಡದಿರಿ ಎಂದರು.

ಈ ಹಿಂದಿನ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಕುಲ ಶಾಸ್ತ್ರ ಅಧ್ಯಯನಕ್ಕೆ ನಮ್ಮ ಕೋರಿಕೆಯಂತೆ ಹಣ ಬಿಡುಗಡೆ ಮಾಡಿ ಅವಕಾಶ ಮಾಡಿಕೊಟ್ಟಿದ್ದರು. ಇದು ಈಗಾಗಲೇ ಸರ್ಕಾರದ ಗಮನದಲ್ಲಿದ್ದು ಕುಲಶಾಸ್ತ್ರ ಅಧ್ಯಯನದ ಯಥಾವತ್ ಜಾರಿಗೆ ಸಂಘಟನೆಗಳು , ಮಠಾಧೀಶರು ಪ್ರಯತ್ನಿಸಬೇಕು. ಇಂದಿನ ಪರಿಸ್ಥಿತಿಯಲ್ಲಿ ಸಂಘಟಿತರಾಗಿ ಸಮಾವೇಶಗಳನ್ನು ನಡೆಸಿ ಒಗ್ಗಟ್ಟು , ಬಲವನ್ನು ಸಮಾಜಕ್ಕೆ ತುಂಬಿ ಸಾಮಾಜಿಕ ನ್ಯಾಯ ಪಡೆಯುವ ಕೆಲಸ ಮಾಡಬೇಕಿದೆ. ಈ ಹಿಂದೆ ನಮ್ಮಲ್ಲಿ ಐದಾರು ಮಂದಿ ಶಾಸಕರು , ಇಬ್ಬರು ಸಂಸದರ ಇರುತ್ತಿದ್ದರು. ಪ್ರಸ್ತುತ ನಮ್ಮವರ ಸಂಖ್ಯೆ ಕ್ಷೀಣಿಸುತ್ತಿದೆ. ಆದ್ದರಿಂದ ಜಾಗೃತರಾಗಿ ಒಗ್ಗಟ್ಟಾಗಿ, ಶ್ರೀನಂಜಾವಧೂತಸ್ವಾಮಿಜಿ, ಶ್ರೀಹನುಮಂತನಾಥಸ್ವಾಮಿ ಅವರನ್ನು ದೂರುವ ಬದಲು ಅವರೊಟ್ಟಿಗೆ ಕೂತು ಸಮಾಜದ ಸ್ಥಿತಿಗತಿ ಬಿನ್ನವಸಿಕೊಂಡು ಭಿನ್ನಾಭಿಪ್ರಾಯಗಳನ್ನು ಸರಪಡಿಕೊಂಡು ಮುಂದೆ ಸಾಗಬೇಕು ಎಂದರು.

ಶ್ರೀಲಕ್ಷ್ಮೀ ದೇಗುಲದ ಪದಾಧಿಕಾರಿಗಳು ಹಾಗೂ ಭಕ್ತರು ಇದ್ದರು.ಶತಾಯುಷಿ ಲಕ್ಷ್ಮಮ್ಮ ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಯಲ್ಲಿ 625ಕ್ಕೆ 623 ಅಂಕಗಳಿಸಿದ ವಿದ್ಯಾರ್ಥಿನಿಯನ್ನು ಸ್ವಾಮಿಜಿ ಸನ್ಮಾನಿಸಿದರು.