ಸಾರಾಂಶ
ಹಾನಗಲ್ಲ: ಇಲ್ಲಿಯ ಈಜುಗೊಳ ನಿರ್ವಹಣೆ ಇಲ್ಲದೆ ಕೊಳಚೆ ಗುಂಡಿಯಂತಾಗಿದ್ದು, ಗಬ್ಬು ನಾರುತ್ತಿದೆ. ಕೊರೋನಾ ದಿನಗಳಿಂದಲೂ ಬಾಗಿಲು ಮುಚ್ಚಿದ್ದು ಇನ್ನೂ ತೆರೆದಿಲ್ಲ.ಕ್ರೀಡಾ ಇಲಾಖೆಯ ಲೆಕ್ಕದಲ್ಲಿ ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈಜುಗೊಳ ಕ್ರೀಡಾಂಗಣಕ್ಕೆ ಬಂದವರು ನಾಮಫಲಕ ನೋಡಲು ಮಾತ್ರ ಸೀಮಿತವಾಗಿದೆ. ಕೊರೋನಾ ಸಂದರ್ಭದಲ್ಲಿ ಬಾಗಿಲು ಮುಚ್ಚಿದ ಕ್ರೀಡಾಂಗಣ ಇನ್ನೂ ಕ್ರೀಡಾಸಕ್ತರಿಗಾಗಿ ತೆರೆಯದ ದುಸ್ಥಿತಿ ಬಂದಿದೆ. ಇಲ್ಲಿನ ನೀರು ಕಸ ಕಡ್ಡಿಯಿಂದ ತುಂಬಿ ನಾರುತ್ತಿದೆ. ಒಡೆದ ಕಿಟಕಿ ಗಾಜು, ಗೆದ್ದಿಲು ತಿಂದ ಬಾಗಿಲುಗಳು. ಹುಳು ಹುಪ್ಪಡಿಗಳ ತಾಣವಾಗಿದೆ.ಶುಕ್ರವಾರ ಈ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಜಿಲ್ಲಾ ಕ್ರೀಡಾಧಿಕಾರಿ ಬಿ.ಎಚ್.ಲತಾ, ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ, ಉಪಾಧ್ಯಕ್ಷೆ ವೀಣಾ ಗುಡಿ ಶೀಘ್ರ ಈ ಈಜುಗೊಳ ಕ್ರೀಡಾಪಟುಗಳಿಗೆ ಲಭ್ಯವಾಗಲಿ. ಇಂತಹ ನಿರ್ಲಕ್ಷ್ಯದಿಂದಾಗಿ ಸರಕಾರ ಒದಗಿಸಿದ ಅನುದಾನ ಸದುಪಯೋಗ ಆಗುವುದಿಲ್ಲ. ಕೋಟ್ಯಂತರ ಹಣ ಖರ್ಚು ಮಾಡಿ ನಿರ್ಮಿಸಿದ ಈಜುಗೊಳ ಕ್ರೀಡಾಸಕ್ತರಿಗೆ ಬಳಕೆಗೆ ಸಿಗದಿದ್ದರೆ ಅದರ ಪ್ರಯೋಜನವೇನು? ಶೀಘ್ರ ಕ್ರೀಡಾ ಇಲಾಖೆ ಈ ಈಜುಗೊಳ ಕ್ರೀಡಾಸಕ್ತರಿಗೆ ಸುವ್ಯವಸ್ಥಿತವಾಗಿ ಕೊಡುವಂತೆ ಮಾಡಿರಿ ಎಂದು ಕಿವಿಮಾತು ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕ್ರೀಡಾಧಿಕಾರಿ ಬಿ.ಎಚ್. ಲತಾ ಜಿಲ್ಲೆಯಲ್ಲಿ ಈಜುಗೊಳಗಳ ನಿರ್ವಹಣೆ ಹೆಚ್ಚು ಖರ್ಚಿನದಾಗಿದೆ. ಅದರಿಂದ ಆದಾಯ ಬರುತ್ತಿಲ್ಲ. ಕನಿಷ್ಠ ನಿರ್ವಹಣೆಯ ವೆಚ್ಚವೂ ಬರುತ್ತಿಲ್ಲ. ಜಿಲ್ಲೆಯಲ್ಲಿನ ಸುಸಜ್ಜಿತ ಈಜುಗೊಳಗಳಿಗೆ ಈಜು ಕ್ರೀಡಾಪಟುಗಳು ಅಷ್ಟು ಪ್ರಮಾಣದಲ್ಲಿ ಬರುತ್ತಿಲ್ಲ. ಹಾನಗಲ್ಲ ಈಜುಗೊಳ ಅಭಿವೃದ್ಧಿಗೆ ಅನುದಾನಕ್ಕಾಗಿ ಬರೆಯಲಾಗಿದೆ. ಅನುದಾನಕ್ಕಾಗಿ ಕಾಯುತ್ತಿದ್ದೇವೆ. ಅಂದಾಜು ಒಂದು ಕೋಟಿ ರು. ವೆಚ್ಚ ಇದಕ್ಕಾಗಿ ಬೇಕು, ಈ ಕ್ರೀಡಾಂಗಣದ ಅಭಿವೃದ್ಧಿಗೂ ಮುಂದಾಗುತ್ತೇವೆ ಎಂದು ಭರವಸೆ ನೀಡಿದರು.ಹಾನಗಲ್ಲಿನ ಕ್ರೀಡಾ ಇಲಾಖೆಯ ಈಜುಗೊಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. ಇದರೊಂದಿಗೆ ಕ್ರೀಡಾಂಗಣದಲ್ಲಿ ಕಬಡ್ಡಿ, ವಾಲಿಬಾಲ್, ರನ್ನಿಂಗ್ ಟ್ರ್ಯಾಕ್ ಸೇರಿದಂತೆ ಎಲ್ಲ ಅಭಿವೃದ್ಧಿಗೆ ಶೀಘ್ರ ಚಾಲನೆ ಸಿಗಲಿದೆ. ಆದರೆ ಈಜುಗೊಳದ ನಿರ್ವಹಣೆ ಗುತ್ತಿಗೆ ಪಡೆಯಲು ಕೂಡ ಯಾರೂ ಆಸಕ್ತಿ ತೋರುತ್ತಿಲ್ಲ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಚ್.ಲತಾ ಹೇಳಿದರು.